Advertisement

ಭಾಲ್ಕಿ ಪಟ್ಟಣ ಅಭಿವೃದ್ಧಿಗೆ ಆದ್ಯತೆ: ಖಂಡ್ರೆ

12:18 PM Mar 07, 2019 | |

ಭಾಲ್ಕಿ: ನಾನು ಸಚಿವನಿದ್ದ ಸಂದರ್ಭದಲ್ಲಿ ಪಟ್ಟಣದ ಅಭಿವೃದ್ಧಿಗೆ ದಾಖಲೆ ರೀತಿಯಲ್ಲಿ ಅನುದಾನ ಬಿಡುಗಡೆ ಮಾಡಿಸಿದ್ದೇನೆ. ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿ ರಾಜ್ಯದಲ್ಲಿಯೇ ಮಾದರಿ ಪಟ್ಟಣವನ್ನಾಗಿ ಮಾಡುವ ಗುರಿ ಹೊಂದಲಾಗಿದೆ ಎಂದು ಶಾಸಕ ಈಶ್ವರ ಖಂಡ್ರೆ ಹೇಳಿದರು.

Advertisement

ಪಟ್ಟಣದ ನೂತನ ಪುರಭವನದ ಸಭಾಂಗಣದಲ್ಲಿ ಬುಧವಾರ ಆಯೋಜಿಸಲಾಗಿದ್ದ 2018-19ನೇ ಸಾಲಿನ ವಿವಿಧ ಯೋಜನೆಯಡಿ ಕಾಮಗಾರಿ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಪಟ್ಟಣದ ಅಭಿವೃದ್ಧಿಗೆ ವಿವಿಧ ಯೋಜನೆಯಡಿ ಸುಮಾರು 250 ಕೋಟಿ ರೂ. ಅನುದಾನ ಬಿಡುಗಡೆ ಮಾಡಿಸಿದ್ದು, ರಸ್ತೆ, ಚರಂಡಿ, ಬೀದಿದೀಪ, ಕುಡಿಯುವ ನೀರು ಸೇರಿದಂತೆ ವಿವಿಧ ಕಾಮಗಾರಿಗಳು ಪ್ರಗತಿಯಲ್ಲಿವೆ. ಮುಂದಿನ ಒಂದು ವರ್ಷದಲ್ಲಿ ಮಾದರಿ ಪಟ್ಟಣವಾಗಿ ರೂಪುಗೊಳ್ಳಲಿದೆ ಎಂದು ಹೇಳಿದರು. ಟೌನ್‌ಹಾಲ್‌ ನಿರ್ಮಾಣದಿಂದ ಸಭೆ, ಸಮಾರಂಭಗಳ ಆಯೋಜನೆಗೆ ಅನುಕೂಲವಾಗಲಿದೆ. ಒಟ್ಟಿನಲ್ಲಿ ಪಟ್ಟಣವನ್ನು ಅಭಿವೃದ್ಧಿ ಪಥದತ್ತ ಕೊಂಡೊಯಲು ಸಕಲ ಸಿದ್ಧತೆ ನಡೆಸಿದ್ದು, ಆದಷ್ಟು ಬೇಗ ಎಲ್ಲ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಹೇಳಿದರು.

ತಾಪಂ ಅಧ್ಯಕ್ಷೆ ರೇಖಾ ವಿಲಾಸ ಪಾಟೀಲ, ಪುರಸಭೆ ಅಧ್ಯಕ್ಷ ಶಿವಶರಣಪ್ಪ ಛತ್ರೆ ಮಾತನಾಡಿದರು. ಜಿಪಂ ಸದಸ್ಯ ಅಂಬಾದಾಸ ಕೋರೆ, ಪುರಸಭೆ ಉಪಾಧ್ಯಕ್ಷೆ ಅನೀತಾ ಪಾಂಡುರಂಗ, ತಾಪಂ ಉಪಾಧ್ಯಕ್ಷ ಮಾರುತಿರಾವ ಮಗರ್‌, ತಾಲೂಕು ಕಾಂಗ್ರೆಸ್‌ ಅಧ್ಯಕ್ಷ ಹಣಮಂತರಾವ ಚವ್ಹಾಣ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಬಾಬುರಾವ ಪೊಲೀಸ್‌ಪಾಟೀಲ, ಪುರಸಭೆ ಸದಸ್ಯರಾದ ವಿಶಾಲ ಪೂರಿ, ಮಹಾದೇವಸ್ವಾಮಿ, ದತ್ತು ಪವಾರ, ಸುಕನ್ಯಾ ರೇಷ್ಮೆ, ಧನರಾಜ ಕುಂದೆ, ಮಾರುತಿ ಭಾವಿಕಟ್ಟಿ, ಪ್ರಮುಖರಾದ ಸೋಮನಾಥಪ್ಪ ಅಷ್ಟೂರೆ, ವಿಲಾಸ ಮೋರೆ, ತಹಶೀಲ್ದಾರ್‌ ಅಣ್ಣಾರಾವ್‌ ಪಾಟೀಲ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಸೂರ್ಯಕಾಂತ ಬಿರಾದಾರ, ಸಣ್ಣ ನೀರಾವರಿ ಇಲಾಖೆಯ ವಿಲಾಸ ಮಾಶೆಟ್ಟೆ ಇದ್ದರು. ಪುರಸಭೆ ಮುಖ್ಯಾಧಿಕಾರಿ ಶಿವಕುಮಾರ ಸ್ವಾಗತಿಸಿದರು. ಗಣಪತರಾವ್‌ ಕಲ್ಲೂರೆ ನಿರೂಪಿಸಿದರು.

