ಗಂಗಾವತಿ: ಜಾತಿ, ಧರ್ಮ, ಭಾಷೆಗಳನ್ನು ಒಡೆದು ರಾಜಕೀಯ ಅಧಿಕಾರ ಹಿಡಿದಿರುವ ಬಿಜೆಪಿ ಪಕ್ಷ ದೇಶದ ಜನರ ಮನಸ್ಸುಗಳನ್ನು ಒಡೆದಿದ್ದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ದೇಶದ ಜನರ ಮನಸ್ಸುಗಳನ್ನು ಕನ್ಯಾಕುಮಾರಿಯಿಂದ ಕಾಶ್ಮೀರದ ವರೆಗೆ ಪಾದಯಾತ್ರೆಯ ಮೂಲಕ ಜೋಡಿಸುವ ಪವಿತ್ರ ಕಾರ್ಯ ಇತಿಹಾಸದಲ್ಲಿ ಉಳಿಯಲಿದೆ ಎಂದು ಮಾಜಿ ಸಚಿವ ಎಂ.ಮಲ್ಲಿಕಾರ್ಜುನ ನಾಗಪ್ಪ ಹೇಳಿದರು.
ನಗರದ ಮಹಾತ್ಮಗಾಂಧಿ ವೃತ್ತದಲ್ಲಿ ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆ ಯಶಸ್ವಿ ಹಾಗೂ ಮಹಾತ್ಮ ಗಾಂಧೀಜಿಯವರ ಹುತಾತ್ಮ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದರು. ದೇಶದ ಸ್ವಾತಂತ್ರ್ಯಕ್ಕಾಗಿ ಯಾವುದೇ ತ್ಯಾಗ ಬಲಿದಾನ ಮಾಡದೇ ಇರುವವರು ಭಾರತೀಯರಿಗೆ ದೇಶ ಭಕ್ತಿಯ ಪಾಠ ಮಾಡುತ್ತಿದ್ದಾರೆ. ಜಾತಿ ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡಿ ಮಂದಿರ ಮಸೀದಿ ಚರ್ಚ್ ಗಳ ವಿಷಯಗಳನ್ನು ಜನರ ಮನಸ್ಸಿನಲ್ಲಿ ತುಂಬಿ ಪರಸ್ಪರ ನಂಬಿಕೆ ಇಲ್ಲದಂತೆ ಮಾಡಿದ ರಾಜಕಾರಣಿಗಳಿಂದ ದೇಶದ ಮಾನ ಹಾರಾಜು ಆಗುತ್ತಿದೆ. ಇದನ್ನು ಸರಿಪಡಿಸಲು ಗಾಂಧಿ ಕುಟುಂಬದ ರಾಹುಲ್ ಗಾಂಧಿ ಕನ್ಯಾಕುಮಾರಿಯಿಂದ ಕಾಶ್ಮೀರದ ವರೆಗೆ ಸುಮಾರು 4 ಸಾವಿರ ಕಿ.ಮೀ.ಐತಿಹಾಸಿಕ ಪಾದಾತ್ರೆಯನ್ನು ಕೈಗೊಂಡು ದೇಶದ ಪ್ರತಿಯೊಬ್ಬ ಪ್ರಜೆಯ ಮನೆ ಮನಸ್ಸಿನಲ್ಲಿ ಉಳಿದಿದ್ದು ದೇಶದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರೂ ಅವರು ಮೊದಲ ಭಾರಿಗೆ ಕಾಶ್ಮೀರದ ಲಾಲ್‌ಚೌಕ್ ನಲ್ಲಿ ರಾಷ್ಟ್ರಧ್ವಜ ಹಾರಿಸಿದಂತೆ ರಾಹುಲ್ ಗಾಂಧಿಯೂ ರಾಷ್ಟ್ರಧ್ವಜಾರೋಹಣ ಮಾಡುವ ಮೂಲಕ ದೇಶದ ಪ್ರತಿಷ್ಠೆಯನ್ನು ಹೆಚ್ಚು ಮಾಡಿದ್ದಾರೆ. ಭಾರತ್ ಜೋಡೋ ಯಾತ್ರೆಯ ಉದ್ಧಕ್ಕು ಬಡವರು, ದಲಿತರು, ಆದಿವಾಸಿಗಳು, ಬುಡಕಟ್ಟು ಜನಾಂಗ ವಿವಿಧ ವೃತ್ತಿ ಮಾಡುವವರು ಕ್ರೀಡಾಪಟುಗಳು ಕೃಷಿಕರು, ಕೂಲಿಕೆಲಸ ಮಾಡುವವರನ್ನು ಭೇಟಿಯಾಗಿ ಅವರ ಜೀವನ ಕುರಿತು ತಿಳಿದುಕೊಂಡಿದ್ದು ದೇಶದಲ್ಲಿ ಎಲ್ಲರೂ ಕೂಡಿ ಬಾಳಿದರೆ ಮಾತ್ರ ವಿಶ್ವದಲ್ಲಿ ಭಾರತ ವಿಶ್ವ ಗುರುವಾಗಲು ಸಾಧ್ಯ ಎಂಬ ಸಂದೇಶ ನೀಡಿದ್ದಾರೆ. ಪಾದಯಾತ್ರೆ ಯಶಸ್ವಿಗೊಳಿಸಿದ ರಾಹುಲ್ ಗಾಂಧಿ ಬಗ್ಗೆ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ದೇಶದ ಜನತೆ ಅಭಿನಂದಿಸುತ್ತಿದೆ ಎಂದರು.
