ಎಚ್.ಬಿ. ನಿರಂಜನ ಮೂರ್ತಿ
ಭರಮಸಾಗರ: ರಾಗಿ ಕೊಯ್ಲು ಮಾಡುವಲ್ಲಿ ಕೂಲಿಕಾರರ ಸಮಸ್ಯೆಯಿಂದ ಪರಿತಪಿಸುತ್ತಿದ್ದ ಬೆಳೆಗಾರರಿಗೆ ತಮಿಳುನಾಡು ಹಾಗೂ ಬಳ್ಳಾರಿಯ ಕಂಪ್ಲಿ ಮೂಲದಿಂದ ಆಗಮಿಸಿರುವ ಮೂರು ರಾಗಿ ಕಟಾವು ಯಂತ್ರಗಳು ಇದೀಗ ರೈತರ ಪಾಲಿಗೆ ವರದಾನವಾಗಿವೆ. ಸೆಪ್ಟೆಂಬರ್, ಅಕ್ಟೋಬರ್ ತಿಂಗಳ ಮಳೆಗೆ ಸಿಲುಕಿ ರಾಗಿ ಫಸಲು ವಿಪರೀತ ನಷ್ಟಕ್ಕೆ ತುತ್ತಾಗಿತ್ತು. ಉಳಿದ ರಾಗಿ ಬೆಳೆ ಇದೀಗ ಕಟಾವಿಗೆ ಬಂದಿದೆ.
ಆದರೆ ಮಳೆಯಿಂದಾಗಿ ಬಿದ್ದ ರಾಗಿ ಕೊಯ್ಲು ಮಾಡಲು ಕೂಲಿಕಾರರು ಮತ್ತು ಗುತ್ತಿಗೆ ಹಿಡಿಯುವವರು ಹೆಚ್ಚಿನ ಹಣದ ಡಿಮ್ಯಾಂಡ್‌ನಿಂದಾಗಿ ರಾಗಿ ಸಹವಾಸವೇ ಬೇಡ ಎನ್ನುವಷ್ಟರ ಮಟ್ಟಿಗೆ ಬೆಳೆಗಾರರು ಈ ವರ್ಷ ಸಂಕಷ್ಟ ಎದುರಿಸಿದ್ದಾರೆ. ಚಿತ್ರದುರ್ಗ ತಾಲೂಕಿನಲ್ಲಿ 4555 ಹೆಕ್ಟೇರ್ ಪ್ರದೇಶದಲ್ಲಿ ಈ ಬಾರಿ ರಾಗಿ ಬೆಳೆಯಲಾಗಿದೆ.
ಎಕರೆಗೆ 10 ಸಾವಿರ ಗುತ್ತಿಗೆ ಕೇಳಿದರೆ ಇತ್ತ ದಿನಗೂಲಿಯಂತೆ ಕರೆದರೆ ಎಕರೆಗೆ 500 ರೂ. ಡಿಮ್ಯಾಂಡ್ ಇದೆ. ಇತ್ತ ಕೃಷಿ ಇಲಾಖೆಯಿಂದ ದೊರೆಯುವ ಯಂತ್ರಗಳು ನೆಲಕ್ಕೆ ಬಿದ್ದ ರಾಗಿಯನ್ನು ತೆಗೆದುಕೊಂಡು ಕೊಯ್ಲು ಮಾಡುವಲ್ಲಿ ವಿಫಲವಾಗಿದ್ದರಿಂದ ರೈತರು ಅನಿವಾರ್ಯವಾಗಿ ಕೊಯ್ಲಿಗೆ ದುಬಾರಿ ಹಣ ಖರ್ಚು ಮಾಡಬೇಕಿತ್ತು. ಇದೀಗ ಬೀರಾವರ ಕೆ.ಬಳ್ಳೇಕಟ್ಟೆ ಗ್ರಾಮಗಳಲ್ಲಿ ತಮಿಳುನಾಡು ಮೂಲದ ಮೂರು ರಾಗಿ ಕಟಾವು ಯಂತ್ರಗಳು ಬಂದಿವೆ. ಈ ಯಂತ್ರಗಳ ಮೂಲಕ ರಾಗಿ ಕಟಾವು ಸುಲಭವಾಗಿದೆ ಎಂಬ ಮಾತುಗಳು ರೈತರಿಂದ ಕೇಳಿ ಬರುತ್ತಿವೆ. ನೆಲಕ್ಕೆ ಬಿದ್ದ ರಾಗಿ ಹುಲ್ಲನ್ನು ಮಷಿನ್ ಕೊಯ್ಲಿಗೆ ತೆಗೆದುಕೊಳ್ಳುತ್ತದೆ. ರಾಗಿ ಹೊಲದಲ್ಲಿ ಚೆನ್ನಾಗಿ ಒಣಗಿದ್ದರೆ ಉತ್ತಮ ಕೊಯ್ಲು ಕಾರ್ಯ ನಿರಾತಂಕವಾಗಿ ನಡೆಯುತ್ತದೆ.
