ಭಟ್ಕಳ: ಇಲ್ಲಿನ ರಾಷ್ಟ್ರೀಯ ಹೆದ್ದಾರಿ 66ರ ಅನಂತವಾಡಿ ಎಂಬಲ್ಲಿ ಗುರುವಾರ ನಸುಕಿನ 1.30 ರ ವೇಳೆಗೆ ಖಾಸಗಿ ಬಸ್ ಮುಖಾಮುಖಿ ಢಿಕ್ಕಿಯಾದ ಪರಿಣಾಮ ಮಿನಿ ಬಸ್‌ನಲ್ಲಿದ್ದ ಮದುಮಗಳು ಸೇರಿ 7 ಮಂದಿ ದಾರುಣವಾಗಿ ಸಾವನ್ನಪ್ಪಿ,25ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿರುವ ಭೀಕರ ದುರಂತ ಸಂಭವಿಸಿದೆ.
ಶಿರಸಿಯ ದಾಸನಕೊಪ್ಪದಿಂದ ಧರ್ಮಸ್ಥಳಕ್ಕೆ ದಿಬ್ಬಣ ತೆರಳುತ್ತಿದ್ದ ಮಿನಿ ಬಸ್‌ಗೆ ಹೊನ್ನಾವರ ಕಡೆ ತೆರಳುತ್ತಿದ್ದ ಬಸ್ ಢಿಕ್ಕಿಯಾಗಿ ಅವಘಡ ಸಂಭವಿಸಿದೆ.
ಗಂಭೀರ ಸ್ಥಿತಿಯಲ್ಲಿರುವ ಗಾಯಾಳುಗಳನ್ನು ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಉಳಿದ ಗಾಯಾಳುಗಳನ್ನು ಕುಂದಾಪುರ, ಮುರ್ಡೇಶ್ವರ ಮತ್ತು ಭಟ್ಕಳದ ಖಾಸಗಿ ಆಸ್ಪತ್ರೆಗಳಿಗೆ ದಾಖಲು ಮಾಡಲಾಗಿದೆ.
ಮೃತರು ದಾವಣಗೆರೆಯ ಮೂಲದ ವಧು ದಿವ್ಯಾ ಕುರ್ಡೇಕರ್, ಸುಬ್ರಹ್ಮಣ್ಯ,ಪಾಲಾಕ್ಷಿ (45),ದಿವ್ಯಾ , ಪೂಜಾ ಶೇಟ್ ,ನಾಗಪ್ಪ ಗಣಿಗಾರ್ ಎಂದು ತಿಳಿದು ಬಂದಿದೆ. ವರ ಹರೀಶ್ ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಥಳೀಯರು ರಕ್ಷಣಾ ಕಾರ್ಯಾಚರಣೆಗೆ ನೆರವು ನೀಡಿದರು. ಪೊಲೀಸರು ಸ್ಥಳಕ್ಕಾಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಹರೀಶ್ ಮತ್ತು ದಿವ್ಯಾ ಪ್ರೇಮಿಗಳಾಗಿದ್ದು ಎರಡೂ ಮನೆಯವರು ಒಟ್ಟಾಗಿ ಇಂದು ನಡೆಯಬೇಕಿದ್ದ ಮದುವೆಗಾಗಿ ಧರ್ಮಸ್ಥಳಕ್ಕೆ ತೆರಳುತ್ತಿದ್ದರು.
ಹೆಚ್ಚಿನ ವಿವರ ನಿರೀಕ್ಷಿಸಲಾಗುತ್ತಿದೆ.