Advertisement

ದೇವರು ಹಾಗೂ ಗುರುಗಳನ್ನು ಒಲಿಸಿಕೊಳ್ಳಲು ಶ್ರದ್ಧೆ, ಭಕ್ತಿಯೊಂದೇ ದಾರಿ : ಸಿಎಂ ಬೊಮ್ಮಾಯಿ

01:37 PM Jun 08, 2022 | Team Udayavani |

ಮೈಸೂರು: ದೇವರ‌ ಮುಂದೆ ನಮಗೆ ಏನು ಬೇಕೆಂಬ ಮನೋಕಾಮನೆಗಳನ್ನು ಇಟ್ಟರೆ ಈಡೇರುವುದಿಲ್ಲ.ದೇವರು ಹಾಗೂ ಗುರುಗಳನ್ನು ಒಲಿಸಿಕೊಳ್ಳಲು ಶ್ರದ್ಧೆ, ಭಕ್ತಿಯೊಂದೇ ದಾರಿ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

Advertisement

ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಇಂದು ಶ್ರೀ ದತ್ತಾತ್ರೇಯ ಸ್ವಾಮಿಗೆ ಪೂಜೆ ಸಲ್ಲಿಸಿ ನಂತರ ಶ್ರೀಗಳಿಗೆ ಜನ್ಮದಿನೋತ್ಸವದ ಶುಭಕಾಮನೆ ಸಲ್ಲಿಸಿ ಸಿಎಂ ಮಾತನಾಡಿ, ಲೋಕಕಲ್ಯಾಣಕ್ಕಾಗಿ ಸಂಕಲ್ಪ ಇದ್ದರೆ ದೇವರ ಆಶೀರ್ವಾದ ಸದಾ ಇರುತ್ತದೆ.ಸಂಕಲ್ಪದ ಪರಾಕಾಷ್ಟಯೇ‌ ದೈವ ಸ್ವರೂಪ, ಉತ್ಕೃಷ್ಟ ವಾದ ಪ್ರೀತಿಯೇ ಭಕ್ತಿ ಎಂದು ಬಣ್ಣಿಸಿದರು.

ನಾನು ಹುಟ್ಟಿದ್ದು ಹುಬ್ಬಳ್ಳಿಯ ದತ್ತಾತ್ರೇಯ ಓಣಿಯಲ್ಲಿ.ನಾನು ಶಾಲೆಗೆ ಹೋಗುವಾಗಲೆಲ್ಲಾ ಅಲ್ಲಿನ ಮಾರುಕಟ್ಟೆ ಬಳಿ‌ ಇರುವ ದತ್ತಾತ್ರೇಯ ದೇವಸ್ಥಾನಕ್ಕೆ ಹೋಗಿ ನಮಸ್ಕಾರ ‌ಮಾಡುತ್ತಿದ್ದೆ ಎಂದು ಇದೇ ವೇಳೆ ಬೊಮ್ಮಾಯಿ ಅವರು ತಮ್ಮ ಬಾಲ್ಯದ ದಿನಗಳನ್ನು ಸ್ಮರಿಸಿದರು.
ಶ್ರೀ ‌ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರ ‌ಆಶೀರ್ವಾದ‌‌ ನಾಡಿನ ಪ್ರತಿಯೊಬ್ಬರಿಗೂ ಅದರಲ್ಲೂ ವಿಶೇಷವಾಗಿ ‌ವಿಕಲಚೇತನರು,ಬಡಜನರಿಗೆ ಸಿಗಲಿ ಎಂದು ಸಿಎಂ ಕೋರಿದರು.

ಹುಬ್ಬಳ್ಳಿಗೆ ಆಗಮಿಸಿ ಶ್ರೀ ದತ್ತಾತ್ರೇಯ ಸ್ವಾಮಿ ದರ್ಶನ ಪಡೆಯಬೇಕೆಂದು ಬೊಮ್ಮಾಯಿಯವರು ಶ್ರೀಗಳಿಗೆ ಇದೇ ವೇಳೆ ಮನವಿ ಮಾಡಿದರು.
ಮೇ.22 ರಂದು ಶ್ರೀಗಳು ನನಗೆ ಇಲ್ಲಿಗೆ‌ ಬರಲು ಆಹ್ವಾನ ನೀಡಿದ್ದರು ಆದರೆ ದಾವೂಸ್ ನ ವಿಶ್ವ ಆರ್ಥಿಕ ಸಮ್ಮೇಳನದ ಲ್ಲಿ ಪಾಲ್ಗೊಂಡಿದ್ದರಿಂದ ಬರಲಾಗಲಿಲ್ಲ ಇಂದು ದತ್ತನ ಶಕ್ತಿಯೇ ನನ್ನನ್ನು ಇಲ್ಲಿಗೆ‌ ಕರೆಸಿಕೊಂಡಿದೆ ಎಂದು ಸಿಎಂ ನುಡಿದರು.

ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರು ಅನುಗ್ರಹ ಆಶೀರ್ವಚನ ನೀಡಿ,ನಮ್ಮ ಜೀವನದಲ್ಲಿ ಯಾವುದೇ ನಡೆದರೂ ಒಳ್ಳೆಯದಕ್ಕೆ ಎಂದು ಕೊಳ್ಳಬೇಕು,ಹೀಗಾಗಲು ಯಾರು ಕಾರಣ,ಏನು ಕಾರಣ ಎಂಬುದರ ಬಗ್ಗೆ ತಮ್ಮನ್ನು ತಾವೇ ವಿಮರ್ಶೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

Advertisement

ಜನರು ರಜೋಗುಣಕ್ಕೆ ಹೆಚ್ಚು ಆಕರ್ಷಿತರಾಗುತ್ತಾರೆ ಆದರೆ ಸತ್ವಗುಣ ಇಚ್ಚಿಸುವುದಿಲ್ಲ ಹಾಗಾಗಿ ಸುಳ್ಳು ಹೇಳುತ್ತಾರೆ.ಸತ್ಯವೇ ಜೀವನ,ಸತ್ಯವೇ ಪ್ರಾಣ ಎಂಬುದನ್ನು ಮನುಷ್ಯ ಅರಿಯಬೇಕು.ಇದಕ್ಕೆ ಗುರುವಿನ ಅವಶ್ಯಕತೆ ಇದೆ ಎಂದರು.

ಶ್ರೀ ದತ್ತನ ರೂಪ ಮೂರು ತತ್ವಗಳನ್ನು ಹೇಳುತ್ತದೆ.ಗುರು ಅವತಾರವೇ ಶ್ರೇಷ್ಠ. ಅದೇ ದತ್ತಾತ್ರೇಯ ‌ಅವತಾರ ಎಂದು ಶ್ರೀಗಳು ಬಣ್ಣಿಸಿದರು. ನಮ್ಮ ಆಶ್ರಮಕ್ಕೆ ಹಲವಾರು ಸಿಎಂಗಳು, ರಾಷ್ಟ್ರಪತಿಗಳು, ಪ್ರಧಾನಿಗಳು ಬಂದಿದ್ದಾರೆ .ನಾನು ಬೇಕಾದಷ್ಟು ಸಿಎಂ ಗಳನ್ನು ನೋಡಿದ್ದೇನೆ. ಆದರೆ ನಮ್ಮ ಸಿಎಂ ಬಸವರಾಜ ಬೊಮ್ಮಾಯಿಯವರಲ್ಲಿ ಪ್ರತ್ಯೇಕತೆ ಕಂಡಿದ್ದೇನೆ ಅದೇ ಅವರ‌ ವಿಶೇಷತೆ.ಇದು ನಾಡಿನ ಸೌಭಾಗ್ಯ ಎಂದು ಶ್ರೀಗಳು ‌ತಿಳಿಸಿದರು.

ಸಮಸ್ತ ಕನ್ನಡಿಗರ ಪರವಾಗಿ ಮೈಸೂರಿನ ಈ ಪೀಠದಲ್ಲೇ ಇರಬೇಕೆಂದು ಬೊಮ್ಮಾಯಿ ಅವರು ಮನವಿ ಮಾಡಿದ್ದಾರೆ .ಈ ಬಗ್ಗೆ ನಿರ್ಧಾರ ‌ಮಾಡುತ್ತೇನೆ ಎಂದು ಹೇಳಿದರು.
ಬೊಮ್ಮಾಯಿಯವರು ಅಂದುಕೊಂಡ ಕೆಲಸಗಳೆಲ್ಲ ಶೀಘ್ರ ವಾಗಿ‌ ಆಗಲಿ. ಮುಂದೆಯೂ ಹೀಗೆಯೇ ರಥ ನಡೆಸಲಿ ಎಂದು ಶ್ರೀಗಳು ಆಶೀರ್ವಚನ ನೀಡಿದರು.

