Advertisement

ಅವಹೇಳನಕಾರಿ ಮಾತುಗಳಿಗೆ ಕ್ಷಮೆ ಕೇಳಿದ ಭಂಡಾರಿ ಸಹೋದರರು

01:37 PM Apr 04, 2018 | |

ಸಾಮಾಜಿಕ ಜಾಲತಾಣದಲ್ಲಿದಲ್ಲಿ ನಡೆದ ಖಾಸಗಿ ಸಂದರ್ಶನವೊಂದರಲ್ಲಿ “ರಾಜರಥ’ ಚಿತ್ರ ನೋಡದವರನ್ನು ಅವಹೇಳನ ಮಾಡಿದ್ದ ನಿರ್ದೇಶಕ ಅನೂಪ್‌ ಭಂಡಾರಿ, ನಾಯಕ ನಿರೂಪ್‌ ಭಂಡಾರಿ ಮತ್ತು ನಾಯಕಿ ಆವಂತಿಕಾ ಶೆಟ್ಟಿ ಅವರ ವಿರುದ್ಧ ಕೇಳಿ ಬಂದ ಮಾತುಗಳ ಸುರಿಮಳೆ ಹಿನ್ನೆಲೆಯಲ್ಲಿ, ಮಂಗಳವಾರ ವಾಣಿಜ್ಯ ಮಂಡಳಿ ಸಹೋದರರನ್ನು ಕರೆಸಿ, ಕನ್ನಡಿಗರನ್ನು ಅವಮಾನಿಸಿದ್ದಕ್ಕೆ ಬೇಷರತ್‌ ಕ್ಷಮೆಯಾಚಿಸುವಂತೆ ಮಾಡಿದೆ. ಈ ನಡುವೆ ಕನ್ನಡಿಗರಿಗೆ ಅವಮಾನಿಸಿದ್ದಾರೆ ಎಂದು ಕನ್ನಡಿಗರು ವಿಜಯನಗರ ಹಾಗು ಬಸವೇಶ್ವರನಗರ ಪೊಲೀಸ್‌ ಠಾಣೆಯಲ್ಲಿ ಸಹೋದರರ ವಿರುದ್ಧ ದೂರು ನೀಡಿದ್ದಾರೆ.

Advertisement

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು ನೇತೃತ್ವದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅನೂಪ್‌ ಭಂಡಾರಿ ಮತ್ತು ನಿರೂಪ್‌ ಭಂಡಾರಿ ಇಬ್ಬರೂ ಎದ್ದು ನಿಂತು ಕನ್ನಡಿಗರಲ್ಲಿ ಕ್ಷಮೆಯಾಚಿಸಿದರು. ಇದಕ್ಕೂ ಮುನ್ನ ಸಾ.ರಾ.ಗೋವಿಂದು ಅವರು ಮಾತನಾಡಿ, “ಸೋಮವಾರ ಮಧ್ಯಾಹ್ನದಿಂದಲೂ ನನಗೆ ಸಾಕಷ್ಟು ಫೋನ್‌ ಬರುತ್ತಲೇ ಇದ್ದವು. ಕನ್ನಡಿಗರ ಬಗ್ಗೆ ಭಂಡಾರಿ ಸಹೋದರರು ಕೇವಲವಾಗಿ ಮಾತನಾಡಿದ್ದಾರೆ. ನೀವು ಕ್ರಮ ಕೈಗೊಳ್ಳಿ ಅನ್ನುತ್ತಿದ್ದರು. ನಾನು ಆ ಸಂದರ್ಶನದಲ್ಲಿ ಆಡಿದ ಮಾತುಗಳನ್ನು ಕೇಳಿದ ಮೇಲೆ, ಸಹೋದರರನ್ನು ಮಂಡಳಿಗೆ ಕರೆಸಿ, ಮಾಧ್ಯಮ ಮೂಲಕ ಕನ್ನಡಿಗರಲ್ಲಿ ಕ್ಷಮೆಯಾಚಿಸಬೇಕು ಅಂತ ಸೂಚಿಸಿದೆ. ಕನ್ನಡ ಚಿತ್ರರಂಗದ ಎಂಟು ದಶಕದ ಇತಿಹಾಸದಲ್ಲೇ ಇದೊಂದು ಕಪ್ಪು ಚುಕ್ಕೆ ಇದ್ದಂತೆ. ಡಾ. ರಾಜಕುಮಾರ್‌, ಅಂಬರೀಶ್‌, ವಿಷ್ಣುವರ್ಧನ್‌ ಅಂತಹ ದೊಡ್ಡ ನಟರು ಕೂಡ ತಮ್ಮ ಚಿತ್ರಗಳು ಸೋತರೂ ಹೀಗೆಲ್ಲಾ ಕನ್ನಡ ಪ್ರೇಕ್ಷಕರನ್ನು ಅವಮಾನಿಸಿಲ್ಲ. ಕನ್ನಡ ಚಿತ್ರರಂಗ ದೇಶಕ್ಕೆ ಮಾದರಿ ನಟರನ್ನು ಕೊಟ್ಟಿದೆ. ಇಂತಹ ಚಿತ್ರರಂಗದಲ್ಲಿ ಈಗಷ್ಟೇ ಬೆಳೆಯುತ್ತಿರುವ ನೀವುಗಳು, ಕನ್ನಡಿಗರನ್ನು ಬೈಯುವುದು ಎಷ್ಟು ಸರಿ’ ಎಂದು ಪ್ರಶ್ನಿಸಿದರು.

