ಮುಂಬಯಿ: ಮಹಾರಾಷ್ಟ್ರ ಅರ್ಬನ್ ಕೋ- ಆಪರೇಟಿವ್ ಬ್ಯಾಂಕ್ಸ್ ಫೆಡರೇಶನ್ ಲಿಮಿಟೆಡ್ ಕೊಡಮಾಡುವ ಸಹಕಾರಿ ಕ್ಷೇತ್ರದ ರಾಜ್ಯದ “ಸರ್ವೋತ್ಕೃಷ್ಟ ಸಾಧಕ ಬ್ಯಾಂಕ್ ಪುರಸ್ಕಾರ’ 2015-2016 ರ ಕ್ಯಾಲೆಂಡರ್ ವರ್ಷದ ವಾರ್ಷಿಕ ವ್ಯವಹಾರ ರೂ. 3,000 ಕೋ. ಮೊತ್ತಕ್ಕಿಂತ ಅಧಿಕ ವ್ಯವಹಾರಕ್ಕಾಗಿ ಸತತ 6ನೇ ಬಾರಿ ಭಾರತ್ ಕೋ. ಆಪರೇಟಿವ್ ಬ್ಯಾಂಕ್‌ಗೆ ಲಭಿಸಿದೆ.
“ಸರ್ವೋತ್ಕೃಷ್ಟ ಸಾಧಕ ಬ್ಯಾಂಕ್ ಪುರಸ್ಕಾರ-2016′ ಮತ್ತು ಮಾಹಿತಿ ತಂತ್ರಜ್ಞಾನ (ಐಟಿ) ವಿಭಾಗದ ಉತ್ಕೃಷ್ಟ ಪುರಸ್ಕಾರವನ್ನು ವಡಾಲದ ಭಾರತೀಯ ಕ್ರೀಡಾ ಮಂದಿರ ಸಂಕುಲದ ಸಭಾಗೃಹದಲ್ಲಿ ನಡೆದ ಬ್ಯಾಂಕ್ಸ್ ಫೆಡರೇಶನ್ ಲಿಮಿಟೆಡ್‌ನ 38ನೇ ವಾರ್ಷಿಕ ಮಹಾಸಭೆಯಲ್ಲಿ ಪ್ರದಾನಿಸಲಾಯಿತು.
ಸಮಾರಂಭದಲ್ಲಿ ಫೆಡರೇಶನ್ ಅಧ್ಯಕ್ಷ ವಿದ್ಯಾಧರ್ ಅನಾಸ್ಕರ್ ಅವರನ್ನೊಳಗೊಂಡು ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ರಾಜ್ಯ ಸಚಿವ ಸುಭಾಶ್ ರಾವ್ ದೇಶ್‌ಮುಖ್ ಅವರು ಭಾರತ್ ಬ್ಯಾಂಕಿನ ಕಾರ್ಯಾಧ್ಯಕ್ಷ ಜಯ ಸಿ. ಸುವರ್ಣ ಹಾಗೂ ಆಡಳಿತ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಿ. ಆರ್. ಮೂಲ್ಕಿ ಅವರಿಗೆ ಪುರಸ್ಕಾರ ಫಲಕ ಪ್ರದಾನಿಸಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಬ್ಯಾಂಕ್‌ನ ಮಾತೃ ಸಂಸ್ಥೆ ಬಿಲ್ಲವರ ಅಸೋಸಿ ಯೇಶನ್ ಮುಂಬಯಿ ಇದರ ಅಧ್ಯಕ್ಷ ನಿತ್ಯಾನಂದ ಡಿ. ಕೋಟ್ಯಾನ್, ಭಾರತ್ ಬ್ಯಾಂಕಿನ ಉಪ ಕಾರ್ಯಾಧ್ಯಕ್ಷೆ ನ್ಯಾಯವಾದಿ ರೋಹಿಣಿ ಜೆ. ಸಾಲ್ಯಾನ್ ನಿರ್ದೇಶಕರುಗಳಾದ ಯು. ಎಸ್. ಪೂಜಾರಿ, ಚಂದ್ರಶೇಖರ ಎಸ್. ಪೂಜಾರಿ, ಆರ್. ಡಿ. ಪೂಜಾರಿ, ಗಂಗಾಧರ್ ಜೆ. ಪೂಜಾರಿ, ಜ್ಯೋತಿ ಕೆ. ಸುವರ್ಣ, ಮಾಜಿ ನಿರ್ದೇಶಕ್ ಎನ್. ಎಂ. ಸನಿಲ್, ನ್ಯಾಯವಾದಿ ಶಶಿಧರ್ ಕಾಪು, ಮಹಾ ಪ್ರಂಬಧಕ (ಐಟಿ ವಿಭಾಗ) ನಿತ್ಯಾನಂದ ಡಿ. ಕಿರೋಡಿಯನ್, ಉಪ ಪ್ರಧಾನ ಪ್ರಬಂಧಕ ಹಾಗೂ ಅಭಿವೃದ್ಧಿ ಇಲಾಖಾ ಮುಖ್ಯಸ್ಥ ಮೋಹನ್‌ದಾಸ್ ಹೆಜ್ಮಾಡಿ ಉಪಸ್ಥಿತರಿದ್ದು ಪ್ರಶಸ್ತಿಗಾಗಿ ಹರ್ಷ ವ್ಯಕ್ತಪಡಿಸಿದರು.
