Advertisement

Bharath Jodo: ಈಗ ಪೂರ್ವದಿಂದ ಪಶ್ಚಿಮಕ್ಕೆ ರಾಹುಲ್‌ ಗಾಂಧಿ ಮಹಾಯಾತ್ರೆ

12:34 AM Dec 28, 2023 | Team Udayavani |

ಹೊಸದಿಲ್ಲಿ: ಹಿಂದೆ 2022ರ ಸೆ. 7 ರಿಂದ 2023ರ ಜ. 30ರ ವರೆಗೆ ಭಾರತ್‌ ಜೋಡೋ ಯಾತ್ರೆ ನಡೆಸಿದ್ದ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಯವರು ಈಗ ಭಾರತ್‌ ನ್ಯಾಯ ಯಾತ್ರೆಗೆ ಸಜ್ಜಾಗಿದ್ದಾರೆ. ಹೊಸ ಹೆಸರನ್ನು ಇರಿಸಿ ಕೊಂಡು ಜ. 14ರಿಂದ ಮಾ. 20ರ ವರೆಗೆ ಪೂರ್ವದಿಂದ ಪಶ್ಚಿಮದ ವರೆಗೆ ಬಸ್‌ ಹಾಗೂ ನಡಿಗೆಯಲ್ಲಿ ಯಾತ್ರೆ ನಡೆಸಲಿದ್ದಾರೆ. ಜೋಡೋ ಯಾತ್ರೆಯ ಸಂದರ್ಭ 136 ದಿನಗಳಲ್ಲಿ 12 ರಾಜ್ಯಗಳನ್ನು ಪಾದಯಾತ್ರೆ ಮೂಲಕವೇ ಕ್ರಮಿಸಿದ್ದ ರಾಹುಲ್‌ ಈ ಬಾರಿ ಬಸ್‌ಗಳನ್ನೇ ಹೆಚ್ಚು ಬಳಸಲಿದ್ದಾರೆ.

Advertisement

ನ್ಯಾಯಯಾತ್ರೆ ಒಟ್ಟು 14 ರಾಜ್ಯಗಳನ್ನು 67 ದಿನಗಳಲ್ಲಿ ಹಾದುಹೋಗಲಿದೆ. ಅರ್ಥಾತ್‌ ಹಿಂದಿನ ಯಾತ್ರೆಗೆ ಹೋಲಿಸಿದರೆ ಅರ್ಧದಷ್ಟು ದಿನಗಳನ್ನು ಮಾತ್ರ ಇಲ್ಲಿ ಬಳಸಿಕೊಳ್ಳಲಾಗುತ್ತದೆ.
ರಾಹುಲ್‌ ಯಾತ್ರೆ ಸಾಗುವ ದಾರಿಯಲ್ಲಿ ಈಶಾನ್ಯ ಭಾರತದ ರಾಜ್ಯಗಳಿವೆ. ಇವು ಬಹುತೇಕ ಗುಡ್ಡಗಾಡು ಪ್ರದೇಶಗಳಾಗಿರುವುದರಿಂದ ಕಾಂಗ್ರೆಸ್‌ ಬಸ್‌ಗಳನ್ನು ಬಳಸಲು ನಿರ್ಧರಿಸಿ ರಬಹುದೆಂದು ವಿಶ್ಲೇಷಿಸಲಾಗಿದೆ. ದೇಶವಾಸಿಗಳಿಗೆ ಸಾಮಾಜಿಕ, ಆರ್ಥಿಕ, ರಾಜಕೀಯ ನ್ಯಾಯ ಒದಗಿಸುವುದೇ ಈ ಯಾತ್ರೆಯ ಉದ್ದೇಶವೆಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್‌ ಹೇಳಿದ್ದಾರೆ. ಲೋಕಸಭೆ ಚುನಾವಣೆಯನ್ನೇ ಗುರಿಯಾಗಿಸಿಕೊಂಡು ಕಾಂಗ್ರೆಸ್‌ ಈ ಕಹಳೆಯೂದಿದೆ. ಜ. 14ರಂದು ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಯಾತ್ರೆಗೆ ಚಾಲನೆ ನೀಡಲಿದ್ದಾರೆ.

