Advertisement

ಕಲಾವಿದರಿಗೆ ಭಕ್ತಿ-ಶ್ರದ್ಧೆ ಅತಿ ಮುಖ್ಯ: ವೇಣು

05:20 PM Aug 13, 2018 | Team Udayavani |

ಚಿತ್ರದುರ್ಗ: ಸಂಗೀತ, ನೃತ್ಯ, ವಿದ್ಯೆ ಕಲಿಯಬೇಕಾದರೆ ದೇವಾನುದೇವತೆಗಳ ಅನುಗ್ರಹ ಇರಬೇಕು. ಸಂಗೀತ ಮತ್ತು ನೃತ್ಯ ಸಂಸ್ಕಾರ-ಸಂಸ್ಕೃತಿಯಿಂದ ಬರುವಂತಹ ಕಲೆಗಳಾಗಿವೆ ಎಂದು ಸಾಹಿತಿ ಡಾ| ಬಿ.ಎಲ್‌. ವೇಣು ಹೇಳಿದರು.

Advertisement

ಅಂಜನಾ ನೃತ್ಯ ಕಲಾ ಕೇಂದ್ರದ 34ನೇ ವಾರ್ಷಿಕೋತ್ಸವದ ಅಂಗವಾಗಿ ನಗರದ ತರಾಸು ರಂಗಮಂದಿರದಲ್ಲಿ ಹಮ್ಮಿಕೊಂಡಿರುವ “ಸಮರ್ಪಣ-2018ರ ಎರಡನೇ ದಿನವಾದ ಭಾನುವಾರ ಸಂಜೆ ಹಮ್ಮಿಕೊಂಡಿದ್ದ ಅಂಜನಾಶ್ರೀ
ಪ್ರಶಸ್ತಿ ಪ್ರದಾನ ಹಾಗೂ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕಲಾವಿದರಿಗೆ ವಿನಯ, ಭಕ್ತಿ, ಶ್ರದ್ಧೆಗಳಿರಬೇಕು. ಆಗ ಸಂಸ್ಕಾರ, ಸಂಸ್ಕೃತಿ ಜೊತೆಯಲ್ಲಿ ನೃತ್ಯ, ಸಂಗೀತ ವಿದ್ಯೆ ಸುಲಭವಾಗಿ ದಕ್ಕಲಿದೆ. ಸಂಗೀತ ಕಲಿಕೆ ತುಂಬಾ ಕಷ್ಟ. ನೃತ್ಯ ಕಲೆ ಇನ್ನೂ ಕಷ್ಟ. ಪದವಿ ಮೂರು ವರ್ಷ, ಸ್ನಾತಕೋತ್ತರ ಪದವಿ ಎರಡು ವರ್ಷ ಓದಿದರೂ ಸಿಗುತ್ತದೆ. ಆದರೆ ನೃತ್ಯ ಕಲೆ 15-20 ವರ್ಷಗಳ ತನಕ ತಪಸ್ಸಿನ ರೀತಿ ಪರಿಶ್ರಮದಿಂದ ಬರುವ ವಿದ್ಯೆಯಾಗಿದೆ ಎಂದರು.

ಟಿವಿಯಲ್ಲಿ ಸಂಗೀತ ಹೇಳಿದರೆ, ರಿಯಾಲಿಟಿ ಶೋದಲ್ಲಿ ಕಾಣಿಸಿಕೊಂಡರೆ ದೊಡ್ಡ ಸಾಧಕರು ಎನ್ನುವ ಮನಸ್ಥಿತಿ ನಿರ್ಮಾಣವಾಗಿದೆ. ಆದರೆ ಎಲೆಮರೆ ಕಾಯಿಯಂತೆ ಜಿಲ್ಲೆಯಲ್ಲಿ ನೃತ್ಯಾಭ್ಯಾಸ ಮಾಡಿಸುತ್ತಿರುವ ವಿದ್ವಾನ್‌ ನಂದಿನಿ ಮತ್ತು ಅವರ ಪತಿ ಶಿವಪ್ರಕಾಶ್‌ ಇಬ್ಬರೂ ಅರ್ಧನಾರೀಶ್ವರರಿದ್ದಂತೆ. ಜಿಲ್ಲೆಯಲ್ಲಿ ನೃತ್ಯ ಕಲಿಸುವ ಕಾರ್ಯ ಆರಂಭಿಸುವ ಮೂಲಕ ಮಕ್ಕಳಿಗೆ ಉತ್ತಮ ಸಂಸ್ಕಾರ, ಸಂಸ್ಕತಿ, ವಿನಯ ಇತ್ಯಾದಿಗಳನ್ನು ಕಲಿಸುತ್ತಿರುವುದು ಈ ಮಣ್ಣಿನ ಮಕ್ಕಳ ಪುಣ್ಯ ಎಂದು ಹೇಳಿದರು.

ಕಲಾವಿದರಿಗೆ ಆಸ್ತಿ, ಹಣ, ಸಂಪತ್ತಿಗಿಂತ ಪ್ರೇಕ್ಷಕರ ಪ್ರೋತ್ಸಾಹ ಬೇಕಿದೆ. ತುಂಬು ಮನಸ್ಸಿನಿಂದ ಮಕ್ಕಳಿಗೆ ಪ್ರೋತ್ಸಾಹ ನೀಡಿ ಗೌರವಿಸಿದರೆ ನೃತ್ಯ, ಸಂಗೀತ ಸೇರಿದಂತೆ ಇತರೆ ಕಲೆಗಳು ಉಳಿದು ಬೆಳೆಯಲು ಸಾಧ್ಯ ಎಂದು ಅಭಿಪ್ರಾಯಪಟ್ಟರು. 