ಸಚಿವ ದೇಶ್‌ಮುಖ್ ಅವರು ಮಾತನಾಡಿ, ಸಹಕಾರಿ ಕ್ಷೇತ್ರವು ತಮ್ಮ ದಕ್ಷತೆಯ ಸೆೇವೆಯೊಂದಿಗೆ ಸಂತೃಪ್ತಿಯನ್ನು ಹೊಂದಿದೆ. ಸಮಾಜದಲ್ಲಿ ತಮ್ಮ ಸಮಸ್ಯೆಗಳ ವೇದನೆಯನ್ನು ನಾವು ಅರ್ಥೈಸಿಕೊಂಡಿದ್ದೇವೆ. ನೋಟುಗಳ ಅಮಾನ್ಯದಲ್ಲೂ ಅವಿರತ ಶ್ರಮದೊಂದಿಗೆ ಸಮಾಜವನ್ನು ವಿಶ್ವಾಸಕ್ಕೆ ಪಡೆದ ತಮ್ಮ ಕಾರ್ಯವೈಖರಿ ಪ್ರಶಂಸನೀಯ. ಪಾರದರ್ಶಕತ್ವದ ಮೂಲಕ ಪುರಸ್ಕಾರಕ್ಕೆ ಆಯ್ಕೆಗೊಳಿಸಿದ ಫೆಡರೇಶನ್‌ನ ಸೇವೆಯೂ ಅಭಿನಂದನೀಯ. ನಿಮ್ಮೆಲ್ಲರ ಮೂಲಕ ರಾಜ್ಯರಾಷ್ಟ್ರದ ಪ್ರಗತಿ ಆಗಲಿ ಎಂದು ಹಾರೈಸಿದರು.
ಫೆಡರೇಶನ್‌ನ ಸೇವೆಯನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮುಕ್ತಕಂಠದಿಂದ ಶ್ಲಾಘಿಸಿದೆ. ಇದಕ್ಕೆ ಎಲ್ಲರ ಸಹಯೋಗ ಮತ್ತು ಸಕ್ರಿಯತೆಯೇ ಕಾರಣ. ಸರಕಾರಿ ತತ್ವಾನುಸಾರ ಸಹಕಾರಿ ಸಂಸ್ಥೆಗಳು ಪ್ರಾಮಾಣಿಕವಾಗಿ ಕಾರ್ಯಾಚರಿಸುವುದರಿಂದ ಸಂಸ್ಥೆ ಮತ್ತು ಬ್ಯಾಂಕುಗಳ ಅಭಿವೃದ್ಧಿ ಸಾಧ್ಯವಾಗಿದೆ ಎಂದು ಅಧ್ಯಕ್ಷೀಯ ನುಡಿಗಳನ್ನಾಡಿ ಅನಾಸ್ಕರ್ ತಿಳಿಸಿದರು.
ಮಾಜಿ ವಿತ್ತ ರಾಜ್ಯ ಸಚಿವ, ಹಾಲಿ ಸಂಸದ ಆನಂದ್‌ರಾವ್ ಅಡೂÕಲ್, ಬ್ಯಾಂಕ್ಸ್ ಫೆಡರೇಶನ್‌ನ ಸಂಚಾಲಕ ಭಾಸ್ಕರ್ ರಾವ್ ಕೊಠಾಬ್ಡೆ, ಅಶೋಕ್ ಶುಕ್ಲ, ಗುಲಾಬ್‌ರಾವ್ ಶೇಳ್ಕೆ ಮತ್ತಿತರ ಪದಾಧಿಕಾರಿಗಳು ಉಪಸ್ಥಿತರಿದ್ದರು. ಫೆಡರೇಶನ್‌ನ ಸಿಇಒ ಸಾಯಿಲೀ ಭೋಯಿರ್ ಕಾರ್ಯಕ್ರಮ ನಿರೂಪಿಸಿ ದರು. ಉಪಾಧ್ಯಕ್ಷ ರಮಾಕಾಂತ್ ಖೇತನ್ ವಂದಿಸಿದರು.
ಚಿತ್ರ-ವರದಿ : ರೋನ್ಸ್ ಬಂಟ್ವಾಳ್