Advertisement

ಭಾಸ್ಕರ ಶೆಟ್ಟಿ ಕೊಲೆ ಪ್ರಕರಣ ಆರೋಪಿ ನಿರಂಜನ್‌ ಭಟ್‌ಗೆ ಷರತ್ತು ಬದ್ಧ ತಾತ್ಕಾಲಿಕ ಜಾಮೀನು

07:56 PM Jun 24, 2020 | sudhir |

ಉಡುಪಿ: ನಾಲ್ಕು ವರ್ಷಗಳ ಹಿಂದೆ ಕರಾವಳಿ ಪ್ರದೇಶದಲ್ಲಿ ಸಂಚಲನ ಸೃಷ್ಟಿಸಿದ್ದ ಎನ್‌ಆರ್‌ಐ ಉದ್ಯಮಿ ಭಾಸ್ಕರ ಶೆಟ್ಟಿ ಕೊಲೆ ಪ್ರಕರಣದ ಆರೋಪಿಗಳಲ್ಲಿ ಒಬ್ಬರಾದ ನಿರಂಜನ್‌ ಭಟ್‌ ಅವರಿಗೆ ಇಲ್ಲಿ ಜಿಲ್ಲಾ ನ್ಯಾಯಾಲಯವು ಷರತ್ತುಬದ್ಧ ತಾತ್ಕಾಲಿಕ ಜಾಮೀನು ನೀಡಿದೆ.

Advertisement

ಜೈಲಿನಲ್ಲಿದ್ದ ನಿರಂಜನ್‌ ಭಟ್‌ ಈ ಪ್ರಕರಣದ ಮೂರನೇ ಆರೋಪಿ. ನಾಲ್ಕನೇ ಆರೋಪಿಯಾಗಿದ್ದ ನಿರಂಜನ್‌ ಭಟ್‌ ಅವರ ತಂದೆ ಶ್ರೀನಿವಾಸ್‌ ಭಟ್‌ ಕೆಲವು ದಿನಗಳ ಹಿಂದೆ ಮೃತಪಟ್ಟಿದ್ದರು.

ಸಾಕ್ಷಾಧಾರಗಳನ್ನು ನಾಶಪಡಿಸಿದ ಆರೋಪದ ಮೇಲೆ ಈ ಪ್ರಕರಣದಲ್ಲಿ ಆತನ ತಂದೆ ಮತ್ತು ಚಾಲಕ ರಾಘವೇಂದ್ರನನ್ನು ಸಹ ಬಂಧಿಸಲಾಗಿದ್ದರೂ, ಅವರನ್ನು ಒಂದು ತಿಂಗಳೊಳಗೆ ಬಿಡುಗಡೆ ಮಾಡಲಾಗಿತ್ತು.

ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣೆ ಮತ್ತು ಇತರ ಅನಾರೋಗ್ಯದ ಕಾರಣದಿಂದ ಮಾನಸಿಕವಾಗಿ ಅಸಮಾಧಾನಗೊಂಡಿದ್ದ ಆರೋಪಿ ನಿರಂಜನ್‌ ಭಟ್‌ ಅವರ ತಂದೆ ನಿಧನ ಹೊಂದಿದ್ದರು ಎನ್ನಲಾಗಿದೆ. ಮರಣ ಹೊಂದಿದ ತನ್ನ ತಂದೆಯ ಮರಣೋತ್ತರ, ಧಾರ್ಮಿಕ ಆಚರಣೆಗಳನ್ನು ಕೈಗೊಳ್ಳಲು ಆರೋಪಿಗಳಿಗೆ ಜಾಮೀನು ನೀಡುವಂತೆ ನಿರಂಜನ್‌ ಭಟ್‌ ಪರ ವಕೀಲರು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು.

