ಭಟ್ಕಳ: ಭಟ್ಕಳ ವಿಧಾನ ಸಭಾ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಯಾರಿಗೆ ಎನ್ನುವ ಗೊಂದಲ ನಿವಾರಣೆಯಾಗಿದ್ದು ಇನ್ನೇನಿದ್ದರೂ ಚುನಾವಣಾ ಆಖಾಡದಲ್ಲಿ ಪ್ರಚಾರದ ಭರಾಟೆ ಆರಂಭವಾಗಬೇಕಿದೆ.
ಈಗಾಗಲೇ ಬೇರೆ ಬೇರೆ ಹೆಸರುಗಳು ಬಿಜೆಪಿಯಲ್ಲಿ ಕೇಳಿ ಬಂದಿದ್ದರೂ ಸಹ ದೆಹಲಿ ಮಟ್ಟದಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಯಾವುದೇ ಬದಲಾವಣೆ ಮಾಡಲು ಮನಸ್ಸು ಮಾಡಿಲ್ಲ ಎನ್ನಲಾಗಿದೆ. ಇದಕ್ಕೆ ಕಾರಣವೂ ಇಲ್ಲದಿಲ್ಲ, ಕಾರವಾರ, ಕುಮಟಾ, ಭಟ್ಕಳಗಳಲ್ಲಿ ಈಗಿರುವ ಶಾಸಕರೇ ಎದುರಾಳಿಗಳಿಗೆ ನೇರ ಸ್ಪರ್ಧೆ ನೀಡಲು ಅರ್ಹರು ಎನ್ನುವ ಸಂದೇಶ ಹೈಕಮಾಂಡಿಗೆ ಹೋಗಿದ್ದೇ ಟಿಕೆಟ್ ಹಂಚಿಕೆಯಲ್ಲಿ ಯಾವುದೇ ಬದಲಾವಣೆ ಮಾಡದಿರಲು ಕಾರಣ ಎನ್ನಲಾಗಿದೆ.
ಭಟ್ಕಳ ಕ್ಷೇತ್ರದಲ್ಲಿ ಡಾ. ಚಿತ್ತರಂಜನ್ ಅವರು ಗೆಲುವು ಸಾಧಿಸುವುದರೊಂದಿಗೆ ಬಿ.ಜೆ.ಪಿ. ಖಾತೆಯನ್ನು ಪ್ರಥಮವಾಗಿ ತೆರೆದರೆ ನಂತರದ ದಿನಗಳಲ್ಲಿ ಶಿವಾನಂದ ನಾಯ್ಕ ಮುಂದುವರಿಸಿಕೊಂಡು ಹೋಗಿ ಸಚಿವರೂ ಆಗಿದ್ದು ಇತಿಹಾಸ. ಈ ಹಿಂದಿನ ಚುನಾವಣೆಯಲ್ಲಿ ಪಕ್ಷೇತರ ಶಾಸಕರಾಗಿದ್ದ ಮಂಕಾಳ ವೈದ್ಯ ಅವರನ್ನು ಸೋಲಿಸಿ ಆಯ್ಕೆಯಾಗಿದ್ದ ಸುನಿಲ್ ನಾಯ್ಕ ಅವರನ್ನೇ ಮತ್ತೆ ಕಣಕ್ಕಿಳಿಸಿದರೆ ನೇರ ಸ್ಪರ್ಧೆಯಾಗುವುದು ಖಚಿತ ಎನ್ನುವ ನಿಲುವು ರಾಷ್ಟ್ರೀಯ ನಾಯರದ್ದಾಗಿದ್ದರಿಂದಲೇ ಜಿಲ್ಲೆಯಲ್ಲಿ ಈ ಹಿಂದೆ ಇದ್ದ ಊಹಾಪೋಹಕ್ಕೆ ತೆರೆ ಬೀಳಲು ಕಾರಣ ಎನ್ನಲಾಗಿದೆ.
ಸ್ವತಃ ಸುನಿಲ್ ನಾಯ್ಕ ಅವರಿಗೇ ಟಿಕೆಟ್ ಘೋಷಣೆಯಾಗುವ ತನಕವೂ ಕೂಡ ತನಗೇ ಸ್ಪರ್ಧಿಸಲು ಅವಕಾಶ ನೀಡುತ್ತಾರೆನ್ನುವ ಖಾತರಿ ಇಲ್ಲವಾಗಿತ್ತು ಎನ್ನುವುದು ಕೂಡ ಸತ್ಯ. ಆದರೆ ದೊರೆಯಬಹುದು ಎನ್ನುವ ಹಾಗೂ ದೊರೆಯದಿದ್ದರೂ ಕೂಡಾ ಈ ಬಾರಿ ಯಾವುದೇ ಕಾರಣಕ್ಕೂ ಸ್ಪರ್ಧೆಯಿಂದ ಹಿಂದೆ ಸರಿಯುವುದಿಲ್ಲ ಎನ್ನುವ ಕಾರಣಕ್ಕೆ ಸುನಿಲ್ ನಾಯ್ಕ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದು ಅಂತೂ ಅವರಿಗೆ ಬಿಜೆಪಿ. ಮತ್ತೊಮ್ಮೆ ಸ್ಪರ್ಧೆಗೆ ಅವಕಾಶ ಮಾಡಿಕೊಡುವ ಮೂಲಕ ಅದೃಷ್ಟ ಪರೀಕ್ಷೆಗೆ ದಾರಿ ಮಾಡಿಕೊಟ್ಟಿದೆ.
