ಮುಂಬೈ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆದ ಭಾರತ್ ಜೋಡೋ ನ್ಯಾಯ್ ಯಾತ್ರೆ ಸಂವಿಧಾನ ಶಿಲ್ಪಿ ಬಾಬಾಸಾಹೇಬ್ ಅಂಬೇಡ್ಕರ್ ಅವರ ಸ್ಮಾರಕವಾದ ದಾದರ್‌ನ ಚೈತ್ಯಭೂಮಿಯಲ್ಲಿ ಶನಿವಾರ ಸಂಜೆ ಗೌರವ ನಮನ ಸಲ್ಲಿಸಲಾಯಿತು. ಜ.14ರಂದು ಆರಂಭ ವಾಗಿದ್ದ ಯಾತ್ರೆ ರವಿವಾರ ಸಂಪನ್ನ ವಾಗಲಿದೆ.
ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಹಿರಿಯ ಕಾಂಗ್ರೆಸ್ ನಾಯಕರು ಕಾರ್ಯಕರ್ತರು ನ್ಯಾಯ ವಾಸ್ತವವಾಗಿ ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದ ಮತ್ತೊಂದು ಹೆಸರು ಎನ್ನುವ ಸಂವಿಧಾನದ ಪೀಠಿಕೆ ಓದಿದರು.
ರಾಹುಲ್ ಗಾಂಧಿ ಅವರು ಮಾತನಾಡಿ ‘ಹಿಂದಿನ ಯಾತ್ರೆಯಲ್ಲಿ, ನಾವು ‘ಮೊಹಬ್ಬತ್ ಕಿ ದುಕಾನ್ ನಫ್ರತ್ ಕಿ ಬಜಾರ್ ಮೇ ‘ ಅನ್ನು ತೆರೆದಿದ್ದೇವೆ, ನಾನು 4000 ಕಿಮೀ ನಡೆದಿದ್ದೆ. ಆದರೆ ನಾನು ಒಡಿಶಾ, ಜಾರ್ಖಂಡ್, ಛತ್ತೀಸ್‌ಗಢ, ಬಂಗಾಳ, ಅಸ್ಸಾಂ, ಬಿಹಾರ ಮತ್ತು ನಾನು ಅನೇಕ ಪ್ರದೇಶಗಳನ್ನು ತಲುಪಲಾಗಲಿಲ್ಲ. ಇನ್ನೊಂದು ಯಾತ್ರೆ ಆರಂಭಿಸಿ ಎಂದು ಜನ ನನಗೆ ಹೇಳಿದರು ಎಂದರು.
ನಾವು ನಮ್ಮ ಎರಡನೇ ಯಾತ್ರೆಯನ್ನು ಮಣಿಪುರದಿಂದ ಪ್ರಾರಂಭಿಸಿ ಮುಂಬೈನಲ್ಲಿ ಅದು ಕೊನೆಗೊಳ್ಳುತ್ತಿದೆ. ಈ ಯಾತ್ರೆಯು ಮುಂಬೈನಲ್ಲಿ ಕೊನೆಗೊಳ್ಳುವುದಿಲ್ಲ, ಇದು ಧಾರಾವಿಯಲ್ಲಿ ಕೊನೆಗೊಳ್ಳುತ್ತಿದೆ.ಭಾರತದಲ್ಲಿ, ಕೌಶಲ್ಯ ಮತ್ತು ದಲ್ಲಾಳಿಗಳ ನಡುವಿನ ಹೋರಾಟ, ಅಂದರೆ ಕೌಶಲ್ಯ (ಧಾರಾವಿ) ಮತ್ತು ದಲಾಲ್ (ಅದಾನಿ) ಎಂದರು.
”ಧಾರಾವಿ ನಿಮ್ಮದು ಮತ್ತು ನಿಮ್ಮದೇ ಆಗಿರಬೇಕು.ಧಾರಾವಿಯ ಕೌಶಲ್ಯಕ್ಕೆ ಸಹಾಯ ಸಿಗಬೇಕು, ಧಾರಾವಿಗೆ ಬ್ಯಾಂಕ್‌ಗಳ ಬಾಗಿಲು ತೆರೆಯಬೇಕು, ಏಕೆಂದರೆ ನಿಮ್ಮಂತಹವರು ಮಾತ್ರ ದೇಶವನ್ನು ನಿರ್ಮಾಣ ಮಾಡುತ್ತಾರೆ” ಎಂದರು.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಮಾತನಾಡಿ, ”ಈ ದೇಶದ ಎಲ್ಲಾ ವಾಸ್ತವತೆಯನ್ನು ನಿಮಗೆ ತಿಳಿಸಲು ರಾಹುಲ್ ಗಾಂಧಿ ಅವರು 6,700 ಕಿಮೀ ಯಾತ್ರೆ ನಡೆಸಿದರು, ಇಂದು ಇದು ಬಹಳ ಮಹತ್ವದ್ದಾಗಿದೆ. ಈ ರಾಷ್ಟ್ರದ ವಾಸ್ತವ, ಜನಜಾಗೃತಿಯ ಮೇಲೆ ತೀವ್ರ ದಾಳಿ ನಡೆಯುತ್ತಿದೆ. ಅದರ ಬಗ್ಗೆ ನಿಮಗೆಲ್ಲರಿಗೂ ಅರಿವು ಮೂಡಿಸಲು ರಾಹುಲ್ ಗಾಂಧಿ ಯಾತ್ರೆ ಆರಂಭಿಸಿದರು”ಎಂದರು.