ಗೌರಿಬಿದನೂರು: ಇಂದು ಎಲ್ಲೆಡೆ ಗಣ ರಾಜ್ಯೋತ್ಸವದ ಸಂಭ್ರಮಾಚರಣೆ ಕಳೆಗಟ್ಟಿದೆ. ಗಣರಾಜ್ಯೋತ್ಸವ ಹಾಗೂ ಸ್ವಾತಂತ್ರ್ಯ ದಿನಾಚರಣೆ ವೇಳೆ ಜಿಲ್ಲೆಯಲ್ಲಿ ಪ್ರಮುಖವಾಗಿ ಗಮನ ಸೆಳೆಯುವುದು ಗೌರಿಬಿದನೂರು ತಾಲೂಕು ಎಚ್.ನಾಗಸಂದ್ರ ಗ್ರಾಮ. ಏಕೆಂದರೆ ಭಾರತ ದೇಶದಲ್ಲಿಯೇ ವಿರಳ ಎನ್ನಬಹುದಾದ ಭಾರತ ಮಾತೆಯ ಮಂದಿರ ಇಲ್ಲಿರುವುದು ವಿಶೇಷ.
ಎಚ್.ನಾಗಸಂದ್ರ ಗ್ರಾಮದ ಹಿನ್ನೆಲೆ: ಈ ಗ್ರಾಮವು ವಿದುರಾಶ್ವತ್ಥ ಪುಣ್ಯಕ್ಷೇತ್ರಕ್ಕೆ ಒಂದು ಕಿ.ಮೀ. ದೂರದಲ್ಲಿದ್ದು, ತನ್ನದೇ ಆದ ಚಾರಿತ್ರಿಕ ಹಿನ್ನೆಲೆ ಹೊಂದಿದ್ದು, ಸ್ವಾಂತಂತ್ರ್ಯ ಹೋರಾಟದ ಕಿಚ್ಚುಹಚ್ಚಿದ ಸ್ವಾತಂತ್ರ್ಯ ಹೋರಾಟಗಾರ ಹಾಗೂ ತಾಲೂಕಿನ ಮೊದಲ ಶಾಸಕ ಎನ್.ಸಿ.ನಾಗಯ್ಯರೆಡ್ಡಿ, ತಿಮ್ಮಾರೆಡ್ಡಿ, ಹನುಮಂತರೆಡ್ಡಿ ಮುಂತಾದವರು ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇವಟದ್ದು ಇದೇ ಗ್ರಾಮ ಎನ್ನುವುದು ವಿಶೇಷ.
ಇಂದಿಗೂ ತಾಲೂಕಿನ ರಾಜಕೀಯದ ಶಕ್ತಿ ಕೇಂದ್ರವಾಗಿರುವ ಈ ಗ್ರಾಮ, ತಾಲೂಕಿನ ಹಾಗೂ ಜಿಲ್ಲೆ ಮತ್ತು ರಾಜ್ಯಮಟ್ಟದ ರಾಜ ಕಾರಣಿಗಳ ಕೇಂದ್ರ ಸ್ಥಾನವೂ ಇದಾಗಿದೆ. ಮಾಜಿ ಶಾಸಕಿ ಹಾಗೂ ನಾಗಯ್ಯರೆಡ್ಡಿ ಅವರ ಮೊಮ್ಮೊಗಳು ಎನ್.ಜ್ಯೋತಿರೆಡ್ಡಿ, ತಾಲೂಕಿನ ಹಾಲಿ ಶಾಸಕರು ಹಾಗೂ ಕೃಷಿ ಸಚಿವ ಎನ್.ಎಚ್.ಶಿವಶಂಕರೆರಡ್ಡಿ 5 ಬಾರಿ ಶಾಸಕರಾಗಿ ಸದ್ಯ ಸಚಿವರಾಗಿದ್ದಾರೆ. ಬಿಜೆಪಿ ಮುಖಂಡ ಹಾಗೂ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯ ಎನ್.ಎಂ.ರವಿ ನಾರಾಯಣರೆಡ್ಡಿ ಇವರೆಲ್ಲರ ಸ್ವಗ್ರಾಮವೂ ಎಚ್.ನಾಗಸಂದ್ರವೇ ಆಗಿದ್ದು, ಇಂದಿಗೂ ಈ ಗ್ರಾಮ ರಾಜಕೀಯ ಶಕ್ತಿಕೇಂದ್ರವಾಗಿದೆ.