ಕಾಂಗ್ರೆಸ್ ನಿಂದ ಈ ಹಿಂದೆಯೇ ಮಾಜಿ ಶಾಸಕ ಮಂಕಾಳ ಎಸ್. ವೈದ್ಯ ಅವರಿಗೆ ಟಿಕೆಟ್ ಘೋಷಣೆ ಮಾಡಿದ್ದು ಕಳೆದ ಸುಮಾರು ಒಂದು ತಿಂಗಳಿನಿಂದ ಕ್ಷೇತ್ರದಾದ್ಯಂತ ಬಿರುಸಿನ ಪ್ರಚಾರ ಕೈಗೊಂಡಿದ್ದಾರೆ. ಕಾಂಗ್ರೆಸ್ ಪಕ್ಷದ ಗ್ಯಾರೆಂಟಿ ಕಾರ್ಡ ನೀಡುವುದರಿಂದ ಹಿಡಿದು ಮಾಜಿ ಮುಖ್ಯ ಮಂತ್ರಿ ಸಿದ್ಧರಾಮಯ್ಯ ಅವರ ಸರಕಾರದಲ್ಲಿ ಮಾಡಿ ಉತ್ತಮ ಕಾರ್ಯಗಳನ್ನು ಜನತೆಗೆ ತಲುಪಿಸುವ ಕಾರ್ಯವನ್ನು ಮಾಡುತ್ತಿದ್ದಾರೆ. ಅವರೊಂದಿಗೆ ಕಾರ್ಯಕರ್ತರ ಪಡೆಯೇ ಇದ್ದು ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ.
ಒಟ್ಟಾರೆ ಬಿಜೆಪಿ ಟಿಕೆಟ್ ಘೋಷಣೆಯಾಗುವುದರೊಂದಿಗೆ ಭಟ್ಕಳ ಮತದಾರ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದ ನೇರ ಸ್ಪರ್ಧೆಗೆ ವೇದಿಕೆ ಸಿದ್ಧವಾದಂತೆ ಕಂಡು ಬರುತ್ತಿದೆ. ಇನ್ನೂ ಹಲವರು ಸ್ಪರ್ಧೆ ಮಾಡುವ ಇಚ್ಚೆಯನ್ನು ವ್ಯಕ್ತಪಡಿಸಿದ್ದರಾದರೂ ಕೂಡಾ ತ್ರಿಕೋನ ಸ್ಪರ್ಧೆ ಏರ್ಪಡುವ ಸಾಧ್ಯತೆ ಇಲ್ಲ ಎನ್ನಲಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ನೇರ ಸ್ಪರ್ಧೆ ನಡೆಯುವುದು ಖಚಿತ ಎನ್ನಲಾಗಿದೆ .
ಟಿಕೆಟ್ ಘೋಷಣೆ ಮಾಡುವುದು ಪಕ್ಷದ ಪರಮಾಧಿಕಾರ. ನಾನೂ ಓರ್ವ ಭಟ್ಕಳ ಮತದಾರ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದು ಪಕ್ಷ ಯಾರಿಗೇ ಪಕ್ಷ ಟಿಕೆಟ್ ಘೋಷಣೆ ಮಾಡಿದರೂ ಸಹ ಪಕ್ಷದ ಪರವಾಗಿ ಕೆಲಸ ಮಾಡುವುದು ನಮ್ಮ ಕರ್ತವ್ಯ. ನಾನೋರ್ವ ಪಕ್ಷದ ನಿಷ್ಟಾವಂತ ಕಾರ್ಯಕರ್ತನಾಗಿದ್ದು ಚುನಾವಣೆಯಲ್ಲಿ ಪಕ್ಷದ ಪರವಾಗಿ ನಮ್ಮ ಅಭ್ಯರ್ಥಿಯ ಗೆಲುವಿಗೆ ಶ್ರಮಿಸುತ್ತೇನೆ ಎಂದು ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಪಶ್ಚಿಮಘಟ್ಟ ಕಾರ್ಯಪಡೆಯ ಅಧ್ಯಕ್ಷ ಗೋವಿಂದ ನಾಯ್ಕ ಪ್ರತಿಕ್ರಿಯೆ ನೀಡಿದ್ದಾರೆ.