“ಸಂದರ್ಶನದಲ್ಲಿ ಯಾರೋ ಏನೋ ಕೇಳಿಬಿಟ್ಟರೆ, ಬಾಯಿಗೆ ಬಂದಂತೆ ಮಾತಾಡುವುದು ಎಷ್ಟು ಸರಿ? ಅದು ತಪ್ಪು. ಅವರು ಪ್ರಚೋದನೆ ಮಾಡಲಿ, ಮಾತನಾಡುವಾಗ ಸ್ವಂತ ಬುದ್ಧಿ ಇರಲಿಲ್ಲವೇ? ಸಾಮಾನ್ಯ ಜ್ಞಾನವೂ ಇಲ್ಲದಂತೆ ಮೈ ಮರೆತು ಮಾತಾಡಿದ್ದು ತಪ್ಪು. ನಿಮ್ಮ ಮೊದಲ ಚಿತ್ರ “ರಂಗಿತರಂಗ’ ಚಿತ್ರವನ್ನು ನೋಡಿ ಗೆಲ್ಲಿಸಿದ್ದು ಇದೇ ಕನ್ನಡಿಗರೇ. ಆಗ ಕನ್ನಡಿಗರ ಮೇಲಿದ್ದಂತಹ ಗೌರವ, ಪ್ರೀತಿ, ಈಗ “ರಾಜರಥ’ ಸೋತ ಬಳಿಕ ಹೋಯ್ತಾ? ನಿಮ್ಮ ಚಿತ್ರ ಹಿಟ್‌ ಆಗಬೇಕು, ಜನ ನೋಡಬೇಕು ಎಂಬ ಕಾನೂನು ಇಲ್ಲ. ನನಗೆ ನಿಮ್ಮ ಮೇಲೆ ಕ್ರಮ ಕೈಗೊಳ್ಳುವುದು ದೊಡ್ಡ ವಿಷಯವೇನಲ್ಲ. ನೀವು ಈಗಷ್ಟೇ ಚಿತ್ರರಂಗದಲ್ಲಿ ಬೆಳೆಯುತ್ತಿದ್ದೀರಿ. ನೀವು ಮಾಡಿರುವುದು ಕ್ಷಮಿಸುವಂತಹ ತಪ್ಪಲ್ಲ. ನಿಮ್ಮ ಬಗ್ಗೆ ಎಲ್ಲರಿಗೂ ಒಳ್ಳೆಯ ಗೌರವ ಇತ್ತು. ಕನ್ನಡಿಗರ ಬಗ್ಗೆ ಕೇವಲವಾಗಿ ಮಾತನಾಡಿ, ನಿಮ್ಮ ವ್ಯಕ್ತಿತ್ವವನ್ನು ಹರಾಜು ಮಾಡಿಕೊಂಡಿದ್ದೀರಿ. ನೀವು ಕನ್ನಡಿಗರಿಗೆ ಬೈದಿಲ್ಲ ಎನ್ನುವುದಾದರೆ, ವಿದೇಶದಲ್ಲಿ ಬಿಡುಗಡೆ ಮಾಡಿರುವ ನಿಮ್ಮ ಚಿತ್ರವನ್ನು ಅಲ್ಲಿನ ಸ್ಥಳೀಯ ಜನರ ನೋಡುತ್ತಾರೆಯೇ? ಅಲ್ಲೂ ನಮ್ಮ ಕನ್ನಡಿಗರು ತಾನೇ ನಿಮ್ಮ ಚಿತ್ರ ನೋಡೋದು. ಇನ್ನು ಮುಂದೆ ಇಂತಹ ಮಾತುಗಳನ್ನಾಡದೆ, ಒಳ್ಳೆಯ ಚಿತ್ರ ಮಾಡುವತ್ತ ಗಮನಹರಿಸಿ, ಇಬ್ಬರೂ ಸಮಸ್ತ ಕನ್ನಡಿಗಲ್ಲಿ ಕ್ಷಮೆಯಾಚಿಸಿ’ ಎಂದರು ಸಾ.ರಾ.ಗೋವಿಂದು.

