Advertisement

ಭಾಸ್ಕರ ಶೆಟ್ಟಿ ಕೊಲೆ ಪ್ರಕರಣ: ತನಿಖಾ ವರದಿ ಇನ್ನೂ ಪೂರ್ಣವಾಗಿಲ್ಲ!

11:20 AM Jul 28, 2017 | Karthik A |

ಉಡುಪಿ: ಉದ್ಯಮಿ ಭಾಸ್ಕರ ಶೆಟ್ಟಿ ಅವರ ಕೊಲೆ ನಡೆದು ವರ್ಷ ಒಂದಾದರೂ ತನಿಖೆ ಮಾತ್ರ ನಿರೀಕ್ಷಿತ ಮಟ್ಟದಲ್ಲಿ ಪ್ರಗತಿಯಾಗಿಲ್ಲ. ಪ್ರಸ್ತುತ ತನಿಖೆ ನಡೆಸುತ್ತಿರುವ ಸಿಐಡಿಯವರು ಹೆಚ್ಚುವರಿ ಚಾರ್ಜ್‌ಶೀಟ್‌ ಇನ್ನೂ ಸಲ್ಲಿಸಿಲ್ಲ. ಮೊದಲ ಹಂತದ ಚಾರ್ಜ್‌ ಶೀಟ್‌ ಸಲ್ಲಿಸಿದ್ದಾಗ ಇನ್ನೂ ಮಾಹಿತಿಗಳ ಕ್ರೋಡೀಕರಣ ಬಾಕಿ ಇದೆ ಎಂದು ಅಧಿಕಾರಿಗಳು ತಿಳಿಸಿದ್ದರು. ಈಗ ಕೇಳಿದರೆ, ವಿಧಿ ವಿಜ್ಞಾನ ಪ್ರಯೋಗಾಲಯದಿಂದ ಡಿಎನ್‌ಎಗೆ ಸಂಬಂಧಿಸಿ ಇನ್ನೂ ಕೆಲ ವರದಿಗಳು ಬರಬೇಕಿದ್ದು, ಅದು ಬಾರದ ಕಾರಣ ಹೆಚ್ಚುವರಿ ಚಾರ್ಜ್‌ಶೀಟ್‌ ಅನ್ನು ಇನ್ನೂ ಸಲ್ಲಿಸಿಲ್ಲ ಎಂದು ಮೂಲಗಳು ತಿಳಿಸಿವೆ.

Advertisement

ಆಸ್ತಿ – ರಾಜೇಶ್ವರಿ ಕಡೆಯವರಲ್ಲಿ
ಭಾಸ್ಕರ್‌ ಶೆಟ್ಟಿಯವರಿಗೆ ಸೇರಿದ್ದ ಶಿರಿಬೀಡು ದುರ್ಗಾ ಇಂಟರ್‌ನ್ಯಾಶನಲ್‌ ಕಟ್ಟಡ ಸಹಿತ ಅವರ ಹೆಸರಿನಲ್ಲಿದ್ದ ಮತ್ತುಳಿದ ಆಸ್ತಿಗಳು ಸದ್ಯ ರಾಜೇಶ್ವರಿ ಶೆಟ್ಟಿಯವರ ಕಡೆಯವರಲ್ಲಿ ಇದೆ. ಆಡಳಿತಕ್ಕೆ ಸಂಬಂಧಿಸಿ ತಕರಾರುಗಳಿದ್ದು, ಮೊದಲಿಗೆ ಭಾಸ್ಕರ್‌ ಶೆಟ್ಟಿಯವರ ತಾಯಿ ಗುಲಾಬಿ ಶೆಡ್ತಿ ಸಂಬಂಧಿಕರು ಶಿರಿಬೀಡು ಕಟ್ಟಡ ನೋಡಿಕೊಳ್ಳಲು ಬರುತ್ತಿದ್ದರು. ಅನಂತರ ರಾಜೇಶ್ವರಿ ಅವರ ಕಡೆಯವರು ಅದನ್ನು ಆಕ್ಷೇಪಿಸಿದ್ದರು. ಇದಕ್ಕೆ ಸಂಬಂಧಿಸಿ ದೂರು – ಪ್ರತಿ ದೂರುಗಳು ಉಡುಪಿ ನಗರ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿತ್ತು. ರಾಜೇಶ್ವರಿ ಅವರ ಪರ ಸಿವಿಲ್‌ ವಕೀಲರು ಕೋರ್ಟ್‌ ಮೂಲಕ ಮಧ್ಯಾಂತರ ಆದೇಶ ತಂದಿದ್ದರು. ಆಸ್ತಿಯನ್ನು ಜಿಪಿಎ ಹೋಲ್ಡರ್‌ ರೇಣುಕಾ ವಿಶ್ವನಾಥ ರೈ ಅವರು ಸದ್ಯಕ್ಕೆ ನೋಡಿಕೊಳ್ಳುತ್ತಿದ್ದಾರೆ. ಇಂದ್ರಾಳಿಯಲ್ಲಿರುವ ಭಾಸ್ಕರ್‌ ಶೆಟ್ಟಿಯವರ ಮನೆಗೆ ಮಾತ್ರ ಬೀಗ ಹಾಕಲಾಗಿದ್ದು, ಹಾಗೇ ಇದೆ.

