ಸೊಲ್ಲಾಪುರ: ಶ್ರೀ ಸ್ವಾಮಿ ಸಮರ್ಥರ ಪ್ರಕಟ ದಿನ ನಿಮಿತ್ತ ಮಹರಾಷ್ಟ್ರ- ಕರ್ನಾಟಕ ಹಾಗೂ ಆಂಧ್ರ ಸೇರಿದಂತೆ ದೇಶದ
ಮೂಲೆ-ಮೂಲೆಯಿಂದ ಬಂದಿರುವ ಲಕ್ಷಾಂತರ ಭಕ್ತರು ಸೋಮವಾರ ಅಕ್ಕಲಕೋಟ ಸ್ವಾಮಿ ಸಮರ್ಥರ ದರ್ಶನ ಪಡೆದರು.
ಸೋಮವಾರ ಬೆಳಗ್ಗೆ 5:00ರಿಂದ ಮಂದಿರದ ಪೂಜಾರಿ ಮೋಹನ ಮಹಾರಾಜರು ಸಮರ್ಥರಿಗೆ ಕಾಕಡಾರತಿ ಮೂಲಕ ಮಹಾಪೂಜೆ ನೆರವೇರಿಸಿದರು. ನಂತರ ಸ್ವಾಮಿ ಭಕ್ತರಿಗೆ ದರ್ಶನದ ವ್ಯವಸ್ಥೆ ಮಾಡಲಾಯಿತು. ಬೆಳಗ್ಗೆ 5:00ರಿಂದ ಸರದಿಯಲ್ಲಿ ನಿಂತ ಭಕ್ತರು ಶ್ರೀ ಸ್ವಾಮಿ ಸಮರ್ಥ ಜಯ ಜಯ ಸ್ವಾಮಿ ಸಮರ್ಥ ಎಂದು ನಾಮಸ್ಮರಣೆ ಮಾಡುತ್ತ ದರ್ಶನ ಪಡೆದರು.
ಸುಮಾರು ಎರಡು-ಮೂರು ಕಿಮೀ ವರೆಗೆ ಭಕ್ತರ ಸಾಲು ಹರಡಿತ್ತು. ಬೆಳಗ್ಗೆ 10:00ರಿಂದ 12:00ರ ವರೆಗೆ ಮಂದಿರದ ಜ್ಯೋತಿಬಾ ಮಂಟಪದಲ್ಲಿ ದೇವಸ್ಥಾನ ವಿಶ್ವಸ್ಥೆ ಉಜ್ವಲಾತಾಯಿ ಸರದೇಶಮುಖ ನೇತೃತ್ವದಲ್ಲಿ ಸತ್ಸಂಗ ಕಾರ್ಯಕ್ರಮ ನಡೆಯಿತು. ಸಮರ್ಥರಿಗೆ ಪುಷ್ಪಹಾರ ಅರ್ಪಿಸಿದ ನಂತರ ತೊಟ್ಟಿಲ ಕಾರ್ಯಕ್ರಮ ನಡೆಯಿತು. ಭಜನೆ ಹಾಗೂ ಆರತಿಯೊಂದಿಗೆ ಸಮರ್ಥರ ಜನ್ಮೋತ್ಸವ ಭಕ್ತಿ-ಭಾವದಿಂದ ಅದ್ಧೂರಿಯಾಗಿ ಆಚರಿಸಲಾಯಿತು.
ಮೈಂದರ್ಗಿ ರಸ್ತೆಯಲ್ಲಿರುವ ಭಕ್ತ ನಿವಾಸದಲ್ಲಿ ಭಕ್ತರಿಗಾಗಿ ಮಹಾಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಪುಣೆಯ ಮಿಲಿಂದ ಪೋತದಾರ ಹಾಗೂ ಸಂಗಡಿಗರಿಂದ ಭಾವ-ಭಕ್ತಿಗೀತೆಗಳ ಕಾರ್ಯಕ್ರಮ ನಡೆಯಿತು.
ದೇವಸ್ಥಾನ ಸಮಿತಿ ಅಧ್ಯಕ್ಷ ಮಹೇಶ ಇಂಗಳೆ, ಕಾರ್ಯದರ್ಶಿ ಆತ್ಮಾರಾವ ಘಾಟಗೆ, ವಿಶ್ವಸ್ಥ ವಿಲಾಸರಾವ ಪುಟಾಣೆ, ಮಹೇಶ ಗೋಗಿ, ಶ್ರೀನಿವಾಸ ಇಂಗಳೆ, ಪ್ರದೀಪ ಹಿಂಡೋಳೆ, ಬಾಳಾಸಾಹೇಬ ಘಾಟಗೆ, ಅಕ್ಷಯ ಸರದೇಶಮುಖ, ಶ್ರೀಪಾದ ಸರದೇಶಮುಖ, ಶಿವಶರಣ ಅಚಲೇರ, ಸ್ವಾಮಿನಾಥ ಲೋಣಾರಿ, ಸಂಜಯ ಪವಾರ, ಅಮರ ಪಾಟೀಲ, ಮಹಾದೇವ ತೇಲಿ, ಸಂಜಯ ಪಾಠಕ, ದೀಪಕ ಜರಿಪಟಕೆ, ರಾಮಚಂದ್ರ ಸಮಾಣೆ ಇದ್ದರು.