ಲೋಕಕಲ್ಯಾಣಕ್ಕಾಗಿ ಒಂದು ಕೋಟಿ ದತ್ತ ಯಜ್ಞ, ಲಕ್ಷ ಶ್ರೀಸೂಕ್ತ ಹೋಮ ಮಾಡಲಾಗುತ್ತಿದೆ ಎಂದು ಶ್ರೀಗಳು ತಿಳಿಸಿದರು.ಕಿರಿಯ ಶ್ರೀಗಳಾದ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿಯವರು ‌ಮುಖ್ಯ ಮಂತ್ರಿಗಳನ್ನು ಆಶ್ರಮದ ‌ಪರವಾಗಿ ಗೌರವಿಸಿದರು.ಇದೇ ಸಂದರ್ಭದಲ್ಲಿ ಗಣಪತಿ ಸಚ್ಚಿದಾನಂದ ಆಶ್ರಮದ ವಿಶ್ವ ಪ್ರಾರ್ಥನಾ ಮಂದಿರದ ಮುಂಭಾಗದಲ್ಲಿ ಮೈಸೂರಿನ ಚೆಲುವಾಂಬ ಆಸ್ಪತ್ರೆಗೆ ಅವಧೂತ‌ ದತ್ತಪೀಠದ ವತಿಯಿಂದ ನೀಡಲಾದ‌ 28 ಲಕ್ಷ ರೂಪಾಯಿ ಮೌಲ್ಯದ ಆಂಬುಲೆನ್ಸ್‌ ಅನ್ನು ಸಿಎಂ ಚೆಲುವಾಂಬ ಆಸ್ಪತ್ರೆಯ ಸೂಪರಿಂಟೆಂಡೆಂಟ್ ಡಾ.ಸವಿತಾ ಹಾಗೂ ಎಂ ಎಂ ಸಿ ಪ್ರಾಂಶುಪಾಲರಾದ ಡಾ.ದಾಕ್ಷಾಯಿಣಿ ಅವರಿಗೆ ಹಸ್ತಾಂತರಿಸಿದರು.

ಗಣಪತಿ ಶ್ರೀಯವರ 80 ನೇ ಜನ್ಮದಿನೋತ್ಸವದ ಅಂಗವಾಗಿ ಕಿರಿಯ ಶ್ರೀಗಳಾದ ಶ್ರೀ ‌ದತ್ತ ವಿಜಯಾ ನಂದ ತೀರ್ಥ ಸ್ವಾಮೀಜಿಯವರು ಶ್ರೀಗಳ ಜನ್ಮ ಸ್ಥಳವಾದ ಮೇಕೆದಾಟಿನಿಂದ ಮೈಸೂರಿನ ವರೆಗೆ ಹಮ್ಮಿಕೊಂಡಿದ್ದ ಪಾದಯಾತ್ರೆ ಸಂದರ್ಭದಲ್ಲಿ ಮಹಿಳೆಯರು ಮತ್ತು ಮಕ್ಕಳ ಸ್ವಾಸ್ಥ್ಯ ಕ್ಕಾಗಿ ಆಂಬುಲೆನ್ಸ್ ಸಹಾಯ ಮಾಡುವ ಉದ್ದೇಶ ಹೊಂದಿದ್ದರು.ಅದರಂತೆಯೇ ಇಂದು ಆಂಬುಲೆನ್ಸ್ ಕೊಡುಗೆ ನೀಡಲಾಯಿತು.ಇದಕ್ಕಾಗಿ ಬಸವರಾಜ ಬೊಮ್ಮಾಯಿಯವರು ಆಶ್ರಮದ ಸೇವೆಯನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು.

ಈ ವೇಳೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್, ಸಂಸದ ಪ್ರತಾಪ್‌ ಸಿಂಹ, ಶಾಸಕರಾದ ಎಸ್.ಎ.ರಾಮದಾಸ್,ನಾಗೇಂದ್ರ,ಮೈಸೂರು ಮೇಯರ್‌ ಸುನಂದಾ ಪಾಲನೇತ್ರ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಚ್.ವಿ.ರಾಜೀವ್ ಮತ್ತಿತರರು ಉಪಸ್ಥಿತರಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next