ಭಾಲ್ಕಿ: ಪಟ್ಟಣದ ಪುರಸಭೆ ಚುನಾವಣೆ ಮೇ 29ರಂದು ನಡೆಯಲಿದ್ದು, ವಿವಿಧ ಪಕ್ಷಗಳ ಅಭ್ಯರ್ಥಿಗಳು ಬಿರುಸಿನ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಅಲ್ಲದೇ ಪುರಸಭೆ ಹಾಲಿ, ಮಾಜಿ ಸದಸ್ಯರು ಬಡಾವಣೆಗಳ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವತ್ತ ಮುತುವರ್ಜಿ ವಹಿಸುತ್ತಿರುವುದು ವಿಶೇಷವಾಗಿದೆ.
ಪುರಸಭೆಯು ಒಟ್ಟು 27 ಸದಸ್ಯಬಲ ಹೊಂದಿದ್ದು, ಅಧಿಕಾರದ ಗದ್ದುಗೆ ಹಿಡಿಯಲು 14 ಸದಸ್ಯಬಲ ಬೇಕು. ಹೀಗಾಗಿ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಸೇರಿದಂತೆ ಬಿಎಸ್‌ಪಿ ಮತ್ತು ಪಕ್ಷೇತರರ ಮಧ್ಯ ತೀವ್ರ ಪೈಪೋಟಿ ಏರ್ಪಟ್ಟಿದೆ. ಮತದಾರರು ಮಾತ್ರ ಯಾರಿಗೆ ಆಶೀರ್ವಾದ ಮಾಡಲಿದ್ದಾರೆ ಎನ್ನುವುದು ಇನ್ನೂ ನಿಗೂಢ.
ಈಗಾಗಲೇ ಅಭ್ಯರ್ಥಿಗಳು ತಮ್ಮ ತಮ್ಮ ವಾರ್ಡ್‌ಗಳಲ್ಲಿ ಬಿರುಸಿನ ಪ್ರಚಾರ ಕೈಗೊಂಡಿದ್ದು, ವಿವಿಧ ರೀತಿಯಲ್ಲಿ ಪ್ರಚಾರ ನಡೆಸುವ ಮೂಲಕ ಮತದಾರನ ಮನ ಗೆಲ್ಲಲು ಮುಂದಾಗಿದ್ದಾರೆ. ಸುಡುವ ಬಿಸಿಲು ಲೆಕ್ಕಿಸದೇ ಅಭ್ಯರ್ಥಿಗಳು ಮತದಾರರ ಮನೆಗಳಿಗೆ ತೆರಳಿ ಈ ಸಲ ನನ್ನನ್ನೇ ಗೆಲ್ಲಿಸಬೇಕು ಎಂದು ಮತದಾರರ ಮುಂದೆ ಬೇಡಿಕೆ ಇಡುತ್ತಿದ್ದಾರೆ.
ಎಲ್ಲಾ ಪಕ್ಷಗಳ ನಾಯಕರು ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿ, ಪುರಸಭೆ ತಮ್ಮದಾಗಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ. ಇದುವರೆಗೆ ಕಾಂಗ್ರೆಸ್ ತೆಕ್ಕೆಯಲ್ಲಿದ್ದ ಪುರಸಭೆಯು ಇನ್ನುಮುಂದೆ ಜೆಡಿಎಸ್ ಮತ್ತು ಬಿಜೆಪಿ ತಮ್ಮ ಪಾಲಾಗಿಸಿಕೊಳ್ಳಲು ಹೋರಾಟ ನಡೆಸಿವೆ. ಬಿಜೆಪಿಯವರಿಗೆ ಲೋಕಸಭಾ ಚುನಾವಣೆಯ ಫಲಿತಾಂಶ ಆನೆಬಲ ತಂದು ಕೊಟ್ಟಿದೆ.
ಪ್ರಚಾರಕ್ಕೆ ಇನ್ನೂ ಎರಡುದಿನ ಮಾತ್ರ ಬಾಕಿ ಇರುವುದರಿಂದ ಎಲ್ಲಾ ಪಕ್ಷದ ಘಟಾನುಘಟಿಗಳು ತಮ್ಮ ಪಕ್ಷದ ಅಭ್ಯರ್ಥಿಗಳ ಪರ ಮತಯಾಚನೆ ನಡೆಸಿದ್ದಾರೆ. ಕ್ಷೇತ್ರದ ಶಾಸಕ ಈಶ್ವರ ಖಂಡ್ರೆ ಅವರು ಲೋಕಸಭಾ ಚುನಾವಣೆಯ ಸೋಲಿನ ಹತಾಶೆಯಿಂದ ಹೊರಬಂದು, ತಮ್ಮ ಪಕ್ಷದ ಅಭ್ಯರ್ಥಿಗಳಲ್ಲಿ ಆತ್ಮವಿಶ್ವಾಸ ತುಂಬುತ್ತ, ಸುಡುಬಿಸಿಲು ಲೆಕ್ಕಿಸದೇ ರವಿವಾರ ವಿವಿಧ ಓಣಿಗಳಲ್ಲಿ ಪ್ರಚಾರ ನಡೆಸಿದರು. ಅಲ್ಲದೇ ಅಲ್ಲಿಯ ಸಮಸ್ಯೆಗಳಿಗೆ ಪರಿಹಾರ ನೀಡುವಲ್ಲಿ ಮುತುವರ್ಜಿ ವಹಿಸುತ್ತಿರುವುದು ಕಂಡು ಬಂತು.
ಜೆಡಿಎಸ್ ಮುಖಂಡ, ಮಾಜಿ ಶಾಸಕ ಪ್ರಕಾಶ ಖಂಡ್ರೆ ಅವರು ಜಿಲ್ಲಾ ಉಸ್ತುವಾರಿ ಸಚಿವ ಬಂಡೆಪ್ಪಾ ಖಾಶೆಂಪೂರ ಅವರನ್ನು ಪ್ರಚಾರ ಸಭೆಗೆ ಕರೆಸಿ, ತಮ್ಮ ಪಕ್ಷದ ಅಭ್ಯರ್ಥಿಗಳಲ್ಲಿ ಆತ್ಮವಿಶ್ವಾಸ ತುಂಬಿ ಪುರಸಭೆ ಚುಕ್ಕಾಣಿ ಹಿಡಿಯುವಲ್ಲಿ ನಾವೇ ಯಶಸ್ವಿಯಾಗುವೆವು ಎಂದು ಮುನ್ನುಗ್ಗುತ್ತಲಿದ್ದಾರೆ.
ಬಿಜೆಪಿ ಅಭ್ಯರ್ಥಿಗಳು ಮೊದಲಿನಿಂದಲೂ ಬಿರುಸಿನಿಂದ ಪ್ರಚಾರ ನಡೆಸುತ್ತಲಿದ್ದು. ಲೋಕಸಭಾ ಚುನಾವಣೆಯ ನಂತರ ತಮ್ಮ ನಾಯಕರ ಜೊತೆಯಲ್ಲಿ ಎಲ್ಲ ವಾರ್ಡ್‌ಗಳಲ್ಲಿ ಮೋದಿ ಸಾಧನೆಯ ಬಗ್ಗೆ ಮೆಲುಕು ಹಾಕುತ್ತಾ ಪ್ರಚಾರಕ್ಕೆ ರಂಗು ತಂದುಕೊಟ್ಟಿದ್ದಾರೆ.