ವಿಶೇಷ ಅಭಿಯೋಜಕ ನೇಮಕ – ತಡೆ
ಭಾಸ್ಕರ್‌ ಶೆಟ್ಟಿ ಕುಟುಂಬಿಕರ ಆಗ್ರಹದಂತೆ ಹಿರಿಯ ಕ್ರಿಮಿನಲ್‌ ವಕೀಲ ಎಂ. ಶಾಂತಾರಾಮ್‌ ಶೆಟ್ಟಿ ಅವರನ್ನು ಸರಕಾರವು ಪ್ರಕರಣಕ್ಕೆ ವಿಶೇಷ ಸರಕಾರಿ ಅಭಿಯೋಜಕರನ್ನಾಗಿ ನೇಮಿಸಿತ್ತು. ಇದನ್ನು ಆಕ್ಷೇಪಿಸಿ ಆರೋಪಿಗಳ ಪರ ವಕೀಲರು ಹೈಕೋರ್ಟಿನಲ್ಲಿ ದಾವೆ ಹೂಡಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್‌ ವಿಶೇಷ ಅಭಿಯೋಜಕರ ನೇಮಕಕ್ಕೆ ತಾತ್ಕಾಲಿಕ ತಡೆಯಾಜ್ಞೆ ನೀಡಿತ್ತು. ಪ್ರಸ್ತುತ ಪ್ರಕರಣಕ್ಕೆ ಹಿರಿಯ ಸರಕಾರಿ ಅಭಿಯೋಜಕಿ ಶಾಂತಿ ಬಾಯಿ ಅವರು ವಾದಿಸಲಿರುವರು.

ಸುಪ್ರೀಂ, ಹೈಕೋರ್ಟ್‌ನಲ್ಲಿ ವಿಚಾರಣೆ ಬಾಕಿ
ಆರೋಪಿಗಳಾದ ರಾಜೇಶ್ವರಿ, ನವನೀತ ಮತ್ತು ನಿರಂಜನ ಇವರು ಮಂಗಳೂರಿನ ಸಬ್‌ಜೈಲಿನಲ್ಲಿದ್ದಾರೆ. ಇವರ ಪರ ಉಡುಪಿ ನ್ಯಾಯಾಲಯದಲ್ಲಿ ಮಂಗಳೂರಿನ ವಕೀಲರಾದ ಬೆಳುವಾಯಿ ಅರುಣ್‌ ಬಂಗೇರ, ಅರುಣ್‌ ಶೆಟ್ಟಿ ವಾದಿಸಿದ್ದರು. ಉಡುಪಿ ನ್ಯಾಯಾಲಯಕ್ಕೆ ಸಲ್ಲಿಕೆಯಾಗಿದ್ದ ಎಲ್ಲ ಆರೋಪಿಗಳ ಜಾಮೀನು ಅರ್ಜಿಯೂ ತಿರಸ್ಕೃತವಾಗಿತ್ತು. ಅನಂತರದಲ್ಲಿ ರಾಜೇಶ್ವರಿಯವರ ಜಾಮೀನಿಗೆ ವಕೀಲ ಅರುಣ್‌ ಶ್ಯಾಮ್‌ ಅವರು ಹೈಕೋರ್ಟಿಗೆ ಜಾಮೀನು ಅರ್ಜಿ ಸಲ್ಲಿಸಿದ್ದರು. ಹೈಕೋರ್ಟ್‌ ಅರ್ಜಿ ತಿರಸ್ಕರಿಸಿತ್ತು. ಆಮೇಲೆ ಸುಪ್ರೀಂಕೋರ್ಟಿಗೆ ಅರ್ಜಿ ಸಲ್ಲಿಕೆಯಾಗಿದ್ದು, ಜು. 18ರಂದು ವಿಚಾರಣೆಗೆ ದಿನಾಂಕ ನಿಗದಿಯಾಗಿತ್ತು. ಅದನ್ನು ಮುಂದೂಡಲಾಗಿದೆ. ಈ ನಡುವೆ ಅನಾರೋಗ್ಯದ ನಿಮಿತ್ತ ರಾಜೇಶ್ವರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಮತ್ತೆ ಜೈಲು ಸೇರಿದ್ದರು. ನಿರಂಜನ ಭಟ್‌ ಪರ ಮಂಗಳೂರಿನ ವಕೀಲ ವಿಕ್ರಂ ಹೆಗ್ಡೆಯವರು ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಜಿಲ್ಲಾ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ತಿರಸ್ಕೃತವಾದ ಕಾರಣ ನಿರಂಜನನ ಪರ ಜಾಮೀನು ಅರ್ಜಿ ಕೂಡ ಹೈಕೋರ್ಟಿಗೆ ಸಲ್ಲಿಕೆಯಾಗಿತ್ತು. ಈ ಅರ್ಜಿಯೂ ತಿರಸ್ಕೃತಗೊಂಡಿದೆ. ನವನೀತ್‌ ಜಾಮೀನು ಅರ್ಜಿ ಉಡುಪಿ ನ್ಯಾಯಾಲಯದಲ್ಲಿ ತಿರಸ್ಕೃತವಾದ ಬಳಿಕ ಯಾವುದೇ ಮೇಲ್ಮನವಿ ಸಲ್ಲಿಕೆಯಾಗಿಲ್ಲ. ಸಾಕ್ಷ್ಯನಾಶಕ್ಕೆ ನೆರವಾದ ಆರೋಪದಲ್ಲಿ ಬಂಧಿತರಾಗಿದ್ದ ನಿರಂಜನನ ತಂದೆ ಶ್ರೀನಿವಾಸ ಭಟ್‌ (56) ಮತ್ತು ಕಾರು ಚಾಲಕ ರಾಘು (25) ಅವರಿಗೆ ಉಡುಪಿ ನ್ಯಾಯಾಲಯದಲ್ಲಿಯೇ ಜಾಮೀನು ಸಿಕ್ಕಿತ್ತು.

