ನವದೆಹಲಿ:ಜಿಎಸ್ ಟಿಯಲ್ಲಿ ಕೆಲವು ವಿವಾದಾತ್ಮ ಅಂಶಗಳು ತೈಲ ಬೆಲೆ ಏರಿಕೆ ಖಂಡಿಸಿ ಅಖಿಲ ಭಾರತೀಯ ವ್ಯಾಪಾರಿಗಳ ಒಕ್ಕೂಟ ಶುಕ್ರವಾರ(ಫೆ.26, 2021) ಭಾರತ್ ಬಂದ್ ಗೆ ಕರೆ ಕೊಟ್ಟಿದ್ದು, ಇದರಲ್ಲಿ 40 ಸಾವಿರ ವ್ಯಾಪಾರಿಗಳ ಸಂಘಟನೆಯ 8 ಕೋಟಿ ವರ್ತಕರು ಭಾಗಿಯಾಗಿದ್ದು, ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದೆ.
ಇದನ್ನೂ ಓದಿ:ಅತೀಯಾದ ‘ಮದ್ಯ’ ಸೇವನೆಯಿಂದ ‘ಸ್ತನ ಕ್ಯಾನ್ಸರ್’ ..ಮಹಿಳೆಯರೇ ಹುಷಾರ್
ಜಿಎಸ್ ಟಿ ವ್ಯವಸ್ಥೆಯಲ್ಲಿ ಇತ್ತೀಚೆಗೆ ಮಾಡಿರುವ ತಿದ್ದುಪಡಿಯನ್ನು ತೆಗೆದು ಹಾಕಬೇಕು, ತೆರಿಗೆ ಸ್ತರವನ್ನು ಇನ್ನಷ್ಟು ಸರಳೀಕರಣಗೊಳಿಸಬೇಕು, ಇ-ವೇ ಬಿಲ್ ಪದ್ಧತಿ ರದ್ದು ಮಾಡಬೇಕು, ದೇಶವ್ಯಾಪಿ ಒಂದೇ ರೀತಿಯಲ್ಲಿ ಡೀಸೆಲ್ ದರ ನಿಗದಿಗೊಳಿಸಬೇಕು ಎಂದು ಸಿಎಐಟಿ ಒತ್ತಾಯಿಸಿದೆ.
ಜಿಎಸ್ ಟಿ, ತೈಲ ದರ ಏರಿಕೆ ಖಂಡಿಸಿ ಇಂದು ಭಾರತ್ ವ್ಯಾಪಾರ ಬಂದ್ ನಡೆಸುವ ಮೂಲಕ ಪ್ರತಿಭಟನೆ ನಡೆಸಲಾಗುತ್ತಿದೆ. ದೇಶದ 1500 ಸ್ಥಳಗಳಲ್ಲಿ ಧರಣಿ ನಡೆಸಲಾಗುತ್ತಿದೆ.
ದೇಶಾದ್ಯಂತ ಎಲ್ಲಾ ವಾಣಿಜ್ಯ ಮಾರುಕಟ್ಟೆಯನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಲಾಗುತ್ತಿದೆ. ತಮ್ಮ ಪ್ರತಿಭಟನೆಗೆ ಆಲ್ ಇಂಡಿಯಾ ಟ್ರಾನ್ಸ್ ಫೋರ್ಟರ್ಸ್ ವೆಲ್ ಫೇರ್ ಅಸೋಸಿಯೇಶನ್(ಎಐಟಿಡಬ್ಲ್ಯುಎ) ಬೆಂಬಲ ಸೂಚಿಸಿದೆ ಎಂದು ಸಿಎಐಟಿ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಖಂಡೇಲ್ ವಾಲ್ ತಿಳಿಸಿದ್ದಾರೆ.
ಕಳೆದ ನಾಲ್ಕು ವರ್ಷಗಳಲ್ಲಿ ಜಿಎಸ್ ಟಿಗೆ ಸುಮಾರು 950 ತಿದ್ದುಪಡಿಯನ್ನು ತರಲಾಗಿದೆ ಎಂದು ಸಿಎಐಟಿ ತಿಳಿಸಿದ್ದು, ಇದರಿಂದ ತೆರಿಗೆ ಹೊರೆ ಹೆಚ್ಚಳವಾಗುತ್ತಿರುವುದಾಗಿ ಸಿಎಐಟಿ ಆರೋಪಿಸಿದೆ.