ಹೊಸದಿಲ್ಲಿ: ದೇಶದ ಸಂಸ್ಕೃತಿ ಮತ್ತು ಪರಂಪರೆಯನ್ನು ಬಿಂಬಿಸುವ 190 “ಭಾರತ್ ಗೌರವ’ ರೈಲುಗಳನ್ನು ಓಡಿಸಲು ಸರಕಾರ ಮುಂದಾಗಿದೆ.
ಐಆರ್‌ಸಿಟಿಸಿ ಮತ್ತು ಖಾಸಗಿಯವರು ಜತೆಯಾಗಿ ಈ ರೈಲುಗಳನ್ನು ಓಡಿಸಲಿದ್ದಾರೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.
ಮಂಗಳವಾರ ಹೊಸದಿಲ್ಲಿಯಲ್ಲಿ ಮಾತನಾಡಿದ ಅವರು, ಇದೊಂದು ಥೀಮ್ ಆಧಾರಿತ ರೈಲು ಸಂಚಾರ ವ್ಯವಸ್ಥೆ. ಈ ಉದ್ದೇಶಕ್ಕಾಗಿ 190 ರೈಲುಗಳು ಮತ್ತು 3,033 ಕೋಚ್‌ಗಳನ್ನು ಗುರುತಿಸಲಾಗಿದೆ.
ಪ್ರಯಾಣಿಕರ ರೈಲು, ಸರಕು ಸಾಗಣೆ ರೈಲು ಬಳಿಕ ಈಗ, ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಹೊಸ ಮಾದರಿಯ ವ್ಯವಸ್ಥೆ ಜಾರಿ ಮಾಡಲಿದ್ದೇವೆ ಎಂದಿದ್ದಾರೆ. ಖಾಸಗಿ ಸಂಸ್ಥೆಗಳಿಗೆ ಈ ವ್ಯವಸ್ಥೆಯಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ ಮಂಗಳವಾರದಿಂದಲೇ ಅರ್ಜಿ ಆಹ್ವಾನಿಸಲು ಕ್ರಮ ಕೈಗೊಳ್ಳಲಾಗಿದೆ.
ಇದನ್ನೂ ಓದಿ:20 ವರ್ಷಗಳ ನಂತರ ಸಿಕ್ಕಿಬಿದ್ದ ಕೊಲೆಗಾರ
ಇಂಟೆಗ್ರಲ್ ಕೋಚ್ ಫ್ಯಾಕ್ಟರಿಯಲ್ಲಿ “ಭಾರತ್ ಗೌರವ್’ ಕೋಚ್‌ಗಳನ್ನು ಸಿದ್ಧಪಡಿಸಲು ಯೋಜನೆ ರೂಪಿಸಲಾಗಿದೆ. ಥೀಮ್ ಆಧಾರಿತ ರೈಲು ಸಂಚಾರಕ್ಕೆ ಪ್ರಧಾನಿ ಮೋದಿ ಹಿಂದೊಮ್ಮೆ ಸೂಚಿಸಿದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ವೈಷ್ಣವ್ ತಿಳಿಸಿದ್ದಾರೆ.