ಈ ನಡುವೆ ರೈತರು ಕಣ ಅಥವಾ ರಸ್ತೆಗಳಿಗೆ ರಾಗಿ ಹುಲ್ಲು ಹಾಕಿ ಒಕ್ಕಣಿ ಮಾಡುವ ಕೆಲಸ ತಪ್ಪುತ್ತದೆ. ಹುಲ್ಲನ್ನು ನೇರ ಸಾಲಿನಲ್ಲಿ ಮಷಿನ್ ತುಂಡು ಮಾಡದೆ ಏಕಾ ಹುಲ್ಲನ್ನು ಹಾಕುವುದರಿಂದ ಹುಲ್ಲನ್ನು ಸಿವುಡು ಕಟ್ಟದೆ ಟ್ರ್ಯಾಕ್ಟರ್ ಅಥವಾ ಗಾಡಿಯಲ್ಲಿ ಏರಿ ಕಣಗಳಲ್ಲಿ ಬಣವೆ ಮಾಡಬಹುದಾಗಿದೆ. ಇನ್ನೂ ರಾಗಿಯನ್ನು ನೇರ ಚೀಲಕ್ಕೆ ತುಂಬಿ ಮಾರುಕಟ್ಟೆಗೆ ಮಾರಾಟಕ್ಕೆ ತೆಗದುಕೊಂಡು ತೆರಳಬಹುದು.
ಒಂದು ಗಂಟೆಗೆ ಮಷಿನ್ ದರ 3600 ರೂ. ನಿಗದಿಪಡಿಸಲಾಗಿದೆ. ಒಂದು ಗಂಟೆಯಲ್ಲಿ ಮುಕ್ಕಾಲು ಅಥವಾ ಒಂದು ಎಕರೆ ರಾಗಿ ಕಟಾವು ಮಾಡಬಹುದಾಗಿದೆ. ಮಷಿನ್‌ನಲ್ಲಿ ಸುಮಾರು 10 ರಿಂದ 15 ಚೀಲ ರಾಗಿಯನ್ನು ಸಂಗ್ರಹ ಮಾಡುವ ಸಾಮರ್ಥ್ಯವಿರುವುದರಿಂದ ಹೊಲದ ಒಂದು ಬದುವಿನಲ್ಲಿ ರಾಗಿ ಸಂಗ್ರಹ ಮಾಡಲು ಅನುಕೂಲವಾಗುತ್ತದೆ. ಈವರೆಗೆ ಬ್ಯಾಲಾಳು, ಬೀರಾವರ, ಕೆ.ಬಳ್ಳೇಕಟ್ಟೆ, ಸಿದ್ದಯ್ಯನಕೋಟೆ, ವಿಜಾಪುರ, ಕಲ್ಕುಂಟೆ, ಎನ್.ಬಳಿಗಟ್ಟೆ, ತಿಮ್ಮಪ್ಪನಹಳ್ಳಿ ಸೇರಿದಂತೆ ಸುತ್ತಮುತ್ತಲ ಹಳ್ಳಿಗಳಲ್ಲಿ ಈವರೆಗೆ ಸುಮಾರು 200 ಎಕರೆಗೂ ಹೆಚ್ಚು ಕಟಾವು ಮಾಡಲಾಗಿದೆ ಎನ್ನಲಾಗಿದೆ.
ಈ ಯಂತ್ರಗಳಲ್ಲಿ ರಾಗಿ, ಸಾವೆ, ಸಜ್ಜೆ, ಮೆಕ್ಕೆಜೋಳ, ಇತರೆ ಬೆಳಗಳನ್ನು ಕಟಾವು ಮಾಡಲು ಅಗತ್ಯ ಜೋಡಣೆ ಹೊಂದಿದ್ದು, ಎಲ್ಲಾ ಬೆಳೆಗಳ ಕಟಾವಿಗೂ ಸೂಕ್ತವಾಗಿವೆ ಎನ್ನಲಾಗುತ್ತಿದೆ. ಒಟ್ಟಾರೆ ಪ್ರಸಕ್ತ ವರ್ಷದ ಮಳೆಯಿಂದ ಅದ್ವಾನವಾಗಿರುವ ರಾಗಿ ಬೆಳೆ ಕಟಾವಿನ ಸಮಯದಲ್ಲಿ ಮತ್ತಷ್ಟು ರೈತರನ್ನು ಪೇಚಿಗೆ ಸಿಲುಕಿಸಿದ ಸಮಯದಲ್ಲಿ ಇದೀಗ ಬಂದ ಕಟಾವು ಯಂತ್ರಗಳು ರೈತಾಪಿಗಳ ಮೊಗದಲ್ಲಿ ಕೊಂಚ ನಿರಾಳತೆ ಮೂಡಿಸಿದೆ.