ಡಿಎನ್‌ಎ ತಾಳೆ-ಡೆತ್‌ ಸರ್ಟಿಫಿಕೆಟ್‌ ಬಂತು
ತನಿಖೆ ವೇಳೆ ಸಿಕ್ಕಿದ್ದ ದೇಹದ ಕುರುಹುಗಳು ಭಾಸ್ಕರ್‌ ಶೆಟ್ಟಿ ಅವರದ್ದೇ ಎನ್ನುವುದನ್ನು ಖಾತ್ರಿಪಡಿಸಲು ನ್ಯಾಯಾಧೀಶರ ಅನುಮತಿಯಂತೆ ಅವರ ತಾಯಿ, ಸಹೋದರರ ರಕ್ತದ ಮಾದರಿಯನ್ನು ಡಿಎನ್‌ಎ ಪರೀಕ್ಷೆಗೆ ಒಳಪಡಿಸಲಾಗಿತ್ತು. ಎಫ್ಎಸ್‌ಎಲ್‌ ಪ್ರಾಥಮಿಕ ವರದಿಯಲ್ಲಿ ರಕ್ತದ ಮಾದರಿಯ ಹೋಲಿಕೆ ತಾಳೆಯಾಗಿತ್ತು. ಅದರಂತೆ ಭಾಸ್ಕರ್‌ ಶೆಟ್ಟಿ ಕುಟುಂಬಿಕರು ಸಾವು ನಡೆದಿರುವುದನ್ನು ಖಚಿತಪಡಿಸಿಕೊಂಡು ಅಂತ್ಯಸಂಸ್ಕಾರದ ವಿಧಿ ವಿಧಾನಗಳನ್ನು ಮಾಡಿದ್ದರು. ವರದಿಗಳ ಆಧಾರದಲ್ಲಿ ಜು. 28ರಂದು ಭಾಸ್ಕರ್‌ ಶೆಟ್ಟಿಯವರು ನಂದಳಿಕೆಯಲ್ಲಿ ಮೃತಪಟ್ಟಿದ್ದಾರೆ ಎಂದು ಡೆತ್‌ ಸರ್ಟಿಫಿಕೆಟ್‌ ಕೂಡ ಬಂದಿದೆ.

Advertisement

Also Read This…:
►►ಉದ್ಯಮಿ ಭಾಸ್ಕರ್‌ ಶೆಟ್ಟಿ ಕೊಲೆ ಪ್ರಕರಣಕ್ಕೆ ಒಂದು ವರ್ಷ: //bit.ly/2vKmHx5

Advertisement

Udayavani is now on Telegram. Click here to join our channel and stay updated with the latest news.

Next