Advertisement

ಕಬೀರಾನಂದಾಶ್ರಮದ ಶ್ರೀ ಶಿವಲಿಂಗಾನಂದ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ವೈದ್ಯರು, ಇಂಜಿನಿಯರ್‌ ಆಗುವುದು ಕಷ್ಟವಲ್ಲ. ಆದರೆ ನಾಟ್ಯಶಾಸ್ತ್ರ, ಭರತನಾಟ್ಯ ಕಲಿತು ನೃತ್ಯ ಕಲಾವಿದರಾಗುವುದು ಸುಲಭದ ಮಾತಲ್ಲ. ಸಾಂಪ್ರದಾಯಿಕ ಉಡುಗೆಯೊಂದಿಗೆ ನೃತ್ಯ ಪ್ರದರ್ಶಿಸುವ ಕಲಾವಿದರನ್ನು ನೋಡಿದಾಗ ತುಂಬಾ ಸಂತೋಷವಾಗುತ್ತದೆ. ನಮ್ಮ ಸಂಸ್ಕೃತಿ-ಕಲೆಗಳನ್ನು ಸಾಂಸ್ಕೃತಿಕವಾಗಿ ಪರಿಚಯಿಸುವಂತಹ ಪ್ರತಿನಿಧಿಗಳು ಅವಶ್ಯಕವಾಗಿ ಬೇಕಿದೆ. ಚಿತ್ರದುರ್ಗದ ಹೆಸರನ್ನು ರಾಷ್ಟ್ರ, ಅಂತರಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದಿರುವ ಅಂಜನಾ ನೃತ್ಯ ಕಲಾ ಕೇಂದ್ರದ ಕಲಾವಿದರು, ಸಂಸ್ಥಾಪಕರು ಜಿಲ್ಲೆಯ ಸಂಪತ್ತು ಎಂದರೆ ತಪ್ಪಾಗಲಿಕ್ಕಿಲ್ಲ ಎಂದು ಶ್ಲಾಘಿಸಿದರು.

ಮಹಿಳೆಯರಲ್ಲಿ ಕುಂಕುಮ ಸಂಸ್ಕೃತಿ ಮರೆಯಾಗುತ್ತಿದೆ. ಅಂಥದ್ದರಲ್ಲಿ ಕಿರಿಯ ನೃತ್ಯ ಕಲಾವಿದರಿಗೂ ಹಣೆಯ ಮೇಲೆ ಕುಂಕುಮವಿಟ್ಟು ನಾಟ್ಯ ಕಲಿಸುವಂತಹ ಸಂಪ್ರದಾಯವನ್ನು ಉಳಿಸಿ, ಬೆಳೆಸಿಕೊಂಡು ಹೋಗುತ್ತಿರುವುದು ಸಂತಸದ
ವಿಚಾರ ಎಂದರು. 

ಮಾನಸಗಂಗೋತ್ರಿಯ ಲಲಿತಕಲಾ ಕಾಲೇಜಿನ ವಿದ್ವಾನ್‌ ಡಾ| ಕೆ. ಕುಮಾರ್‌, ಭರತನಾಟ್ಯ ಕಲಾವಿದೆ ಬೆಂಗಳೂರಿನ ಕೆ.ಎಸ್‌. ಸತ್ಯವತಿ, ವಿದ್ವಾನ್‌ ಅನಂತ್‌ ಕೆ. ಚಿಂಚನಸೂರ್‌, ವಿದ್ಯಾವಿಕಾಸ ವಿದ್ಯಾಸಂಸ್ಥೆ ಸಂಸ್ಥಾಪಕ ಪಿ.ವಿಜಯಕುಮಾರ್‌ ಅವರಿಗೆ “ಅಂಜನಾಶ್ರೀ ಪ್ರಶಸ್ತಿ’ ಪ್ರದಾನ ಮಾಡಲಾಯಿತು.

ಅಂಜನಾ ನೃತ್ಯಶಾಲೆಯ ಪ್ರಾಂಶುಪಾಲ ಶಿವಪ್ರಕಾಶ್‌ ಮಾರ್ಗದರ್ಶನದಲ್ಲಿ ನಂದಿನಿ ಶಿವಪ್ರಕಾಶ್‌ ಸಂಯೋಜಿಸಿದ್ದ “ಶ್ರೀರಾಮಚರಿತಂ’ ನೃತ್ಯರೂಪಕ ಪ್ರದರ್ಶಿಸಲಾಯಿತು. ವಿದುಷಿ ನಂದಿನಿ ಶಿವಪ್ರಕಾಶ್‌ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ನಿರಂಜನ ದೇವರಮನೆ ನಿರೂಪಿಸಿದರು.

ನೃತ್ಯ ಸಂಸ್ಕಾರವನ್ನು ಕಲಿಸುತ್ತದೆ. ಶ್ರಮಪಟ್ಟು ಕಲಿತ ಸಂಸ್ಕಾರ, ಸಾಧನೆಯ ಮಾರ್ಗದಿಂದ ಪಡೆದ ಕೀರ್ತಿ ಕೊನೆವರೆಗೂ ಉಳಿಯುತ್ತದೆ. ಅದನ್ನು ಕಸಿದುಕೊಳ್ಳಲು ಎಂದಿಗೂ ಸಾಧ್ಯವಿಲ್ಲ.
 ಶ್ರೀ ಶಿವಲಿಂಗಾನಂದ ಸ್ವಾಮೀಜಿ.

Advertisement

Udayavani is now on Telegram. Click here to join our channel and stay updated with the latest news.

Next