Advertisement

Balaganur: ಮಣ್ಣೆತ್ತಿನ ಅಮವಾಸ್ಯೆ ಆಚರಣೆ ಇಂದು;ಶ್ರದ್ಧಾ ಭಕ್ತಿಯಿಂದ ಪೂಜೆ, ಚಿಣ್ಣರ ಸಂಭ್ರಮ

02:44 PM Jul 04, 2024 | Team Udayavani |

ಬಳಗಾನೂರು: ಗ್ರಾಮೀಣ ಭಾಗದಲ್ಲಿನ ಮಣ್ಣೆತ್ತಿನ ಹಬ್ಬಕ್ಕೆ ವಿಶೇಷತೆ ಇದೆ. ರೈತಾಪಿವರ್ಗ ಮಣ್ಣು ನಂಬಿ ಬದುಕು ಕಟ್ಟಿಕೊಂಡವರು. ಮಣ್ಣಿನ ಋಣ ತೀರಿಸಲು ಮತ್ತು ಎತ್ತಿನ ಋಣ ತೀರಿಸಲು ಶ್ರದ್ಧಾ ಭಕ್ತಿಯಿಂದ ಈ ಪದ್ಧತಿ ಅನುಸರಿಸಿಕೊಂಡಿದ್ದೇವೆ ಎಂಬುದು ಪೂರ್ವಿಕರ ಮಾತು.

Advertisement

ಅಂತಯೇ ಮಣ್ಣೆತ್ತಿನ ಅಮಾವಾಸ್ಯೆಯ ಆಚರಣೆ ಮಕ್ಕಳಿಗೆ ಸಂಭ್ರಮವೋ ಸಂಭ್ರಮ.

ಜನತೆಗೆಲ್ಲಾ ಅನ್ನ ನೀಡುವ ಅನ್ನದಾತನಿಗೆ ಕಾರ ಹುಣ್ಣಿಮೆ ಮತ್ತು ಮಣ್ಣೆತ್ತಿನ ಅಮವಾಸ್ಯೆ ಶ್ರೇಷ್ಠವಾದ ಸಂಭ್ರಮದ ಹಬ್ಬಗಳು. ಈ ಹಿನ್ನಲೆಯಲ್ಲಿ ರೈತರು ಮುಂಗಾರು ಹಂಗಾಮಿನಲ್ಲಿ ಬರುವ ಕಾರಹುಣ್ಣಿಮೆ ದಿನದಂದು ಎತ್ತುಗಳನ್ನು ಕರಿ ಹರಿಯುವುದು, ಮಣ್ಣೆತ್ತಿನ ಅಮವಾಸ್ಯೆಯಂದು ಮಣ್ಣೆತ್ತುಗಳಿಗೆ ಪೂಜೆ ಗೈಯುತ್ತಾರೆ.

ರೈತನ ಸಂಗಾತಿಗಳಾದ ಎತ್ತುಗಳೊಂದಿಗೆ ಹೊಲದಲ್ಲಿ ಬಿತ್ತಿದ ಬೀಜ ಮೊಳಕೆಯೊಡೆದು ಸಣ್ಣದಾಗಿ ಬೆಳೆ ಚಿಗುರೆಡೆಯುತ್ತಿದ್ದಂತೆ ಕಾರ ಹುಣಿಮೆ ಬರುತ್ತದೆ. ಎತ್ತುಗಳನ್ನು ಶೃಂಗರಿಸಿ ಕರಿ ಹರಿದಿರುತ್ತಾರೆ. ಮಣ್ಣೆತ್ತಿನ ಅಮವಾಸ್ಯೆಯಂದು ಕುಂಬಾರರು ಮಾಡಿದ ಮಣ್ಣೆತ್ತುಗಳನ್ನು ಕೃಷಿಕರು ಸೇರಿ ಪ್ರತಿಯೊಂದು ಕುಟುಂಬಗಳು ಎತ್ತುಗಳನ್ನು ಖರೀದಿಸಿ ಮನೆಯ ದೇವರ ಜಗಲಿ ಮೇಲೆ ಪ್ರತಿಷ್ಠಾಪಿಸಿ ವಿವಿಧ ಭಕ್ಷ್ಯ-ಭೋಜನಗಳನ್ನು ತಯಾರಿಸಿ ನೈವೇದ್ಯ  ಸಮರ್ಪಿಸುತ್ತಾರೆ.