ಹೈಕ ಭಾಗಕ್ಕೆ ಬಿಜೆಪಿ ಕೊಡುಗೆ ಏನು?
 ಭಾಲ್ಕಿ: ಬಿಜೆಪಿ ನಾಯಕರಿಗೆ ಹೈಕ ಭಾಗ ಚುನಾವಣೆಯಲ್ಲಿ ಮಾತ್ರ ಕಾಣಿಸುತ್ತದೆ. ಉಳಿದ ಸಮಯದಲ್ಲಿ ಈ ಕ್ಷೇತ್ರ ಅವರ ಕಣ್ಣಿಗೆ ಕಾಣುವುದಿಲ್ಲ. ಪ್ರಧಾನ ಮಂತ್ರಿ ಸೇರಿದಂತೆ ಎಲ್ಲರೂ ಚುನಾವಣೆ ಸಂದರ್ಭದಲ್ಲಿ ಮಾತ್ರ ಆಗಮಿಸಿ ಸುಳ್ಳು ಆಸ್ವಾಸನೆ ನೀಡಿ ಹೋಗುತ್ತಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಟೀಕಿಸಿದರು. ಪಟ್ಟಣದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿಯೇ ಅತಿ ಹಿಂದುಳಿದ ಹೈದ್ರಾಬಾದ ಕರ್ನಾಟಕ ಪ್ರದೇಶಕ್ಕೆ ಸಂವಿಧಾನದ 371ನೇ(ಜೆ) ವಿಧಿ ಅನುಷ್ಠಾನಕ್ಕಾಗಿ ಅಂದಿನ ಎನ್‌ಡಿಎ ಸರ್ಕಾರ ಪ್ರಸ್ತಾವನ್ನೆ ತಿರಸ್ಕರಿತ್ತು. ಆದರೆ ಮನಮೋಹನ್‌ ಸಿಂಗ್‌ ಪ್ರಧಾನಮಂತ್ರಿ ಇದ್ದಾಗ ಯುಪಿಎ ಸರ್ಕಾರ ಮಲ್ಲಿಕಾರ್ಜುನ ಖರ್ಗೆ, ಧರ್ಮಸಿಂಗ್‌, ಸಿದ್ರಾಮಯ್ಯ ಅವರ ನೇತೃತ್ವದಲ್ಲಿ 371ನೇ(ಜೆ) ವಿಧಿ  ಜಾರಿಗೆ ತಂದು ಹೈಕ ಭಾಗದ ಅಭಿವೃದ್ಧಿಗಾಗಿ ಶ್ರಮಿಸಿದ್ದಾರೆ ಎಂದು ತಿಳಿಸಿದರು.

Advertisement

ಕ್ಷೇತ್ರದ ಅಭಿವೃದ್ಧಿಗೆ ವಿವಿಧ ಯೋಜನೆ 
ಭಾಲ್ಕಿ: ಕ್ಷೇತ್ರದ ಅಭಿವೃದ್ಧಿಗೆ ವಿವಿಧ ಯೋಜನೆಯಲ್ಲಿ ಅನುದಾನ ಬಿಡುಗಡೆ ಮಾಡಿ ರಸ್ತೆ, ಚರಂಡಿ, ಕುಡಿಯುವ ನೀರು, ಶಾಲಾ ಕಟ್ಟಡ, ದೇವಾಲಯಗಳ ಅಭಿವೃದ್ಧಿ ಕಾರ್ಯಗಳು ಪ್ರಗತಿಯಲ್ಲಿವೆ ಎಂದು ಶಾಸಕ ಈಶ್ವರ ಖಂಡ್ರೆ ಹೇಳಿದರು. ಪಟ್ಟಣದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಲೋಕೋಪಯೋಗಿ ಇಲಾಖೆ, ಕೆಆರ್‌ಐಡಿಎಲ್‌ ಯೋಜನೆ, ಪ್ರಧಾನ ಮಂತ್ರಿ ಸಡಕ್‌ ಯೋಜನೆ, ಕರ್ನಾಟಕ ನೀರಾವರಿ ನಿಗಮ ನಿಯಮಿತ ಯೋಜನೆ, ಪಂಚಾಯತ್‌ ರಾಜ್‌ ಇಂಜನಿಯರಿಂಗ್‌ ಇಲಾಖೆ, ಕೆಬಿಜೆಎನ್‌ಎಲ್‌ ಯೋಜನೆ, ಸಮಾಜ ಕಲ್ಯಾಣ ಇಲಾಖೆ ಯೋಜನೆ ಸೇರಿದಂತೆ ದೇವಸ್ಥಾನಗಳ ಅಭಿವೃದ್ಧಿಗಾಗಿ ಸುಮಾರು 229 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, ಹಲವು ಕಾಮಗಾರಿಗಳ ಉದ್ಘಾಟನೆ ಹಾಗೂ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ನಡೆಸಲಾಗುತ್ತಿದೆ. ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಮೋದಿ ಅಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ತಿಳಿಸಿದರು. ಜಿಪಂ ಸದಸ್ಯ ಅಂಬಾದಾಸ್‌ ಕೋರೆ, ಪುರಸಭೆ ಅಧ್ಯಕ್ಷ ಶಿವಶರಣಪ್ಪ ಛತ್ರೆ, ತಾಪಂ ಅಧ್ಯಕ್ಷೆ ರೇಖಾ ವಿಲಾಸ ಪಾಟೀಲ ಸುದ್ದಿಗೋಷ್ಠಿಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next