ಹೊಸದಿಲ್ಲಿ: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿದ್ದ 370ನೇ ವಿಧಿ ರದ್ದು ಹಾಗೂ ತ್ರಿವಳಿ ತಲಾಖ್ ನಿಷೇಧ ಕಾನೂನು ಜಾರಿಗೊಳಿಸಿ ಒಂದು ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ದೇಶಾದ್ಯಂತ ಕಾರ್ಯಕ್ರಮ ಆಯೋಜಿಸಲು ಬಿಜೆಪಿ ಸಜ್ಜಾಗಿದೆ.
ಈ ಸಂಬಂಧ ಎಲ್ಲ ರಾಜ್ಯಗಳ ಬಿಜೆಪಿ ಘಟಕದ ಅಧ್ಯಕ್ಷರು ಹಾಗೂ ಉಸ್ತುವಾರಿಗಳಿಗೆ ಬಿಜೆಪಿ ಪತ್ರ ಬರೆದಿದ್ದು, 370 ಕಾಯ್ದೆ ರದ್ದು, ತ್ರಿವಳಿ ತಲಾಖ್ ನಿಷೇಧ ಕಾನೂನು ಜಾರಿಗೊಳಿಸಿ ವರ್ಷ ಪೂರ್ಣಗೊಳ್ಳುತ್ತಿರುವ ಪ್ರಯುಕ್ತ ಏಕ್ ಭಾರತ್ ಏಕಾತ್ಮ ಭಾರತ್ ಅಭಿಯಾನದಡಿ ಜು.28ರಿಂದ ಆಗಸ್ಟ್ 3ರವರೆಗೆ ರಾಜ್ಯಗಳಲ್ಲಿ ರ್ಯಾಲಿ ಹಾಗೂ ಸಂವಾದ ಆಯೋಜಿಸಬೇಕು ಹಾಗೂ ಪ್ರಧಾನಿ ನರೇಂದ್ರ ಮೋದಿ ಸರಕಾರದ ಸಾಧನೆಗಳನ್ನು ಜನತೆಗೆ ತಿಳಿಸಬೇಕು ಎಂದು ಮನವಿ ಮಾಡಲಾಗಿದೆ.
ದೊಡ್ಡ ರಾಜ್ಯಗಳಲ್ಲಿ ಐದು ವಿಡಿಯೋ ಕಾನ್ಫರೆನ್ಸ್ ಸಮಾರಂಭ ಹಾಗೂ ಇತರೆ ರಾಜ್ಯಗಳಲ್ಲಿ ಎರಡು ವಿಡಿಯೋ ಕಾನ್ಫರೆನ್ಸ್ ಕಾರ್ಯಕ್ರಮದ ಜೊತೆಗೆ ಚಿಂತಕರು, ಸಾಮಾಜಿಕ ಕಾರ್ಯಕರ್ತರು, ಸುಶಿಕ್ಷಿತರ ಜೊತೆ ಸಂವಾದ ನಡೆಸಬೇಕು ಎಂದು ತಿಳಿಸಲಾಗಿದೆ. ಪ್ರತಿ ಜಿಲ್ಲೆಯಲ್ಲಿ 50 ಬುದ್ಧಿಜೀವಿಗಳು, ಸಾಮಾಜಿಕ ಕಾರ್ಯಕರ್ತರನ್ನು ಒಳಗೊಂಡ ತಂಡದೊಂದಿಗೆ ಕೇಂದ್ರ ಸರಕಾರದ ಸಾಧನೆಗಳ ಬಗ್ಗೆ ಚರ್ಚೆ ನಡೆಸಬೇಕು ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಈ ಸಂಬಂಧ ಆಯಾ ರಾಜ್ಯಗಳ ರಾಜಧಾನಿಯಲ್ಲಿ ಆ.3ಂದು ಸುದ್ದಿಗೋಷ್ಠಿ ನಡೆಸಲು ಉದ್ದೇಶಿಸಲಾಗಿದೆ. ಜೊತೆಗೆ ಈ ಕುರಿತು ರಾಷ್ಟ್ರಮಟ್ಟದಲ್ಲಿ ವರ್ಚುವಲ್ ರ್ಯಾಲಿ ಆಯೋಜಿಸಲು ಚಿಂತನೆ ನಡೆಸಲಾಗಿದೆ. ಜಮ್ಮು ಕಾಶ್ಮೀರ ಹಾಗೂ ಲಡಾಖ್ ಕೇಂದ್ರಾಡಳಿತ ಪ್ರದೇಶಗಳಲ್ಲಿ ಆ.5ರಂದು ಆಯೋಜಿಸುವ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಮುಖಂಡರು ಪಾಲ್ಗೊಳ್ಳಲಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಪತ್ರದಲ್ಲಿ ತಿಳಿಸಿದ್ದಾರೆ.
2019ರ ಆ.5ರಂದು ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನ ಕಲ್ಪಿಸಲಾಗಿದ್ದ 370ನೇ ವಿಧಿಯನ್ನು ರದ್ದು ಪಡಿಸಲಾಗಿತ್ತು. ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಅನ್ನು ಕೇಂದ್ರಾಡಳಿತ ಪ್ರದೇಶವಾಗಿ ಕೇಂದ್ರ ಸರಕಾರ ಘೋಷಣೆ ಮಾಡಿತ್ತು.