ಮಕ್ಕಳು ಸಾಯಂಕಾಲ ಶೃಂಗರಿಸಿ ಪೂಜಿಸಿದ್ದ ಮಣ್ಣೆತ್ತುಗಳನ್ನು ಸಾಮೂಹಿಕ ಪೂಜೆಗಾಗಿ ಭಾವಿಕಟ್ಟೆಗಳು ದೇವಸ್ಥಾನದ ಆವರಣದಲ್ಲಿ ವಿಶೇಷ ಪೂಜೆಗೈದು ಕರಿ ಹರಿದು ಮಣ್ಣೆತ್ತುಗಳನ್ನು ಮನೆ ಮಾಳಿಗೆಯ ಮೇಲಿಡುತ್ತಾರೆ. ಕಾರಣ ಮಳೆರಾಯನನ್ನು ಆ ಎತ್ತುಗಳು ಕರೆಯುತ್ತವೆಂದು ಅಪಾರ ನಂಬಿಕೆ ಇದೆ.

Advertisement

ಕುಂಬಾರರು ಮಣ್ಣೆತ್ತು ಮಾಡುವುದು ನಮ್ಮ ಕುಲ ಕಸುಬು. ಮೊದಲಿನಿಂದಲೂ ಮಣ್ಣಿನ ಗಡಿಗೆ ಇನ್ನಿತರ ವಸ್ತುಗಳನ್ನು ಮಾಡುವುದರ ಜೊತೆಗೆ ಮಣ್ಣೆತ್ತು ಮಾಡುತ್ತೇವೆ. ಪಟ್ಟಣ ಸೇರಿ ಸುತ್ತಮುತ್ತಲಿನ ಹಳ್ಳಿಗಳ ರೈತರು ಮಣ್ಣೆತ್ತುಗಳನ್ನು ತೆಗೆದುಕೊಂಡು ಪೂಜಿಸುತ್ತಾರೆ. ಪಟ್ಟಣದಲ್ಲಿ ವಿರುಪಾಕ್ಷಪ್ಪ ಕುಂಬಾರ, ಶರಭಣ್ಣ ಕುಂಬಾರ, ಪಂಪಣ್ಣ,  ಚಂದ್ರಮ,  ರೇಣುಕಮ್ಮ ಕುಟುಂಬಗಳು ಎತ್ತುಗಳನ್ನು ಮಾಡಿ ಸುಮಾರು 50 ರಿಂದ 60 ರೂಪಾಯಿಗಳಿಗೆ ಜೋಡಿ ಎತ್ತುಗಳನ್ನು ಮಾರಾಟ ಮಾಡಲಾಗುವುದು ಎನ್ನುತ್ತಾರೆ.

ಹುಟ್ಟಿನಿಂದ ಚಟ್ಟದವರೆಗೂ ಮಣ್ಣಿನೊಂದಿಗೆ ನಮ್ಮ ಬದುಕು. ಮಣ್ಣಿನಿಂದ ಆರಂಭವಾಗುವ ಮಣ್ಣೆತ್ತು ಅಮವಾಸ್ಯೆ ದಿನ ತಮ್ಮ ರಾಸುಗಳಿಗೆ ಮಳೆಯಿಂದ ಕೆಲ ಸಮಯ ಬಿಡುವು ಕೊಟ್ಟು ಅವುಗಳನ್ನು ಗೌರವಿಸುವ ಸಂಪ್ರದಾಯ ಇದಾಗಿದೆ.

ಜನತೆಗೆಲ್ಲಾ ಅನ್ನ ನೀಡುವ ಅನ್ನದಾತನಿಗೆ ಆಸರೆಯಾದ ಕುಂಬಾರರ ಕುಟುಂಬಗಳಿಗೆ ನೆರವು, ದೊರೆಯಬೇಕಿದೆ. ಸರಕಾರದ ಸೌಲಭ್ಯಗಳು ಈ ಕುಟುಂಬಗಳಿಗೆ ಅಷ್ಟಕಷ್ಟೆ. ಅಧಿಕಾರಿಗಳು ಜನಪ್ರತಿನಿಧಿಗಳು ಸಂಸ್ಕೃತಿ ಉಳಿವು ಹಾಗೂ ಸಂಭ್ರಮಕ್ಕೆ ಕಾರಣವಾಗಿರುವ ಸಮುದಯಕ್ಕೆ ನೆರವು ನೀಡಲು ಮುಂದಾಗಬೇಕಿದೆ.

-ಹನುಮೇಶ ಕಮ್ಮಾರ ಬಳಗಾನೂರು, ರಾಯಚೂರು

 

Advertisement

Udayavani is now on Telegram. Click here to join our channel and stay updated with the latest news.

Next