Advertisement

ಜ್ಞಾನ ಬಿತ್ತುವ ಪುಸ್ತಕಕ್ಕೆ ಮೂಷಿಕ ಕಾಟ!

06:33 PM Oct 31, 2019 | Naveen |

ಭರಮಸಾಗರ: ಓದುಗರರ ಬೇಡಿಕೆಗೆ ತಕ್ಕಷ್ಟು ದಿನ ಪತ್ರಿಕೆಗಳು ಮತ್ತು ಪುಸ್ತಕಗಳ ಪೂರೈಕೆ ಕೊರತೆ. ಲಭ್ಯವಿರುವ ಪುಸ್ತಕಗಳನ್ನೇ ಸುಸ್ಥಿತಿಯಲ್ಲಿಡಲು ಅಗತ್ಯ ಸಾಮಾಗ್ರಿಗಳ ಕೊರತೆಗಳ ನಡುವೆ ಕಳೆದ 25 ವರ್ಷಗಳಿಂದ ನಡೆದುಕೊಂಡು ಬಂದಿದೆ ಸ್ಥಳೀಯ ಸಾರ್ವಜನಿಕ ಗ್ರಂಥಾಲಯ.

Advertisement

1982-83ರಲ್ಲಿ ಸ್ವಾಮಿ ವಿವೇಕಾನಂದ ಅಧ್ಯಯನ ಕೇಂದ್ರವಾಗಿತ್ತು. 1994ರಲ್ಲಿ ಗ್ರಾಮ ಪಂಚಾಯಿತಿ ಗ್ರಂಥಾಲಯವನ್ನಾಗಿ ಬದಲಾಯಿಸಲಾಯಿತು. ರಾಜರಾಮ್‌ ಮೋಹನ್‌ ರಾಯ್‌ ಗ್ರಂಥಾಲಯ ಪ್ರತಿಷ್ಠಾನ ಕಲ್ಕತ್ತಾ ಯೋಜನೆ ಮತ್ತು ಸಂಸತ್‌ ಸದಸ್ಯ ಜಿ.ಮಲ್ಲಿಕಾರ್ಜುನಪ್ಪ ಅನುದಾನದಡಿ ನೂತನ ಗ್ರಂಥಾಲಯವನ್ನು 2004ರಲ್ಲಿ 3.50 ಲಕ್ಷಗಳ
ವೆಚ್ಚದಲ್ಲಿ 45×30 ಅಳತೆಯ ನಿವೇಶನದಲ್ಲಿ ಈಗಿನ ಸರಕಾರಿ ಶಾಲೆ ಎದುರು ಸುಸಜ್ಜಿತ ಕಟ್ಟಡ ನಿರ್ಮಾಣ ಮಾಡಲಾಗಿದೆ.

ಒಂದೇ ಒಂದು ರಾಜ್ಯಮಟ್ಟದ ಪತ್ರಿಕೆ ಗ್ರಂಥಾಲಯದಲ್ಲಿ ಲಭ್ಯವಿದೆ. ಇದರಿಂದ ಗ್ರಂಥಾಲಯಕ್ಕೆ ನಿತ್ಯ ಭೇಟಿ ನೀಡುವವರ ಸಂಖ್ಯೆ ಬೆಳಗ್ಗೆ ಮತ್ತು ಸಂಜೆ ಸೇರಿ 10ರಿಂದ 30 ಮೀರುತ್ತಿಲ್ಲ. ಬರುವವರ ಸಹಿ ಪಡೆದು ದಾಖಲಿಸುವ ವ್ಯವಸ್ಥೆಯಿದೆ. ಗ್ರಂಥಾಲಯ ಆವರಣ ಹಸಿರು ಗಿಡ ಮರಗಳಿಂದ ಕಂಗೊಳಿಸುತ್ತಿದೆ. ಆದರೆ ಓದುಗರೇ ಸಂಖ್ಯೆಯೇ ಇಳಿಮುಖವಾಗಿರುವುದು ಕಾಣಸಿಗುತ್ತದೆ.

3370 ಪುಸ್ತಕಗಳು ಲಭ್ಯವಿವೆ. ಕಥೆ, ಕಾದಂಬರಿ, ವಿಜ್ಞಾನ, ಕೃಷಿ, ಸಂಶೋಧನೆ, ನೀತಿ ಕಥೆಗಳು,
ಸ್ಪರ್ಧಾತ್ಮಕ ಪರೀಕ್ಷಾ ಪುಸ್ತಕಗಳು ಸೇರಿದಂತೆ ವಿವಿಧ ಸಾಹಿತ್ಯ ಪ್ರಕಾರಗಳಿಗೆ ಸೇರಿದ ಪುಸ್ತಕಗಳಿವೆ. 150 ಜನ ನೋಂದಣಿ ಸದಸ್ಯರಿದ್ದಾರೆ. ಸುತ್ತಮುತ್ತಲ ಹಳ್ಳಿಗರು, ನೌಕರರು ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯತ್ವ ಪಡೆದಿದ್ದಾರೆ.