ಎಷ್ಟು ದೂರ, ಎಲ್ಲೆಲ್ಲಿ ಸಾಗುತ್ತದೆ?
ಒಟ್ಟು 14 ರಾಜ್ಯಗಳ, 85 ಜಿಲ್ಲೆಗಳಲ್ಲಿ ಯಾತ್ರೆ ನಡೆಯಲಿದೆ. 6,200 ಕಿ.ಮೀ. ದೂರವನ್ನು ಕ್ರಮಿಸಿ, 67 ದಿನಗಳಲ್ಲಿ ಯಾತ್ರೆ ಸಮಾಪ್ತಿಯಾಗಲಿದೆ. 2022ರ ಸೆ. 7ರಿಂದ 2023ರ ಜ. 30ರ ವರೆಗೆ ಕನ್ಯಾಕುಮಾರಿಯಿಂದ ಕಾಶ್ಮೀರದ ವರೆಗೆ ನಡೆದಿದ್ದ ಭಾರತ್‌ ಜೋಡೋ ಯಾತ್ರೆ ವೇಳೆ ದಕ್ಷಿಣದಿಂದ ಉತ್ತರಕ್ಕೆ ಸಾಗಲಾಗಿತ್ತು. ಆಗ ಒಟ್ಟು 136 ದಿನಗಳ ಕಾಲ, 12 ರಾಜ್ಯಗಳು, 75 ಜಿಲ್ಲೆಗಳಲ್ಲಿ 4,081 ಕಿ.ಮೀ.ಗಳನ್ನು ಕ್ರಮಿಸಲಾಗಿತ್ತು.

ನಾಗಾಲ್ಯಾಂಡ್‌, ಅಸ್ಸಾಂ, ಮೇಘಾಲಯ, ಪ. ಬಂಗಾಲ, ಬಿಹಾರ, ಝಾರ್ಖಂಡ್‌, ಒಡಿಶಾ, ಛತ್ತೀಸ್‌ಗಢ, ಉತ್ತರಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ, ಗುಜರಾತ್‌ ಮೂಲಕ ಸಾಗಿ ಮಾ. 20ರಂದು ಮಹಾರಾಷ್ಟ್ರ ರಾಜಧಾನಿ ಮುಂಬಯಿಯಲ್ಲಿ ಮುಕ್ತಾಯ ಸಮಾರಂಭ ನಡೆಯಲಿದೆ.

ಬಿಜೆಪಿ ಪ್ರಾಬಲ್ಯದ ಉ.ಪ್ರ., ಮ.ಪ್ರ.ದಲ್ಲೂ ಯಾತ್ರೆ – ರಾಜಕೀಯವಾಗಿ ಕಾಂಗ್ರೆಸ್‌ ಪಾಲಿಗೆ ಮಹತ್ವದ್ದು
ಕಾಂಗ್ರೆಸ್‌ನ ಯಾತ್ರೆ ಆರಂಭವಾಗುವುದೇ ಮಣಿಪುರ ರಾಜಧಾನಿ ಇಂಫಾಲದಲ್ಲಿ. ಮೇ 3ರಿಂದ ಈ ರಾಜ್ಯದಲ್ಲಿ ಕುಕಿ ಮತ್ತು ಮೈತೇಯಿ ಸಮುದಾಯಗಳ ನಡುವೆ ಭಾರೀ ಘರ್ಷಣೆ ನಡೆದು 200 ಮಂದಿ ಸಾವನ್ನಪ್ಪಿದ್ದರು. ಇದರ ಪರವಾಗಿ ಕಾಂಗ್ರೆಸ್‌ ಸಂಸತ್ತಿನಲ್ಲಿ ದೊಡ್ಡ ಹೋರಾಟ ನಡೆಸಿತ್ತು. ಅಲ್ಲಿಂದಲೇ ಕಾಂಗ್ರೆಸ್‌ ಯಾತ್ರೆ ಆರಂಭವಾಗುತ್ತಿದೆ. ಒಟ್ಟು 14 ರಾಜ್ಯಗಳಲ್ಲಿ ಯಾತ್ರೆ ನಡೆಯಲಿದೆ. ಈ ಭಾಗದಲ್ಲಿ ಒಟ್ಟು 355 ಲೋಕಸಭಾ ಸ್ಥಾನಗಳಿವೆ. ದೇಶದ ಒಟ್ಟು ಲೋಕಸಭಾ ಸ್ಥಾನಗಳ ಪೈಕಿ ಶೇ. 65 ಸ್ಥಾನಗಳು ಇಲ್ಲೇ ಇವೆ. ಇಲ್ಲಿ 2019ರ ಚುನಾವಣೆಯಲ್ಲಿ ಬಿಜೆಪಿ 236 ಸ್ಥಾನಗಳನ್ನು ಗೆದ್ದಿದೆ. ಕಾಂಗ್ರೆಸ್‌ ಆಗ ಗೆದ್ದದ್ದು ಕೇವಲ 14 ಸ್ಥಾನಗಳನ್ನು ಮಾತ್ರ! ಉತ್ತರಪ್ರದೇಶ, ಮಧ್ಯಪ್ರದೇಶ, ಬಿಹಾರ, ರಾಜಸ್ಥಾನ, ಗುಜರಾತ್‌, ಮಹಾರಾಷ್ಟ್ರದಂತಹ ಬೃಹತ್‌ ರಾಜ್ಯಗಳು ಇಲ್ಲೇ ಬರುತ್ತವೆ. ಈ ಭಾಗದಲ್ಲಿ ಹಿಡಿತ ಸಾಧಿಸುವುದು ರಾಹುಲ್‌ ಯಾತ್ರೆಯ ಮುಖ್ಯ ಉದ್ದೇಶ. ಹಿಂದೆ ದಕ್ಷಿಣದಿಂದ ಉತ್ತರಕ್ಕೆ ನಡೆಸಿದ್ದ ಯಾತ್ರೆ ವೇಳೆ ಕರ್ನಾಟಕವೂ ಇತ್ತು. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂತು. ಇದನ್ನೂ ಕಾಂಗ್ರೆಸ್‌ ಗಂಭೀರವಾಗಿಯೇ ಪರಿಗಣಿಸಿದೆ.