ಭಾರತದ ಏಕೈಕ ಭಾರತಮಾತ ಮಂದಿರ: ಭಾರತ ಮಾತಾ ಸೇವಾಟ್ರಸ್ಟ್‌ನ ಅಧ್ಯಕ್ಷರಾಗಿ ರುವ ಬಿಜೆಪಿ ಮುಖಂಡ ಎನ್.ಎಂ.ರವಿ ನಾರಾಯಣರೆಡ್ಡಿ ಅವರು ಆರ್.ಎಸ್.ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಅವರಿಂದ ಪ್ರೇರಣೆಗೊಂಡು ಭಾರತ ಮಾತಾ ಟ್ರಸ್ಟ್ ಸ್ಥಾಪಿಸಿ ಆರೂವರೆ ಎಕರೆ ಜಮೀನು ಖರೀದಿಸಿ ಅದರಲ್ಲಿ ಭಾರತ ಮಾತೆ ದೇವಸ್ಥಾನವನ್ನು 2006ರಲ್ಲಿ ನಿರ್ಮಿಸಿದ್ದು, ಗರ್ಭಗುಡಿಯಲ್ಲಿ ಕೃಷ್ಣ ಶಿಲೆಯಲ್ಲಿ ಕೆತ್ತಿರುವ ಭಾರತ ಮಾತೆಯ ಮೂರ್ತಿಯನ್ನು ಸ್ಥಾಪಿಸಲಾಗಿದೆ.
ಪ್ರತಿದಿನ ಪೂಜೆ: ಭಾರತಾಂಬೆಯ ಬಲಗೈಯಲ್ಲಿ ರಾಷ್ಟ್ರಧ್ವಜದ ಜೊತೆಗೆ ಅಭಯ ಹಸ್ತವಿದ್ದು, ಪ್ರತಿದಿನ ಪೂಜೆ ನಡೆಯುತ್ತದೆ. ದೇವಾಲಯದ ಮೇಲ್ಭಾಗದಲ್ಲಿ ಚಿತ್ರದುರ್ಗದ ಕೋಟೆಯಲ್ಲಿ ಶತೃ ಸೈನಿಕರನ್ನು ಎದುರಿಸಿ ಸೆದೆಬಡಿದ ಒನಕೆ ಓಬವ್ವ, ಝನ್ಸಿ ರಾಣಿಲಕ್ಷ್ಮೀಬಾಯಿ, ಸುಭಾಷ್ ಚಂದ್ರ ಬೋಸ್ ಮುಂತಾದ ವೀರ ಸೇನಾನಿಗಳ ಚಿತ್ರಗಳನ್ನು ಚಿತ್ರಿಸಲಾಗಿದ್ದು, ರಾಜಗೋಪುರದ ಮೇಲೆ ಕಾರ್ಗಿಲ್ ಯುದ್ಧದಲ್ಲಿ ಶತೃಗಳನ್ನು ಸೆದೆಬಡಿದ ಸೈನಿಕರ ಭಾವಚಿತ್ರಗಳಿವೆ.
ಮಂದಿರವನ್ನು ನೋಡಲು ಬಯಸುವವರು ರೈಲಿನಲ್ಲಿ ಬಂದರೆ ವಿದುರಾಶ್ವತ್ಥ ರೈಲ್ವೆ ನಿಲ್ದಾಣದಲ್ಲಿಳಿದು ವಿದುರಾಶ್ವತ್ಥ ಪುಣ್ಯಕ್ಷೇತ್ರದಲ್ಲಿ ಉಳಿದುಕೊಳ್ಳಲು ವಸತಿ ಸೌಲಭ್ಯವಿದೆ. ಹಿಂದೂಪುರ, ಬೆಂಗಳೂರಿನಿಂದ ರಸ್ತೆ ಮಾರ್ಗ ದಲ್ಲಿ ವಿದುರಾಶ್ವತ್ಥಕ್ಕೆ ನೇರ ಬಸ್ ಸೌಲಭ್ಯವೂ ಇದೆ. ತಾಲೂಕು ಕೇಂದ್ರ ಗೌರಿಬಿದನೂರಿ ನಿಂದಲೂ ದಿಂದಲೂ ಬಸ್ ಸೌಲಭ್ಯವಿದ್ದು ಆಟೋಗಳ ಸೌಲಭ್ಯವೂ ಇದೆ.
ಗಣೇಶ್ ವಿ.ಡಿ