ಭರಮಸಾಗರ: ಸತತ ಬರದಿಂದ ಕಂಗಾಲಾಗಿದ್ದ ಜಿಲ್ಲೆಯ ರೈತರು ಕಳೆದ ಒಮದು ವಾರದಿಂದ ಸುರಿದ ಮಳೆಯಿಂದ ನಿಟ್ಟುಸಿರು ಬಿಟ್ಟಿದ್ದರು. ಆದರೆ ಧಾರಾಕಾರ ಮಳೆಗೆ ಕಾಳು ಕಟ್ಟುವ ಹಂತದಲ್ಲಿದ್ದ ಮೆಕ್ಕೆಜೋಳ ಮತ್ತು ರಾಗಿ ನೆಲಕ್ಕುರುಳಿರುವುದು ಸಮಸ್ಯೆ ತಂದೊಡ್ಡಿದೆ.
ಚಿತ್ರದುರ್ಗ ತಾಲೂಕಿನ ಭರಮಸಾಗರ, ತುರುವನೂರು, ಹಿರೇಗುಂಟನೂರು, ತುರುವನೂರು, ಕಸಬಾ ಹೋಬಳಿ ವ್ಯಾಪ್ತಿಯಲ್ಲಿ 30,685 ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಮತ್ತು 4555 ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬೆಳೆಯಲಾಗಿದೆ. ರೋಹಿಣಿ ಮಳೆಗೆ ಬಿತ್ತನೆ ಮಾಡಿದ್ದ ಮೆಕ್ಕೆಜೋಳ ಫಸಲು ಕಾಳು ಕಟ್ಟುವ ಹಂತ ತಲುಪಿತ್ತು. ಆದರೆ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ನಷ್ಟಕ್ಕೆ ತುತ್ತಾಗುತ್ತಿದೆ.
ಯೂರಿಯಾ ಅತಿ ಬಳಕೆಯೂ ಕಾರಣ?: ಹೆಚ್ಚಿನ ಇಳುವರಿ ಪಡೆಯುವ ಧಾವಂತದಲ್ಲಿ ರೈತರು, ಯೂರಿಯಾ ಗೊಬ್ಬರವನ್ನು ಹೆಚ್ಚಿನ ಪ್ರಮಾಣದಲ್ಲಿ ಅಂದರೆ ಎಕರೆಗೆ ಒಂದು ಪ್ಯಾಕೆಟ್ ಬಳಕೆ ಮಾಡಿದ್ದರು.
ಇದರಿಂದಾಗಿ ಮೆಕ್ಕೆಜೋಳದ ದಂಟು ನೇರವಾಗಿ ನಿಲ್ಲಲಾಗದೆ ನೆಲಕ್ಕೆ ಬೀಳುತ್ತಿದೆ. ವಾಡಿಕೆಗಿಂತ ಈ ಬಾರಿ ಹೆಚ್ಚು ಮಳೆಯಾಗುತ್ತಿದೆ. ಇದರಿಂದ ತೆನೆ ಹೊತ್ತ ಮೆಕ್ಕೆಜೋಳದ ದಂಟು ಮಳೆ ಮತ್ತು ಗಾಳಿಯ ಹೊಡೆತಕ್ಕೆ ನೆಲಕ್ಕೆ ಉರುಳುತ್ತಿದೆ. ಇದರಿಂದ ತೆನೆ ಮಣ್ಣಿನ ಸಂಪರ್ಕಕ್ಕೆ ಸಿಲುಕಿ ಕಾಳು ಸಿಗದೇ ಇರುವ ಭೀತಿ ಎದುರಾಗಿದೆ.
ಎಕರೆಗೆ 20 ರಿಂದ 35 ಕ್ವಿಂಟಾಲ್ ಮೆಕ್ಕೆಜೋಳ ಬೆಳೆಯುವ ಸಾಹಸ ಮಾಡುವ ಈ ಭಾಗದ ರೈತರು, ಅಸಮರ್ಪಕ ಮಳೆಯ ನಡುವೆಯೂ ಕೆಲವು ಭಾಗಗಳಲ್ಲಿ ಸಮೃದ್ಧವಾಗಿ ಮೆಕ್ಕೆಜೋಳ ಬೆಳೆದಿದ್ದಾರೆ. ಕಳೆದ ವರ್ಷ ಬೆಳೆ ಇಲ್ಲದ್ದರಿಂದ ಮೆಕ್ಕೆಜೋಳದ ದರ ಕ್ವಿಂಟಲ್‌ಗೆ 2,000 ದಿಂದ 3,000 ರೂ. ಗಡಿ ತಲುಪಿತ್ತು. ಇದೀಗ ಕ್ವಿಂಟಲ್‌ಗೆ 2 ಸಾವಿರ ರೂ. ಆಸುಪಾಸಿನಲ್ಲಿರುವುದರಿಂದ ಒಂದಿಷ್ಟು ಆದಾಯ ಗಳಿಸಬಹುದು ಎಂಬ ರೈತರ ನಿರೀಕ್ಷೆಯನ್ನು ಮಳೆ ಹುಸಿಯಾಗುವಂತೆ ಮಾಡುತ್ತಿದೆ.
ರಾಗಿಯದ್ದೂ ಇದೇ ಕಥೆ: ಸಮೃದ್ಧವಾಗಿ ಬೆಳೆದ ರಾಗಿಯ ಪರಿಸ್ಥಿತಿಯೂ ಮೆಕ್ಕೆಜೋಳಕ್ಕಿಂತ ಭಿನ್ನವಾಗೇನೂ ಇಲ್ಲ. ನೆಲಕ್ಕೆ ಉರುಳಿರುವುದರಿಂದ ರಾಗಿ ತೆನೆಯಲ್ಲಿನ ಕಾಳು ನಷ್ಟವಾಗುತ್ತದೆ. ಜಾನುವಾರುಗಳಿಗೆ ಬೇಸಿಗೆಯ ಒಣ ಮೇವನ್ನು ಒದಗಿಸುವ ರಾಗಿ ಹುಲ್ಲು ಕೂಡ ಮಳೆಯಿಂದಾಗಿ ಕೊಳೆಯುವ ಸ್ಥಿತಿ ತಲುಪಿದೆ. ದುಬಾರಿ ಬಿತ್ತನೆ ಬೀಜ, ರಸಗೊಬ್ಬರ ಹಾಗೂ ಇತರೆ ಖರ್ಚುಗಳಿಂದಾಗಿ ಸಂಕಷ್ಟದಲ್ಲಿರುವ ಅನ್ನದಾತರ ಈ ಸಲ ಒಳ್ಳೆಯ ಫಸಲು ಕೈ ಸೇರುತ್ತದೆ ಎನ್ನುವ ಕಾಲಕ್ಕೆ ಮಳೆ ಅವಾಂತರ ಸೃಷ್ಟಿಸುತ್ತಿದೆ. ಒಟ್ಟಿನಲ್ಲಿ “ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ’ ಎಂಬಂತಾಗಿದೆ ರೈತರ ಸ್ಥಿತಿ.