ಸದಸ್ಯತ್ವ ಶುಲ್ಕ 1400 ರೂ. ಹಾಗೂ ಅರ್ಜಿ ಶುಲ್ಕ 150 ರೂ.ಗಳಾಗಿದೆ. ಬೆಳಗ್ಗೆ 9ರಿಂದ 11ರವರೆಗೆ ಹಾಗೂ ಸಂಜೆ 4ರಿಂದ 6ರವರೆಗೆ ಗಂಥಾಲಯ ಬಾಗಿಲು ತೆರೆದಿರುತ್ತದೆ. ಪ್ರತಿ ವರ್ಷ ಜಿಲ್ಲಾ ಕೇಂದ್ರ ಗ್ರಂಥಾಲಯದಿಂದಲೇ ಹೊಸ ಪುಸ್ತಕಗಳು ಬರಬೇಕು. ಸರಾಸರಿ ವರ್ಷಕ್ಕೆ 100ರಿಂದ 200 ಹೊಸ ಪುಸ್ತಕಗಳು ಇಲ್ಲಿನ ಗ್ರಂಥಾಲಯ ಸೇರ್ಪಡೆ ಆಗುತ್ತವೆ. ಪ್ರತ್ಯೇಕ ಅನುದಾನ ಯಾವುದು ಬರುವುದಿಲ್ಲ. ಪುಸ್ತಕಗಳನ್ನು ಸಂಗ್ರಹಿಸಿಡಲು ಇರುವ 3 ಬೀರುಗಳಲ್ಲಿ ಒಂದು ಶಿಥಿಲವಾಗಿದೆ. ಪುಸ್ತಕ ಜೋಡಿಸಲು ರ್ಯಾಕ್‌ಗಳ ಅವಶ್ಯಕತೆಯಿದೆ. ಓದುಗರ ಟೇಬಲ್‌-2, ಚೇರ್‌ -12, ಮೇಲ್ವಿಚಾರಕರ ಟೇಬಲ್‌-1, ರ್ಯಾಕ್‌-2 ಇದೆ.ವಿದ್ಯುತ್‌, ಪ್ಯಾನ್‌ ವ್ಯವಸ್ಥೆಯಿದೆ. ರ್ಯಾಕ್‌ನಲ್ಲಿ ಪುಸ್ತಕಗಳನ್ನು ಇಟ್ಟರೆ ಇಲಿ-ಹೆಗ್ಗಣಗಳು ಕಡಿದು ತುಂಡರಿಸುತ್ತವೆ. ಕಿಟಕಿಗಳಿಗೆ ಮೆಶ್‌ ಅಳವಡಿಸಿದ್ದರೂ ಇಲಿಗಳು ಬಾಗಿಲ ಬಳಿಯೇ ನುಸುಳಿ ಒಳ ಸೇರಿ ಪುಸ್ತಕಗಳ ಪಾಲಿಗೆ ಕಂಟಕವಾಗಿವೆ.

Advertisement

ಗ್ರಂಥಾಲಯ ಮೇಲ್ವಿಚಾರಕರ ಹುದ್ದೆಯಲ್ಲಿರುವ ಎಂ.ವೀಣಾ ಅವರು ಕಳೆದ 25 ವರ್ಷಗಳಿಂದ ಕೇವಲ ಏಳು ಸಾವಿರದ ಗೌರವ ಧನಕ್ಕೆ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ಕಸ ಗೂಡಿಸಲು 100 ರೂ.ಗಳನ್ನು ಸರಕಾರದಿಂದ ನೀಡಲಾಗುತ್ತದೆ. ಮೇಲ್ವಿಚಾರಕರ ಖಾಯಂ ಮಾಡುವಂತೆ ದಶಕಗಳಿಂದ ಹೋರಾಟವನ್ನು ರಾಜ್ಯಮಟ್ಟದಲ್ಲಿ ನಡೆಸಿಕೊಂಡು ಬಂದಿದ್ದಾರೆ.

ಈಗಾಗಲೇ ರಾಜ್ಯದ ಹಲವು ಗ್ರಂಥಾಲಯಗಳ ಸಿಬ್ಬಂದಿ ತಮ್ಮ ಸೇವೆಯಿಂದ ನಿವೃತ್ತರಾಗಿದ್ದಾರೆ. ಯಾವುದೇ ಪಿಂಚಣಿಯಿಲ್ಲದೆ ಕೇವಲ ಗೌರವ ಧನಕ್ಕೆ ಸಿಬ್ಬಂದಿ ದುಡಿಯುತ್ತಿದ್ದಾರೆ. ಗಣಕೀಕೃತ ಗ್ರಂಥಾಲಯ ವ್ಯವಸ್ಥೆ ಆಗಿಲ್ಲ. ಇಲಿಗಳ ಕಾಟಕ್ಕೆ ಪುಸ್ತಕಗಳ ರಕ್ಷಣೆ ಮಾಡಲು ಸಾಧ್ಯವಾಗುತ್ತಿಲ್ಲ. ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿಲ್ಲ. ಶೌಚಾಲಯ
ಇದ್ದರೂ ಬಳಕೆ ಆಗುತ್ತಿಲ್ಲ. ಓದುಗರಿಗೆ ಪ್ರತ್ಯೇಕ ಶೌಚಲಾಯ ಸೌಕರ್ಯವಿಲ್ಲ. ಹೀಗೆ ಹಲವು ಇಲ್ಲಗಳ ನಡುವೆ ಗ್ರಂಥಾಲಯ ಬಳಲುತ್ತಿದೆ. ಇನ್ನದರೂ ಸರಕಾರ ಗ್ರಂಥಾಲಯ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಬೇಕು ಎಂಬುದು ಗ್ರಂಥಾಲಯ ಬಳಕೆದಾರರ ಆಗ್ರಹ.

Advertisement

Udayavani is now on Telegram. Click here to join our channel and stay updated with the latest news.

Next