ರಾಯಚೂರು: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನಾಯಕತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆ ರಾಜ್ಯದಲ್ಲಿ ಭಾನುವಾರ ಮುಕ್ತಾಯಗೊಂಡಿತು. ಕಳೆದ ಮೂರು ದಿನಗಳಿಂದ ಗಡಿ ಜಿಲ್ಲೆ ರಾಯಚೂರಿನಲ್ಲಿ ಯಾತ್ರೆ ನಡೆಸಿ ನೆರೆ ರಾಜ್ಯ ತೆಲಂಗಾಣ ಸೇರಿಕೊಂಡಿತು.
ತಾಲೂಕಿನ ಶಕ್ತಿನಗರದ ಕೃಷ್ಣಾ ನದಿ ಮಾರ್ಗವಾಗಿ ತೆಲಂಗಾಣಕ್ಕೆ ತೆರಳಿದ ಯಾತ್ರೆಯನ್ನು ಆ ರಾಜ್ಯದ ನಾಯಕರು ವಿಜೃಂಭಣೆಯಿಂದ ಬರಮಾಡಿಕೊಂಡರು. ಜಿಲ್ಲೆಯಲ್ಲಿ ಮೂರನೇ ದಿನ ಮತ್ತೆ ಗ್ರಾಮೀಣ ಕ್ಷೇತ್ರದ ಮಾರ್ಗವಾಗಿ ಸಾಗಿದ ಯಾತ್ರೆಯಲ್ಲಿ ಕೂಡ ಅಪಾರ ಸಂಖ್ಯೆಯ ಜನಸ್ತೋಮ ರಾಹುಲ್ ಅವರನ್ನು ಬೀಳ್ಕೊಟ್ಟಿತು.
ಸಮೀಪದ ಯರಮರಸ್‌ನ ಆನಂದ ಪ್ರೌಢಶಾಲಾ ಆವರಣದಲ್ಲಿ ರಾಹುಲ್ ಗಾಂಧಿ ಶನಿವಾರ ವಾಸ್ತವ್ಯ ಮಾಡಿದ್ದರು. ಅಲ್ಲಿಂದ ಸುಮಾರು 2 ಕಿಮೀ ದೂರದ ತಾಯಮ್ಮದೇವಿ ದೇವಸ್ಥಾನದಿಂದ ಬೆಳಗ್ಗೆ 6 ಗಂಟೆಗೆ ಯಾತ್ರೆ ಆರಂಭಿಸಿದರು. ಬೆಳಗ್ಗೆ 9.30ರ ವೇಳೆಗೆ ಯಾತ್ರೆ ರಾಯಚೂರು ಜಿಲ್ಲೆಯ ಗಡಿ ದಾಟಿ ತೆಲಂಗಾಣ ಸೇರ್ಪಡೆಯಾಗಿತ್ತು.
ಭಾನುವಾರ ಕೂಡ ಮಾರ್ಗ ಮಧ್ಯೆದಲ್ಲಿ ಅನೇಕರನ್ನು ಭೇಟಿ ಮಾಡುತ್ತಲೇ ಸಾಗಿದ ರಾಹುಲ್‌ಗೆ ಸ್ಥಳೀಯರು ಸಮಸ್ಯೆಗಳ ಮನವಿಗಳನ್ನು ನೀಡಿದ್ದು ಗಮನ ಸೆಳೆಯಿತು. ವೈಟಿಪಿಎಸ್ ಕಾರ್ಮಿಕರ ಸಮಸ್ಯೆಗಳ ಬಗ್ಗೆ, ಭೂ ಸಂತ್ರಸ್ತರ ಬಗ್ಗೆ ಮನವಿ ಸಲ್ಲಿಸಲಾಯಿತು. ಯುವಕನೋರ್ವ ವೈಟಿಪಿಎಸ್‌ಗೆ ಭೂಮಿ ನೀಡಿದ್ದೇವೆ. ನಮಗೆ ಉದ್ಯೋಗ ಭರವಸೆ ನೀಡಿದ್ದು ಈಡೇರಿಲ್ಲ. ಈ ಬಗ್ಗೆ ದಯವಿಟ್ಟು ಕ್ರಮ ವಹಿಸಿ ಎಂದು ಇಂಗ್ಲಿಷ್‌ನಲ್ಲಿ ದೊಡ್ಡ ಹಾಳೆಯಲ್ಲಿ ಬರೆದ ಮನವಿ ಸಲ್ಲಿಸಿದರು.
ಚಿಕ್ಕ ಬಾಲಕನೊಬ್ಬ ರಾಹುಲ್ ಗಾಂಧಿ ಕೈ ಹಿಡಿದು ಅವರಿಗಿಂತ ವೇಗವಾಗಿ ನಡೆಯುವ ಮೂಲಕ ಗಮನ ಸೆಳೆದ. ರಾಹುಲ್ ಗಾಂಧಿಗೆ ಬಾಲಕ ಚಾಕೋಲೇಟ್ ನೀಡಿದರೆ ಅದನ್ನು ಸೇವಿಸದೆ ಬೆಂಬಲಿಗ ಪಡೆಗೆ ನೀಡಿದರು. ಮೂರನೇ ದಿನವೂ ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಈಶ್ವರ ಖಂಡ್ರೆ, ಪ್ರಿಯಾಂಕ್ ಖರ್ಗೆ, ಶಾಸಕ ದದ್ದಲ್ ಬಸನಗೌಡ, ಮುಖಂಡ ರವಿ ಬೋಸರಾಜ್ ಸೇರಿ ಅನೇಕ ನಾಯಕರು ಯಾತ್ರೆಯಲ್ಲಿ ಪಾಲ್ಗೊಂಡಿದ್ದರು.