Advertisement

ಮರು ನೋಂದಣಿ ತಪ್ಪಿಸಲಿದೆ “ಭಾರತ್‌ ಸೀರೀಸ್‌’ : ಸೆಪ್ಟೆಂಬರ್ 15 ರಿಂದ ಜಾರಿ

01:41 AM Aug 29, 2021 | Team Udayavani |

ಹೊಸದಿಲ್ಲಿ: ದೇಶದಲ್ಲಿ ಹೊಸ ವಾಹನಗಳಿಗೆ “ಭಾರತ್‌ ಸೀರೀಸ್‌’ (ಬಿಎಚ್‌-ಸೀರೀಸ್‌) ಎಂಬ ಹೊಸ ನೋಂದಣಿ ಗುರುತು ಪರಿಚಯಿಸಿರುವುದಾಗಿ ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಶನಿವಾರ ಪ್ರಕಟಿಸಿದೆ.

Advertisement

ಬಿಎಚ್‌ ಗುರುತು ಹೊಂದಿರುವ ವಾಹನಗಳ ಮಾಲಕರು ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ವಾಸ್ತವ್ಯ ಬದಲಾಯಿಸಿದ ಸಂದರ್ಭದಲ್ಲಿ ಹೊಸದಾಗಿ ನೋಂದಣಿ ಮಾಡಿಸಿ ಕೊಳ್ಳಬೇಕಾಗಿಲ್ಲ. ಯೋಧರು, ಕೇಂದ್ರ – ರಾಜ್ಯ ಸರಕಾರಿ ಉದ್ಯೋಗಿ ಗಳು, ಸರಕಾರಿ ಸ್ವಾಮ್ಯದ ಉದ್ದಿಮೆಗಳ ಉದ್ಯೋಗಿಗಳು ಹಾಗೂ 4 ಅಥವಾ ಅದಕ್ಕಿಂತ ಹೆಚ್ಚು ರಾಜ್ಯಗಳಲ್ಲಿ ಕಚೇರಿ ಇರುವ ಖಾಸಗಿ ಸಂಸ್ಥೆಗಳ ಉದ್ಯೋಗಿಗಳು ಇದನ್ನು ಐಚ್ಛಿಕವಾಗಿ ಪಡೆಯಬಹುದು ಎಂದು ಇಲಾಖೆ ತಿಳಿಸಿದೆ.

ವಿಶೇಷ ನಿಯಮ
ಇದು ಪ್ರತ್ಯೇಕ ಮತ್ತು ವಿಶೇಷ ವಾಹನ ನೋಂದಣಿ ನಿಯಮ. ಇದೇ ವರ್ಷದ ಸೆಪ್ಟಂಬರ್‌ 15ರಿಂದ ಜಾರಿಗೆ ಬರಲಿದೆ ಎಂದು ರಸ್ತೆ ಸಾರಿಗೆ ಸಚಿವಾಲಯ ತಿಳಿಸಿದೆ. ಇದರಡಿ ಮರುನೋಂದಣಿ ಸಂದರ್ಭ ಮೂಲ ರಾಜ್ಯದಿಂದ ನಿರಾಕ್ಷೇಪಣ ಪತ್ರ ಪಡೆಯುವ ಅಗತ್ಯ ಇಲ್ಲ. ಅಲ್ಲದೆ, ಮರು ನೋಂದಣಿಯನ್ನು ಆನ್‌ಲೈನ್‌ನಲ್ಲೇ ಮಾಡಿಕೊಳ್ಳಬಹುದು.