ವಕೀಲರ ವಾದವನ್ನು ಆಲಿಸಿದ ಜಿಲ್ಲಾ ನ್ಯಾಯಾಲಯವು ಆರೋಪಿಯಿಂದ 5ಲ.ರೂ.ಗಳ ಬಾಂಡ್‌ ಪಡೆದು 15 ದಿನಗಳ ಷರತ್ತು ಬದ್ದ ತಾತ್ಕಾಲಿಕ ಜಾಮೀನು ಮಂಜೂರು ಮಾಡುವಂತೆ ಆದೇಶಿಸಿದೆ. ಜುಲೈ 7ಕ್ಕೆ ಜಾಮೀನು ಅವಧಿ ಮುಕ್ತಾಯಗೊಳ್ಳಲಿದೆ. ಈ ಹಿಂದೆ ಈತನ ಜಾಮೀನು ಅರ್ಜಿ ಸೆಷನ್ಸ್‌ ಕೋರ್ಟ್‌, ಹೈಕೋರ್ಟ್‌, ಸುಪ್ರೀಂ ಕೋರ್ಟ್‌ನಲ್ಲಿಯೂ ವಜಾಗೊಂಡಿತ್ತು. ತಂದೆಯ ಅಂತ್ಯಕ್ರಿಯೆಯಲ್ಲಿ ಭಾಗವಹಿಸುವ ಉದ್ದೇಶದಿಂದಾಗಿ ಈಗ ಷರತ್ತು ಬದ್ಧ ತಾತ್ಕಾಲಿಕ ಜಾಮೀನು ಮಂಜೂರುಗೊಂಡಿದೆ.

Advertisement

ಪ್ರಕರಣದ ಮುಖ್ಯ ಮತ್ತು ಮೊದಲ ಆರೋಪಿ ಮೃತ ಭಾಸ್ಕರ ಶೆಟ್ಟಿಯವರ ಪತ್ನಿ ರಾಜೇಶ್ವರಿ ಶೆಟ್ಟಿ ಈಗಾಗಲೇ ಜಾಮೀನಿನ ಮೇಲೆ ಹೊರಬಂದಿದ್ದಾರೆ. ಎರಡನೇ ಆರೋಪಿ ಮತ್ತು ಮೃತನ ಮಗ ನವನೀತ್‌ ಶೆಟ್ಟಿ ಇನ್ನೂ ಜೈಲಿನಲ್ಲಿದ್ದಾರೆ.

ಉಡುಪಿ ಮತ್ತು ದುಬೈನಲ್ಲಿ ಉದ್ಯಮಗಳನ್ನು ಹೊಂದಿದ್ದ ಭಾಸ್ಕರ ಶೆಟ್ಟಿ ಅವರನ್ನು ಜು.28, 2016 ರಂದು ಹತ್ಯೆ ಮಾಡಲಾಗಿತ್ತು. ಇಂದ್ರಾಳಿಯಲ್ಲಿರುವ ಅವರ ಮನೆಯಲ್ಲಿ ಅವರನ್ನು ಹತ್ಯೆ ಮಾಡಿ ಅನಂತರ ಶವವನ್ನು ಬೆಳ್ಮಣ್‌ಗೆ ಕೊಂಡೊಯ್ಯಲಾಗಿತ್ತು. ವೃತ್ತಿಯಲ್ಲಿ ಜ್ಯೋತಿಷಿಯೂ ಆಗಿರುವ ಆರೋಪಿ ನಿರಂಜನ್‌ ಭಟ್‌, ಮೃತ ಭಾಸ್ಕರ ಶೆಟ್ಟಿಯ ಶವವನ್ನು ಹೋಮ ಆಚರಣೆಗಳಿಗೆ ಬಳಸುವ ಹಳ್ಳದಲ್ಲಿ ಹಾಕಿ ಸುಟ್ಟುಹಾಕಿದ್ದಾನೆ ಎಂದು ಆರೋಪಿಸಲಾಗಿತ್ತು.

ಮೃತ ಭಾಸ್ಕರ ಶೆಟ್ಟಿಯ ತಾಯಿ ತನ್ನ ಮಗನ ಬಗ್ಗೆ ಉಡುಪಿ ಪೊಲೀಸರಿಗೆ ದೂರು ನೀಡಿದ್ದರು. ಆಸ್ತಿಯ ಮೇಲೆ ದಂಪತಿಗಳು ಹೊಂದಿದ್ದ ವಾದಗಳು ಮತ್ತು ತಪ್ಪುಗ್ರಹಿಕೆಯ ಬಗ್ಗೆ ಮೃತರ ತಾಯಿ ನೀಡಿದ ಸುಳಿವು ಪೊಲೀಸರಿಗೆ ಆರೋಪಿಗಳನ್ನು ಸುಲಭವಾಗಿ ಪತ್ತೆಹಚ್ಚಲು ಮತ್ತು ಅವರನ್ನು ಬಂಧಿಸಲು ಸಾಧ್ಯವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next