ಎದ್ದು ನಿಂತು ಕನ್ನಡಿಗರ ಕ್ಷಮೆ ಕೋರಿದ ಅನೂಪ್‌ ಮತ್ತು ನಿರೂಪ್‌

Advertisement

“ನಮ್ಮಿಂದ ದೊಡ್ಡ ತಪ್ಪಾಗಿದೆ. ಇನ್ನು ಮುಂದೆ ಹೀಗೆಲ್ಲಾ ಆಗುವುದಿಲ್ಲ. ನಮ್ಮನ್ನು ಕ್ಷಮಿಸಿ’ ಎಂದು ಅನೂಪ್‌ ಭಂಡಾರಿ ಹಾಗು ನಿರೂಪ್‌ ಭಂಡಾರಿ ಇಬ್ಬರೂ ಮಾಧ್ಯಮ ಎದುರು ಮಂಡಳಿ ಪದಾಧಿಕಾರಿಗಳ ಸಮ್ಮುಖದಲ್ಲಿ   ಎದ್ದು ನಿಂತು ಕೈ ಮುಗಿದು ಕನ್ನಡಿಗರಲ್ಲಿ ಕ್ಷಮೆ ಕೇಳಿದರು. “ನನಗೆ ಕನ್ನಡಿಗರ ಮೇಲೆ ಅಭಿಮಾನ, ಗೌರವ, ಪ್ರೀತಿ ಇದೆ. ಆದರೆ, ನಾವು ಎಲ್ಲೇ ಹೋದರೂ, ಓಪನ್‌ ಅಪ್‌ ಆಗೋದಿಲ್ಲ ಎಂಬ ಮಾತಿತ್ತು. ಹಾಗಾಗಿ ಆ ಶೋನಲ್ಲಿ ಜಾಲಿಯಾಗಿ ಮಾತಾಡುತ್ತಿದ್ದೆವು. ಅದೇ ಮೂಡ್‌ನ‌ಲ್ಲಿ ಆ ಮಾತು ತಪ್ಪಿ ಬಂತು. ಅವತ್ತು ಸಮಾರು 30 ಸಂದರ್ಶನ ನಡೆದಿತ್ತು. ಹಾಗಾಗಿ ತಪ್ಪಾಗಿ ಮಾತಾಡಿಬಿಟ್ವಿ. ದಯವಿಟ್ಟು ನಮ್ಮನ್ನು ಕ್ಷಮಿಸಿ. ಇನ್ನು ಮುಂದೆ ಸಿನಿಮಾ ಬಿಟ್ಟು ಬೇರೇನೂ ಮಾತಾಡುವುದಿಲ್ಲ. ನಿಮ್ಮಿಂದಲೇ ನಾವು ಗುರುತಿಸಿಕೊಂಡಿದ್ದೇವೆ. ಇನ್ನು ಮುಂದೆಯೂ ಬೆಳೆಯಲು ಅವಕಾಶ ಮಾಡಿಕೊಡಿ. ಯಾರಿಗೂ ನೋಯಿಸುವ ಉದ್ದೇಶ ನಮಗಿರಲಿಲ್ಲ. ಕನ್ನಡಿಗರಿಗೆ ನೋವಾಗಿದೆ. ಆ ನೋವು ನಮಗೂ ಆಗಿದೆ. “ರಂಗಿತರಂಗ’ ಗೆದ್ದಿದ್ದು ಕನ್ನಡಿಗರಿಂದ, ಮಾಧ್ಯಮದ ಪ್ರೋತ್ಸಾಹದಿಂದ. ಇನ್ನು ಮುಂದೆ ಇಂತಹ ತಪ್ಪು ಆಗೋದಿಲ್ಲ. ಇನ್ನು ಮುಂದೆ ಯಾವುದೇ ಶೋ, ಸಂದರ್ಶನವಿದ್ದರೂ ಗಂಭೀರವಾಗಿ ಆಗಿಯೇ ಮಾತಾಡುತ್ತೀನಿ’ ಎಂದು ನಿರ್ದೇಶಕ ಅನೂಪ್‌ ಭಂಡಾರಿ ಪುನಃ ಕ್ಷಮೆಯಾಚಿಸಿದರು. ಅಣ್ಣ ಅನೂಪ್‌ ಮಾತು ಮುಗಿಸುತ್ತಿದ್ದಂತೆಯೇ, ನಿರೂಪ್‌ ಕೂಡ ಕನ್ನಡಿಗರಲ್ಲಿ ಕ್ಷಮೆಯಾಚಿಸಿದರು. “ನಮ್ಮಿಂದ ತಪ್ಪಾಗಿದ್ದು, ಕನ್ನಡಿಗರು ದಯವಿಟ್ಟು ಕ್ಷಮಿಸಬೇಕು. ಇನ್ನು, ಮುಂದೆ ಇಂತಹ ತಪ್ಪು ನಡೆಯುವುದಿಲ್ಲ’ ಎಂದರು ನಿರೂಪ್‌.

ರ‍್ಯಾಪಿಡ್‌ ರಶ್ಮಿ ಶೋ ಬಹಿಷ್ಕರಿಸಿ


ಇನ್ನು ಮುಂದೆ ಆರ್‌ಜೆ ರ‍್ಯಾಪಿಡ್‌ ರಶ್ಮಿ ಸೋಶಿಯಲ್‌ ಮೀಡಿಯಾದಲ್ಲಿ ನಡೆಸಿಕೊಡುವ ಸಿನಿಮಾ ಶೋವನ್ನು ಬಹಿಷ್ಕರಿಸಬೇಕು ಎಂದು ಸಾ.ರಾ.ಗೋವಿಂದು ನಿರ್ಮಾಪಕ, ನಿರ್ದೇಶಕರಿಗೆ ಕರೆ ನೀಡಿದರು. “ಅಂತಹ ಕಾರ್ಯಕ್ರಮಕ್ಕೆ ಯಾರೂ ಹೋಗಬಾರದು. ಅವರು ನಡೆಸುವುದು ಕಾರ್ಯಕ್ರಮ ನಡೆಸುವುದು ದುಡ್ಡು ಪಡೆದು. ಹಣ ಕೊಟ್ಟು ಅವರಿಂದ ಕನ್ನಡಿಗರ ಗೌರವ ಹಾಳಾಗುವಂತೆ ನಡೆದುಕೊಳ್ಳಬಾರದು. ಕನ್ನಡವನ್ನು ಕೆಟ್ಟದ್ದಾಗಿ ಮಾತನಾಡಿ, ಅಸಹ್ಯ ಹುಟ್ಟಿಸುವ ರಶ್ಮಿ, ಕನ್ನಡಿಗರನ್ನು ಕೆಣಕಿದ್ದಾರೆ. ಇನ್ನು ಮುಂದೆ ಸಿನಿಮಾ ತಂಡ ಅವರು ನಡೆಸುವ ಶೋಗೆ ಹೋದರೆ, ಇಂಥದ್ದೇ ಪರಿಸ್ಥಿತಿ ಎದುರಾಗುತ್ತೆ. ಯಾರೂ ಆ ಕಾರ್ಯಕ್ರಮಕ್ಕೆ ಹೋಗುವಂತಿಲ್ಲ. ಮುಂದೆ ಹೀಗೇ ಮುಂದುವರೆದರೆ, ರಶ್ಮಿ ಮೇಲೂ ಕ್ರಮ ಕೈಗೊಳ್ಳಲು ಮಂಡಳಿ ಹಿಂದೆ ಬೀಳುವುದಿಲ್ಲ’ ಎಂದು ಗೋವಿಂದು ಈ ಸಂದರ್ಭದಲ್ಲಿ ಹೇಳಿದರು.

