ಕೊನೆಗೂ ಕುತೂಹಲಕ್ಕೆ ತೆರೆಬಿದ್ದಿದೆ. ಅಭಿಮಾನಿಗಳು ಖುಷಿಯಾಗಿದ್ದಾರೆ! ನಾವು ಹೇಳುತ್ತಿರೋದು ಶಿವರಾಜ್ ಕುಮಾರ್ ಅವರ ಹೊಸ ಸಿನಿಮಾದ ಕುರಿತಾಗಿ.
ಹೌದು, ಶಿವರಾಜ್‌ಕುಮಾರ್ ಅಭಿನಯದ “ಭಜರಂಗಿ-2′ ಚಿತ್ರ ಯಾವಾಗ ತೆರೆಕಾಣುತ್ತದೆ ಎಂದು ಕಾಯುತ್ತಿದ್ದ ಅಭಿಮಾನಿಗಳಿಗೆ ಈಗ ಸಂತಸದ ಸುದ್ದಿ ಸಿಕ್ಕಿದೆ. “ಭಜರಂಗಿ-2′ ಚಿತ್ರ ಸೆಪ್ಟೆಂಬರ್ 10ರಂದು ತೆರೆಗೆ ಬರಲಿದೆ. ಈ ಸುದ್ದಿಯನ್ನು ಸ್ವತಃ ನಿರ್ಮಾಪಕ ಜಯಣ್ಣ ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಗಣೇಶನ ಹಬ್ಬಕ್ಕೆ ಅಭಿಮಾನಿಗಳಿಗೆ “ಭಜರಂಗಿ-2′ ದರ್ಶನ್ ಸಿಗಲಿದೆ.
ಇನ್ನು ಕೊರೊನಾ ಎರಡನೇ ಅಲೆ ನಂತರ ಸಿನಿಮಾದ ರಿಲೀಸ್ ಡೇಟ್ ಅನೌನ್ಸ್ ಮಾಡಿದ ಮೊದಲ ಸಿನಿಮಾ “ಭಜರಂಗಿ-2′. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಚಿತ್ರ ಮೇನಲ್ಲಿ ತೆರೆ ಕಾಣಬೇಕಿತ್ತು. ಆದರೆ, ಕೊರೊನಾ ಎರಡನೇ ಅಲೆಯಿಂದಾಗಿ ಚಿತ್ರ ಬಿಡುಗಡೆ ಆಗಲಿಲ್ಲ. ಈಗ ಸೆಪ್ಟೆಂಬರ್ 10ಕ್ಕೆ ತೆರೆಕಾಣಿಸಲು ಚಿತ್ರತಂಡ ಅಣಿಯಾಗಿದೆ.
ಎ.ಹರ್ಷ ನಿರ್ದೇಶನದ ಈ ಚಿತ್ರವನ್ನು ಜಯಣ್ಣ ಮತ್ತು ಭೋಗೇಂದ್ರ ನಿರ್ಮಾಣ ಮಾಡುತ್ತಿದ್ದಾರೆ. “ಭಜರಂಗಿ’ ಕನ್ನಡ ಚಿತ್ರರಂಗದಲ್ಲಿ ದೊಡ್ಡ ಯಶಸ್ಸು ಪಡೆದಿತ್ತು. ಅದೇ ಯಶಸ್ಸಿನ ಬಳಿಕ ನಿರ್ದೇಶಕ ಹರ್ಷ ಅವರು “ಭಜರಂಗಿ 2′ ಮಾಡುತ್ತಿದ್ದಾರೆ. ಈಗಾಗಲೇ ಚಿತ್ರದ ಪೋಸ್ಟರ್, ಟೀಸರ್ ನೋಡಿದವರಿಗೆ ಇಲ್ಲೂ ಹೊಸದೊಂದು ಕಥೆ ಬಿಚ್ಚಿಕೊಳ್ಳುವ ನಿರೀಕ್ಷೆ ಹೆಚ್ಚಿದೆ.
ಅದೇನೆ ಇರಲಿ, “ಭಜರಂಗಿ’ ಮೂಲಕ ಶಿವಣ್ಣ ಹೊಸ ವಿಷಯ ಹೇಳಿದ್ದರು. ಈ ಬಾರಿ “ಭಜರಂಗಿ 2′ ಮೂಲಕವೂ ಹೊಸತನ ಕಟ್ಟಿಕೊಡುತ್ತಾರೆ ಎಂಬ ನಂಬಿಕೆ ಅವರ ಅಭಿಮಾನಿಗಳಲ್ಲಿದೆ