Advertisement

ಜನವರಿಯಿಂದ ಭಾರತ್‌ ಜೋಡೋ 2.0 ?- ಈಶಾನ್ಯದಿಂದ ಗುಜರಾತ್‌ಗೆ ರಾಹುಲ್‌ ಯಾತ್ರೆ

10:22 PM Dec 16, 2023 | Team Udayavani |

ನವದೆಹಲಿ: ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಪಕ್ಷದ ಸಂಘಟನೆಯನ್ನು ಬಲಗೊಳಿಸಲು ಜನವರಿಯಿಂದ ಭಾರತ್‌ ಜೋಡೋ ಯಾತ್ರೆ 2.0 ಆರಂಭಿಸಲು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಯೋಜಿಸಿದ್ದಾರೆ ಎನ್ನಲಾಗಿದೆ.ಯಾತ್ರೆಯಲ್ಲಿ ಮುಖ್ಯವಾಗಿ ಬೆಲೆ ಏರಿಕೆ, ನಿರುದ್ಯೋಗ ಸೇರಿದಂತೆ ಜನರು ಅನುಭವಿಸುತ್ತಿರುವ ಪ್ರಸ್ತುತ ಸಮಸ್ಯೆಗಳ ಕುರಿತು ಧ್ವನಿ ಎತ್ತಲಿದ್ದಾರೆ ಎಂದು ಕಾಂಗ್ರೆಸ್‌ ನಾಯಕರು ತಿಳಿಸಿದ್ದಾರೆ.

Advertisement

ಈಶಾನ್ಯ ರಾಜ್ಯದಿಂದ ಆರಂಭವಾಗುವ ಈ ಯಾತ್ರೆಯು ಗುಜರಾತ್‌ನಲ್ಲಿ ಅಂತ್ಯಗೊಳ್ಳಲಿದೆ. ಈ ಬಗ್ಗೆ ಈ ಹಿಂದೆಯೇ ಘೋಷಣೆ ಮಾಡಲಾಗಿದ್ದರೂ, ಆರಂಭದ ಬಗ್ಗೆ ಸ್ಪಷ್ಟತೆ ಇರಲಿಲ್ಲ.
ಈ ಹಿಂದೆ ಅವರು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಭಾರತ್‌ ಜೋಡೋ ಯಾತ್ರೆ ನಡೆಸಿದ್ದರು. ಅದಕ್ಕೆ ಭಾರೀ ಜನಬೆಂಬಲ ವ್ಯಕ್ತವಾಗಿತ್ತು. ಇತ್ತೀಚಿನ ಪಂಚರಾಜ್ಯ ಚುನಾವಣೆಗಳಲ್ಲಿ ತೆಲಂಗಾಣದಲ್ಲಿ ಮಾತ್ರ ಜಯಗಳಿಸಲು ಕಾಂಗ್ರೆಸ್‌ಗೆ ಸಾಧ್ಯವಾಗಿತ್ತು. ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‌ಗಢಗಳಲ್ಲಿ ಸೋಲನುಭವಿಸಿತ್ತು. ಲೋಕಸಭೆ ಚುನಾವಣೆ ಸಮೀಪಿಸುತ್ತಿರುವುದರಿಂದ ಪಕ್ಷದ ಬಲವರ್ದನೆಗಾಗಿ ಹಾಗೂ ಮತಗಳನ್ನು ಸೆಳೆಯಲು ಈ ಯಾತ್ರೆಯನ್ನು ರಾಹುಲ್‌ ಗಾಂಧಿ ಆಯೋಜಿಸುತ್ತಿದ್ದಾರೆ.

ಕಮಲ್‌ನಾಥ್‌ಗೆ ಗೇಟ್‌ ಪಾಸ್‌
ಮಧ್ಯಪ್ರದೇಶ ಚುನಾವಣೆಯಲ್ಲಿ ಸೋತ ಹಿನ್ನೆಲೆಯಲ್ಲಿ ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಸ್ಥಾನದಿಂದ ಕಮಲ್‌ನಾಥ್‌ ಅವರನ್ನು ವಜಾಗೊಳಿಸಲಾಗಿದೆ. ತೆರವಾಗಿರುವ ಸ್ಥಾನಕ್ಕೆ ಜಿತು ಪಟ್ವಾರಿ ಅವರನ್ನು ನೇಮಿಸಲಾಗಿದೆ. ಸೋಲಿನ ಹೊರತಾಗಿಯೂ ಕೂಡ ಕಮಲ್‌ನಾಥ್‌ ಪಕ್ಷಕ್ಕಾಗಿ ಅಭೂತಪೂರ್ವವಾಗಿ ದುಡಿದಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಲಾಗಿದೆ. ನೂತನ ಅಧ್ಯಕ್ಷ ಜಿತು ಅವರು ರಾವು ಕ್ಷೇತ್ರದ ಶಾಸಕರೂ ಆಗಿದ್ದಾರೆ. 2018ರಿಂದ 2019ರ ಅವಧಿಯಲ್ಲಿ ಕಮಲ್‌ನಾಥ್‌ ಸರ್ಕಾರದಲ್ಲಿ ಉನ್ನತ ಶಿಕ್ಷಣ ಸಚಿವರಾಗಿದ್ದರು.

ಛತ್ತೀಸ್‌ಗಢ ಪ್ರದೇಶ ಕಾಂಗ್ರೆಸ್‌ ಸಮಿತಿಗೆ ಹಾಲಿ ಅಧ್ಯಕ್ಷ ದೀಪಕ್‌ ಬೈಜ್‌ರನ್ನು ಮುಂದುವರಿಸಲು ಕಾಂಗ್ರೆಸ್‌ ವರಿಷ್ಠರು ತೀರ್ಮಾನಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next