ಆವಂತಿಕಾ ಕ್ಷಮೆ ಕೇಳಬೇಕು


“ರಾಜರಥ’ ಚಿತ್ರದಲ್ಲಿ ನಾಯಕಿಯಾಗಿ ನಟಿಸಿರುವ  ಆವಂತಿಕಾ ಶೆಟ್ಟಿ ಕೂಡ ರ್ಯಾಪಿಡ್‌ ರಶ್ಮಿ ನಡೆಸಿಕೊಟ್ಟ ಸೋಶಿಯಲ್‌ ಮೀಡಿಯಾದ ಶೋನಲ್ಲಿ ಭಾಗವಹಿಸಿದ್ದರು. ಅವರನ್ನೂ ಸಹ ರ್ಯಾಪಿಡ್‌ ರಶ್ಮಿ, “ರಾಜರಥ’ ಚಿತ್ರವನ್ನು ನೋಡದವರಿಗೆ ಏನು ಹೇಳಲು ಇಷ್ಟಪಡ್ತೀರಿ ಎಂದು ಪ್ರಶ್ನೆ ಕೇಳಿದ್ದರು. ಆಗ ಆವಂತಿಕಾ ಶೆಟ್ಟಿ ಸಹ, ನಿರ್ದೇಶಕ ಅನೂಪ್‌ ಭಂಡಾರಿ ಅವರು ಉಚ್ಚರಿಸಿದ್ದ ಮಾತನ್ನೇ ವ್ಯಂಗ್ಯವಾಗಿ ಉಚ್ಚರಿಸಿದ್ದರು. ಅವರ ಮಾತು ಕೂಡ ಕನ್ನಡಿಗರನ್ನು ಕೆರಳಿಸಿತ್ತು. ಆದರೆ, ಆವಂತಿಕಾ ಶೆಟ್ಟಿ ಮಾತ್ರ ಮಂಗಳವಾರ ನಡೆದ ಪತ್ರಿಕಾಗೋಷ್ಠಿಗೆ ಆಗಮಿಸಿರಲಿಲ್ಲ. ಮಂಡಳಿಯ ಅಧ್ಯಕ್ಷರಾದ ಸಾ.ರಾ.ಗೋವಿಂದು ಅವರು, ಫೋನ್‌ ಮಾಡಿದ್ದರೂ, ಫೋನ್‌ ಸ್ವಿಚ್‌ ಆಫ್ ಮಾಡಿಕೊಂಡಿದ್ದರು. ಕೊನೆಗೆ ಅವರು ಬರದೇ ಇದ್ದದ್ದಕ್ಕೆ ಕೋಪಗೊಂಡ ಸಾ.ರಾ. ಗೋವಿಂದು ಅವರು, ಚಿತ್ರದ ನಾಯಕಿ ಆವಂತಿಕಾ ಶೆಟ್ಟಿ ಅವರು ಸಹ, ಕನ್ನಡಿಗರಲ್ಲಿ ಬೇಷರತ್‌ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.

