ನವದೆಹಲಿ: ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಮೂರು ನೂತನ ಕೃಷಿ ಕಾಯ್ದೆಯನ್ನು ವಿರೋಧಿಸಿ ರೈತ ಸಂಘಟನೆಗಳು ದೆಹಲಿ ಗಡಿಯಲ್ಲಿ ನಡೆಸುತ್ತಿರುವ ಪ್ರತಿಭಟನೆ ನಾಲ್ಕು ತಿಂಗಳು ಪೂರೈಸಿರುವ ಹಿನ್ನೆಲೆಯಲ್ಲಿ ಶುಕ್ರವಾರ(ಮಾರ್ಚ್) ಭಾರತ್ ಬಂದ್ ಗೆ ಕರೆ ಕೊಟ್ಟಿದ್ದು, ದೆಹಲಿ ಗಡಿ ಭಾಗದಲ್ಲಿ ಪ್ರತಿಭಟನೆಯ ಬಿಸಿ ಹೊರತುಪಡಿಸಿದರೆ ದೇಶಾದ್ಯಂತ ಯಾವುದೇ ಪರಿಣಾಮ ಬೀರಿಲ್ಲ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ಭಾರತದಲ್ಲಿರುವ ಮುಸ್ಲಿಮರು ಒಟ್ಟಾದರೆ ನಾಲ್ಕು ಪಾಕ್ ಸೃಷ್ಟಿ: ಟಿಎಂಸಿ ಮುಖಂಡ ಶೇಖ್
ದೆಹಲಿ, ಚಂಡೀಗಢ್, ಫಿರೋಜಾಬಾದ್ ಮತ್ತು ಅಮೃತ್ ಸರ್ ನಲ್ಲಿ ರೈತ ಮುಖಂಡರ ಪ್ರತಿಭಟನೆಯಿಂದ 30ಕ್ಕೂ ಅಧಿಕ ರೈಲು ಸಂಚಾರವನ್ನು ರದ್ದುಗೊಳಿಸಲಾಗಿದೆ. ಗಾಜಿಪುರ್ ಗಡಿಯ ರಾಷ್ಟ್ರೀಯ ಹೆದ್ದಾರಿಯನ್ನು ತಡೆದು ಪ್ರತಿಭಟನೆ ನಡೆಸುತ್ತಿದ್ದ ಪರಿಣಾಮ ಸಂಚಾರ ವ್ಯವಸ್ಥೆಗೆ ಅಡ್ಡಿಯುಂಟಾಗಿದೆ ಎಂದು ವರದಿ ವಿವರಿಸಿದೆ.
ದೇಶದ ಇತರ ಭಾಗದಲ್ಲಿ ಭಾರತ್ ಬಂದ್ ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಎಲ್ಲೆಡೆ ಬಸ್, ರೈಲು ಸಂಚಾರ ಹಾಗೂ ಎಂದಿನಂತೆ ವ್ಯಾಪಾರ, ವಹಿವಾಟು ಚಟುವಟಿಕೆ ನಡೆಯುತ್ತಿದೆ.
ಕೇಂದ್ರದ ಕೃಷಿ ಕಾಯ್ದೆ ವಿರೋಧಿಸಿ ರೈತ ಸಂಘಟನೆಗಳು ನವೆಂಬರ್ 26ರಿಂದ ಸಿಂಘು ಗಡಿ, ಗಾಜಿಪುರ್ ಮತ್ತ ಟಿಖ್ರಿ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಭಟನೆಯ ಹಿನ್ನೆಲೆಯಲ್ಲಿ ಹಾಲು ಮತ್ತು ತರಕಾರಿ ಸರಬರಾಜು ನಿಲ್ಲಿಸುವುದಾಗಿ ಸಂಯುಕ್ತ್ ಕಿಸಾನ್ ಮೋರ್ಚಾ ಮುಖಂಡ ದರ್ಶನ್ ಪಾಲ್ ವಿಡಿಯೋ ಸಂದೇಶದಲ್ಲಿ ತಿಳಿಸಿದ್ದರು.
ಬೆಳಗ್ಗೆ 6ಗಂಟೆಯಿಂದ ಸಂಜೆ 6ಗಂಟೆವರೆಗೆ ಪ್ರತಿಭಟನೆ ಶಾಂತಿಯುತವಾಗಿ ನಡೆಯಲಿದ್ದು, ಯಾವುದೇ ಕಾರಣಕ್ಕೂ ಅಹಿತಕರ ಘಟನೆಯಲ್ಲಿ ಶಾಮೀಲಾಗುವುದು, ಹಿಂಸಾಚಾರ ನಡೆಸಕೂಡದು ಎಂದು ರೈತ ಸಂಘಟನೆಗಳು ಈ ಸಂದರ್ಭದಲ್ಲಿ ಮನವಿ ಮಾಡಿಕೊಂಡಿರುವುದಾಗಿ ವರದಿ ತಿಳಿಸಿದೆ.