ಭಾಲ್ಕಿ: ವಿದ್ಯಾರ್ಥಿಗಳು ತಳಮಟ್ಟದಲ್ಲಿಯೇ ತಾಂತ್ರಿಕ ಮೌಲ್ಯ ಅರಿತುಕೊಂಡಿರಬೇಕು ಎಂದು ಶಾಂತಿ ವರ್ಧಕ ಶಿಕ್ಷಣ ಸಂಸ್ಥೆ ಅಧ್ಯಕ್ಷರೂ ಆದ ಶಾಸಕ ಈಶ್ವರ ಖಂಡ್ರೆ ಪ್ರತಿಪಾದಿಸಿದರು.
ಪಟ್ಟಣದ ಬಿಕೆಐಟಿ ಕಾಲೇಜಿನಲ್ಲಿ ಬೆಂಗಳೂರಿನ ಝೆಬ್ರಾ ಟೆಕ್ನಾಲೋಜಿಸ್, ಡಯಟ್ ಬೀದರ ಮತ್ತು ಬಿಕೆಐಟಿ ಕಾಲೇಜಿನ ಸಂಯುಕ್ತಾಶ್ರಯದಲ್ಲಿ ಗ್ರಾಮೀಣ ಭಾಗದ 9ನೇ ತರಗತಿ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳಿಗಾಗಿ ಬುಧವಾರ ಆಯೋಜಿಸಲಾಗಿದ್ದ ಟಿಬಿಆರ್‌ಪಿ (ಟೆಕ್ನಾಲೊಜಿ ಬ್ಯಾರೀರ್ ರಿಡಕ್ಷನ್ ಪ್ರೋಗ್ರಾಂ) ಮೇಲ್ತರಗತಿಯಲ್ಲಿ ತಾಂತ್ರಿಕ ಶಿಕ್ಷಣದ ತಗ್ಗುವಿಕೆ ಕುರಿತ ವಿಶೇಷ ಶಿಬಿರದ ಸಮಾರೋಪದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳಲ್ಲಿ ತಾಂತ್ರಿಕ ಜ್ಞಾನ ತಳಮಟ್ಟದಿಂದಲೇ ಬೆಳೆದು ಬರಬೇಕು. ಪ್ರಾಥಮಿಕ, ಪ್ರೌಢಶಾಲಾ ಹಂತದಲ್ಲಿಯೇ ವಿವಿಧ ಆವಿಷ್ಕಾರಗಳಬಗ್ಗೆ ಮಾಹಿತಿ ಪಡೆದು ಮುಂದೆ ಉತ್ತಮ ಸಂಶೋಧಕರಾಗಿ ಹೊರ ಹೊಮ್ಮಬೇಕು ಎಂದು ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ತುಂಬಿದರು. ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ವೈಜ್ಞಾನಿಕವಾದ ವಿವಿಧ ಪ್ರಶ್ನೆಗಳನ್ನು ಕೇಳುವುದರೊಂದಿಗೆ ಅವರಲ್ಲಿ ವೈಜ್ಞಾನಿಕ ಮನೋಭಾವನೆ ಬೆಳೆಯುವಲ್ಲಿ ಪ್ರೇರೆಪಣೆ ನೀಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಬಿಕೆಐಟಿ ಕಾಲೇಜಿನ ಪ್ರಾಂಶುಪಾಲ ಡಾ| ನಾಗಶೆಟ್ಟಿ ಬಿರಾದಾರ, ಹೊಸ, ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳುವಲ್ಲಿ ವಿದ್ಯಾರ್ಥಿಗಳಿಗೆ ಸಹಕಾರವಾಗುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ವಿದ್ಯಾರ್ಥಿಗಳು ಇದರ ಲಾಭ ಪಡೆದು ಮುಂದೆ ಬರಬೇಕು ಎಂದು ಹೇಳಿದರು.
ಉಪ ಪ್ರಾಂಶುಪಾಲ ಪ್ರೊ| ಪಿ.ಎನ್. ದಿವಾಕರ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಹಾತ್ಮಾಗಾಂಧಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಜಯರಾಜ ದಾಬಶೆಟ್ಟಿ, ಎಂಆರ್‌ಎಪಿಯೂ ಕಾಲೇಜಿನ ಪ್ರಾಂಶುಪಾಲ ಪ್ರೊ| ಅಶೋಕ ರಾಜೋಳೆ ವಿಶೇಷ ಉಪನ್ಯಾಸ ಮಂಡಿಸಿದರು. ಪ್ರೊ| ಸಂಗೀತಾ ಸ್ವಾಮಿ, ಡಾ| ಅಶೋಕ ಕೋಟೆ, ಡಾ| ಬಿ. ಸೂರ್ಯಕಾಂತ, ಜಿಪ್ಸನ್ ಕೋಟೆ ಇದ್ದರು.