ಇದರ ವಿಶೇಷವೇನು?
ಈ ವಿವಿಧ ಸಿಬಂದಿಗೆ ಪದೇಪದೆ ಒಂದು ರಾಜ್ಯದಿಂದ ಮತ್ತೂಂದು ರಾಜ್ಯಕ್ಕೆ ವರ್ಗಾವಣೆಯಾಗುವ ಸಾಧ್ಯತೆ ಇರುತ್ತವೆ. ಅಂಥವರು ತಮ್ಮ ವಾಹನಗಳನ್ನು ಬಿಎಚ್‌ ಸೀರೀಸ್‌ನಡಿ ನೋಂದಣಿ ಮಾಡಿಸಿದ್ದರೆ, ಬೇರೆಡೆ ವರ್ಗವಾದಾಗ ತಮ್ಮ ವಾಹನಗಳನ್ನು ಅಲ್ಲಿ ಮರು ನೋಂದಣಿ ಮಾಡಿಸುವ ಆವಶ್ಯಕತೆ ಇರುವುದಿಲ್ಲ. ಪ್ರಸ್ತುತ ಇರುವ ನಿಯಮದಂತೆ ಒಂದು ರಾಜ್ಯದಿಂದ ಮತ್ತೂಂದು ರಾಜ್ಯಕ್ಕೆ ಹೋದರೆ ಅಲ್ಲಿ 12 ತಿಂಗಳು ಮಾತ್ರ ವಾಹನ ಓಡಿಸಬಹುದು. ಬಳಿಕ ಮರು ನೋಂದಣಿ ಕಡ್ಡಾಯ. ಆದರೆ ಬಿಎಚ್‌ ಸೀರೀಸ್‌ ನೋಂದಣಿ ಹೊಂದಿರುವ ವಾಹನಗಳ ಮರುನೋಂದಣಿ ಅಗತ್ಯವಿಲ್ಲ.

ರಸ್ತೆ ತೆರಿಗೆ ನಿಯಮ ಸಡಿಲಿಕೆ
ಇದರಡಿ ಪೆಟ್ರೋಲ್‌ ವಾಹನಗಳಿಗೆ ರಸ್ತೆ ತೆರಿಗೆ ವಿನಾಯಿತಿ ನೀಡಲಾಗಿದೆ. ಈ ವಾಹನಗಳು 2 ವರ್ಷಗಳ ಅವಧಿಗಳಲ್ಲಿ ಈ ತೆರಿಗೆ ಪಾವತಿಸಬಹುದು. ಡೀಸೆಲ್‌ ವಾಹನಗಳಿಗಾದರೆ ಈ ತೆರಿಗೆಗೆ ಶೇ. 2 ಸೆಸ್‌ ವಿಧಿಸಲಾಗುತ್ತದೆ. ವಿದ್ಯುತ್‌ ಚಾಲಿತ ವಾಹನಗಳಿಗೆ ಶೇ. 2 ಕಡಿಮೆ ಸೆಸ್‌ ವಿಧಿಸಲಾಗುತ್ತದೆ.

Advertisement

ಮಾದರಿ ನೋಂದಣಿ ಸಂಖ್ಯೆ
ಬಿಎಚ್‌ ಸೀರೀಸ್‌ ವಾಹನಗಳ ನೋಂದಣಿ ಸಂಖ್ಯೆ ಸ್ವಯಂಚಾಲಿತವಾಗಿ “YY BH#### XX’ ಮಾದರಿಯಲ್ಲಿ ಇರುತ್ತದೆ. ” YY ‘ಎಂಬುದು ವಾಹನ ಮೊದಲ ಬಾರಿ ನೋಂದಣಿಯಾದ ವರ್ಷ. “BH’ ಎಂಬುದು ಭಾರತ್‌ ಸೀರೀಸ್‌ ಎಂಬುದರ ಸೂಚಕ. “XX’ ಎಂಬುದು ನೋಂದಣಿಯ ಭಾಗ.

ತೆರಿಗೆ ಪಾವತಿ ಹೇಗೆ?
ಈ ಮಾದರಿಯ ನೋಂದಣಿಗಳಲ್ಲಿ ಕಾರಿನ ದರದ ಮೇಲೆ ಶೇಕಡಾವಾರು ಲೆಕ್ಕಾಚಾರದಲ್ಲಿ ತೆರಿಗೆ ವಿಧಿಸಲಾಗುತ್ತದೆ. 10 ಲಕ್ಷ ರೂ. ಮೌಲ್ಯದ ವರೆಗಿನ ವಾಹನಕ್ಕೆ ಶೇ. 8 ತೆರಿಗೆ, 10ರಿಂದ 20 ಲಕ್ಷ ರೂ. ಮೌಲ್ಯದ ವಾಹನಕ್ಕೆ ಶೇ. 10, 20 ಲಕ್ಷ ರೂ.ಗಳಿಗೂ ಅಧಿಕದ ವಾಹನಗಳಿಗೆ ಶೇ. 12ರಷ್ಟು ತೆರಿಗೆ ವಿಧಿಸಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next