Advertisement

ಭಾರತ್‌ ನ್ಯಾಯ ಯಾತ್ರೆ ಒಂದು ಘೋಷಣೆ ಮಾತ್ರ. ಇದರಿಂದ ಜನರು ಮೂರ್ಖರಾಗುವು ದಿಲ್ಲ. ಕಾಂಗ್ರೆಸ್‌ ತನ್ನ ಹಲವು ದಶಕಗಳ ಆಡಳಿತದಲ್ಲಿ ಅನ್ಯಾಯವೆಸಗಿತ್ತು. ಪ್ರಧಾನಿ ಮೋದಿ ಎಲ್ಲರಿಗೂ ನ್ಯಾಯ ನೀಡಿದ್ದಾರೆ. ಅಭಿವೃದ್ಧಿ ಎಲ್ಲರನ್ನೂ ತಲುಪಿದೆ.
– ಮೀನಾಕ್ಷಿ ಲೇಖೀ, ಕೇಂದ್ರ ಸಚಿವೆ

– ಹಿಂದೆ ಭಾರತ್‌ ಜೋಡೋ ಯಾತ್ರೆ, ಈಗ ಭಾರತ್‌ ನ್ಯಾಯ ಯಾತ್ರೆ
– ಆಗ ಪೂರ್ಣ ಪಾದಯಾತ್ರೆ, ಈಗ ಬಸ್‌ನಲ್ಲೇ ಗರಿಷ್ಠ ಸಂಚಾರ
– ಆಗ 136 ದಿನಗಳ ಕಾಲ 4,081 ಕಿ.ಮೀ. ಪಾದಯಾತ್ರೆ, ಈ ಬಾರಿ 67 ದಿನಗಳಲ್ಲಿ 6,200 ಕಿ.ಮೀ. ಕ್ರಮಿಸುವ ಗುರಿ
– ಹಿಂದೆ 12 ರಾಜ್ಯಗಳ 75 ಜಿಲ್ಲೆ; ಈಗ 14 ರಾಜ್ಯಗಳು, 85 ಜಿಲ್ಲೆಗಳ ಸುದೀರ್ಘ‌ ಹಾದಿ
– ಲೋಕಸಭಾ ಚುನಾವಣೆಯಲ್ಲಿ ಮಹತ್ವದ ಪಾತ್ರ ಬೀರುವ ಉತ್ತರಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ, ಗುಜರಾತ್‌, ಬಿಹಾರಗಳೇ ಕೇಂದ್ರ ಸ್ಥಾನಗಳು

Advertisement

Udayavani is now on Telegram. Click here to join our channel and stay updated with the latest news.

Next