ಮಾಜಿ ಎಂಎಲ್ ಸಿ ಎಚ್.ಆರ್.ಶ್ರೀನಾಥ ಹಾಗೂ ಕೆಪಿಸಿಸಿ ವಕ್ತಾರೆ ಶೈಲಜಾ ಹಿರೇಮಠ ಮಾತನಾಡಿ, ಕಾಂಗ್ರೆಸ್ ದೇಶದ ಜನರ ಹೋರಾಟದ ಮಾರ್ಗವಾಗಿದೆ.ಮಹಾತ್ಮಗಾಂಧಿಯವನ್ನು ಹತ್ಯೆ ಮಾಡಿದ ವ್ಯಕ್ತಿಯ ಆದರ್ಶ ಪಾಲಿಸುವ ರಾಜಕೀಯ ಪಕ್ಷ ನೈತಿಕ ಹದಪತವಾಗಿದೆ. ಬಿಜೆಪಿ ದೇಶದ ಜನರ ಮನಸ್ಸುಗಳನ್ನು ಚೂರು ಚೂರು ಮಾಡಿದ್ದು ರಾಹುಲ್ ಗಾಂಧಿ ಪ್ರಬುದ್ಧತೆ ಮೆರೆದು ದೇಶದಾದ್ಯಂತ ಪಾದಯಾತ್ರೆಯ ಮೂಲಕ ಜನರನ್ನು ಒಗ್ಗೂಡಿಸಿದ್ದಾರೆ. ಬಿಜೆಪಿ ಭಾರತ ಜೋಡೋ ಪಾದಯಾತ್ರೆಗೆ ಅಡ್ಡಿ ಆತಂಕ ಸೃಷ್ಠಿ ಮಾಡಿದರೂ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಕಾರ್ಯಕರ್ತರು ಲೆಕ್ಕಿಸದೇ 4 ಸಾವಿರ ಕಿ.ಮೀ. ನಡೆದು ದೇಶದ ನೈಜ ಸಮಸ್ಯೆ ಅರ್ಥ ಮಾಡಿಕೊಂಡಿದ್ದು ಮುಂದಿನ ಲೋಕಸಭಾ ಚುನಾವಣೆಯಲ್ಲಿ ರಾಹುಲ್ ಗಾಂಧಿ ನೇತೃತ್ವದಲ್ಲಿ ಗೆದ್ದು ದೇಶದ ಚುಕ್ಕಾಣಿ ಹಿಡಿಯುವ ಶಪಥ ಮಾಡಬೇಕಿದೆ. ದೇಶದ ಸಂಪತ್ತನ್ನು ಕೆಲವೇ ಜನರೇ ಕೈಗೆ ಕೊಡುವ ಮೋದಿ ಸರಕಾರದ ನೀತಿಯಿಂದ ದೇಶದಲ್ಲಿ ನಿರುದ್ಯೋಗ ಬಡತನ ಹೆಚ್ಚಾಗಿದೆ. ರಾಜ್ಯದಲ್ಲಿಯೂ ಬಿಜೆಪಿ ದುರಾಡಳಿತಕ್ಕೆ ಜನತೆ ಬುದ್ಧಿ ಕಲಿಸಲಿದ್ದಾರೆ. ದೇಶದ ಬಡತನ ನಿರುದ್ಯೋಗ, ಕೃಷಿಕರು ಜನಸಾಮಾನ್ಯರು, ಕಾರ್ಮಿಕರು ದಲಿತ ಹಿಂದುಳಿದ ಅಲ್ಪಸಂಖ್ಯಾತರ ಏಳ್ಗೆ ಕಾಂಗ್ರೆಸ್ ನಿಂದ ಮಾತ್ರ ಸಾಧ್ಯ. ಕೋಮುವಾದದ ಮೂಲಕ ಅಧಿಕಾರಕ್ಕೆ ಬಂದು ದೇಶದ ಸಂಪತ್ತು ಸರಕಾರಿ ಸಂಸ್ಥೆಗಳನ್ನು ಮಾರುವವರ ವಿರುದ್ಧ ಜನತೆ ತಿರುಗಿ ಬೀಳುವುದು ಖಚಿತವಾಗಿದೆ ಎಂದರು.
ವಿಜಯೋತ್ಸವದಲ್ಲಿ ಜೆಂ.ಸರ್ವೇಶ್, ರಮೇಶ ಗೌಳಿ, ಅಶೋಕ, ರಾಜಶೇಖರಪ್ಪ ಮುಸ್ಟೂರು, ಬಿ.ಕೃಷ್ಣಪ್ಪ, ಆಯೂಬ್ ಖಾನ್,ಸಂದೀಪ ಸಂಜೀವಪ್ಪ, ಮಹಮದ್ ಉಸ್ಮಾನ್, ಸುರೇಶ ಗೌರಪ್ಪ, ಜೋಗದ ಲಿಂಗಪ್ಪ ನಾಯಕ, ಶೇಖರಗೌಡ, ವಿದ್ಯಾನಗರ ಸತ್ಯನಾರಾಯಣ, ಐಲಿ ಬಸವರಾಜ, ಜಿನ್ನಾ ಟೇಲರ್, ರಾಜು ಗಿಣಿಮೋತಿ, ಆರ್.ಪಿ.ರೆಡ್ಡಿ, ಹನುಮಂತರಾಯ, ವೀರನಗೌಡ ಸೇರಿ ಕಾಂಗ್ರೆಸ್ ನೂರಾರು ಕಾರ್ಯಕರ್ತರಿದ್ದರು.