“ಈ ಹಿಂದೆ ಸುರೇಶ್‌ ನಿರ್ಮಾಣದ “ರಾಜು ಕನ್ನಡ ಮೀಡಿಯಂ’ ಚಿತ್ರದ ಪ್ರಚಾರಕ್ಕೂ ಆವಂತಿಕಾ ಶೆಟ್ಟಿ ಅವರು ಬರದೆ, ಸುದ್ದಿಯಾಗಿದ್ದರು. ಅಲ್ಲದೆ, ಆ ಚಿತ್ರಕ್ಕೆ ಸಂಬಂಧಿಸಿದಂತೆ ಸಾಕಷ್ಟು ಆರೋಪವನ್ನೂ ಮಾಡಿದ್ದರು. ಆ ವಿಷಯ ಚೇಂಬರ್‌ ಮೆಟ್ಟಿಲೇರಿತ್ತು. ಆದರೆ, ಈಗ “ರಾಜರಥ’ ಚಿತ್ರದ ವಿಷಯದಲ್ಲೂ ಸುದ್ದಿಯಾಗಿದ್ದಾರೆ. ಕನ್ನಡ ಚಿತ್ರದ ಮೂಲಕ ಗುರುತಿಸಿಕೊಂಡ ಅವರು, ಈಗ ಕನ್ನಡಿಗರನ್ನೇ ಬೈಯುವುದು ಸರಿಯಲ್ಲ. ಅವರು ಎಲ್ಲೇ ಇದ್ದರೂ, ಈ ಕೂಡಲೇ ಕನ್ನಡಿಗರಲ್ಲಿ ಕ್ಷಮೆ ಕೇಳಬೇಕು’ ಎಂದು ಸಾ.ರಾ.ಗೋವಿಂದು ಹೇಳಿದರು.

ನಿಕ್ಕಿ ಮೇಲೂ ಗರಂ


ಮನೋಜ್‌ ನಿರ್ದೇಶಿಸಿ, ಅಭಿನಯಿಸಿದ್ದ “ಓ ಪ್ರೇಮವೇ’ ಚಿತ್ರದ ನಾಯಕಿ ನಿಕ್ಕಿ ಗಾಲಾÅನಿ ಮೇಲೂ ಸಾ.ರಾ. ಗೋವಿಂದು ಗರಂ ಆದರು. “ಆ ಚಿತ್ರದ ಪ್ರಚಾರಕ್ಕೆ ಬಾರದೆ, ನಿರ್ಮಾಪಕರನ್ನು ನೋಯಿಸಿದ ನಿಕ್ಕಿ ಅವರಿಗೆ ಫೋನ್‌ ಮಾಡಿ ಸಮಸ್ಯೆ ಹೇಳಿದ್ದರೂ, ಅವರು ಚೆನ್ನೈನಲ್ಲಿದ್ದೇನೆ, ತಮಿಳು ಚಿತ್ರದಲ್ಲಿ ಬಿಜಿ ಇದ್ದೇನೆ ಎಂದು ಹೇಳಿದ್ದಾರೆ. ಅವರು ಬೆಳೆದಿರುವುದು ಕನ್ನಡದಲ್ಲೇ. ಈಗ ನೋಡಿದರೆ, ತಮಿಳು ಚಿತ್ರದ ಬಗ್ಗೆ ಹೇಳುತ್ತಾರೆ. ಇನ್ನು ಮುಂದೆ ಯಾವುದೇ ಚಿತ್ರವಿರಲಿ, ಆ ನಿರ್ಮಾಪಕರಿಗೆ ತೊಂದರೆ ಕೊಟ್ಟರೆ ಮಂಡಳಿ ಸೂಕ್ತ ಕ್ರಮ ಕೈಗೊಳ್ಳಲಿದೆ’ ಎಂಬುದು ಸಾ.ರಾ.ಗೋವಿಂದು ಅವರ ಖಡಕ್‌ ಎಚ್ಚರಿಕೆ.
 

Advertisement

Udayavani is now on Telegram. Click here to join our channel and stay updated with the latest news.

Next