ಕಾಪು: ಮನೆ-ಮನಗಳಿಗೆ ಅಂಟಿಕೊಂಡಿರುವ ಕಲಿಯನ್ನು ದೂರ ಮಾಡುವಲ್ಲಿ ಭಜನೆಯ ಪಾತ್ರ ಮಹತ್ವದ್ದಾಗಿದೆ. ಭಜನೆ ಮಾಡುವುದರಿಂದ ಸಮಾಜಕ್ಕೆ ಶ್ರೇಯಸ್ಸಾಗುತ್ತದೆ. ಭಜನೆಯಿಂದ ಸಮಾಜದ ಸಂಘಟನೆಯ ಜತೆಗೆ ಸಮಾಜದ ಜನರಲ್ಲಿ ಮಾನಸಿಕ ಶಾಂತಿಯೂ ನೆಲೆಯೂರುತ್ತದೆ. ದಾಸರಿಂದ ಉಲ್ಲೇಖೀಸಲ್ಪಟ್ಟಿರುವ ವೇದ, ಪುರಾಣ, ಉಪನ್ಯಾಸಗಳು ಸಮಾಜಕ್ಕೆ ಅಂಟುವ ದುಷ್ಟತೆಯನ್ನೂ ದೂರೀಕರಿಸಬಲ್ಲವು ಎಂದು ಉಡುಪಿ ಶ್ರೀ ಅದಮಾರು ಮಠದ ಶ್ರೀ ವಿಶ್ವಪ್ರಿಯ ತೀರ್ಥ ಸ್ವಾಮೀಜಿ ಹೇಳಿದರು.
ಮಜೂರು ಗ್ರಾಮದ ಉಳಿಯಾರು ಶ್ರೀ ದುರ್ಗಾಪರಮೇಶ್ವರೀ ಭಜನ ಮಂಡಳಿಯ ರಜತ ಮಹೋತ್ಸವದ ಪ್ರಯುಕ್ತ ಮಾ. 3ರಂದು ಜರಗಿದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು. ನಮ್ಮ ಕಾರ್ಯ ಯೊಜನೆಗಳು ಸಾಕಾರಗೊಳ್ಳಬೇಕಾದರೆ ಸರಕಾರ, ಅಧಿಕಾರಿಗಳೇ ಕಾರಣರು ಎಂದು ನಾವು ಅವರ ಹಿಂದೆ ಅಲೆದಾಡುತ್ತೇವೆ. ಆದರೆ ಎಲ್ಲವನ್ನೂ ನೀಡಬಲ್ಲ ದೇವರ ಹಿಂದೆ ನಾವು ನಲಿಯುವುದಿಲ್ಲ. ಪ್ರತಿಯೊಂದು ಮನೆಗಳಲ್ಲಿ ಭಜನೆ ಹರಿ ಕೀರ್ತನೆಗಳು ಹರಿದು ಬರುವಂತಾಗಬೇಕು. ಕಳೆದ 25 ವರ್ಷಗಳಿಂದ ಶ್ರೀ ದುರ್ಗಾಪರಮೇಶ್ವರೀ ಭಜನ ಮಂಡಳಿಯು ಮಾಡಿರುವ ಸಾಧನೆ ಅನನ್ಯವಾದುದ್ದಾಗಿದೆ ಎಂದರು.
ಯುಪಿಸಿಎಲ್ – ಅದಾನಿಯ ಜಂಟಿ ಅಧ್ಯಕ್ಷ ಕಿಶೋರ್ ಆಳ್ವ ಮಾತನಾಡಿ, ನಾವು ನಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದರ ಜತೆಗೆ ರಾಷ್ಟ್ರ ಪ್ರೇಮ, ಧರ್ಮ, ಸಂಸ್ಕೃತಿಯನ್ನು ಉಳಿಸುವ ಬಗ್ಗೆಯೂ ಅವಶ್ಯ ಮಾರ್ಗ ದರ್ಶನವನ್ನೀಯಬೇಕು. ಇಂದಿನ ಯುವ ಪೀಳಿಗೆಗೆ ಇರುವ ದೇಶ ಮತ್ತು ಭವಿಷ್ಯದ ಬಗೆಗಿನ ಚಿಂತನೆಗೆ ಪೂರಕವಾಗಿ ನಾವು ಸ್ಪಂದಿಸಬೇಕಿದೆ ಎಂದರು. ಸಮಾಜ ಸೇವಕ ಲೀಲಾಧರ ಶೆಟ್ಟಿ ಕರಂದಾಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ಸುರೇಶ್ ಪಿ. ಶೆಟ್ಟಿ ಗುರ್ಮೆ ಪ್ರಧಾನ ಭಾಷಣ ಮಾಡಿದರು. ಬೆಳಪು ಗ್ರಾ. ಪಂ. ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ, ಜೆ.ಡಿ.ಎಸ್ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ ಬಾಲಾಜಿ, ಕಟಪಾಡಿ ಗ್ರಾ. ಪಂ. ಮಾಜಿ ಅಧ್ಯಕ್ಷ ವಿನಯ ಬಲ್ಲಾಳ್, ಮಜೂರು ಗ್ರಾ. ಪಂ. ಅಧ್ಯಕ್ಷ ಸಂದೀಪ್ ರಾವ್, ಉಳಿಯಾರು ಶ್ರೀ ದುರ್ಗಾಪರಮೇಶ್ವರೀ ದೇಗುಲದ ಆಡಳಿತ ಮೊಕ್ತೇಸರ ಡಾ| ಯು. ಪಿ. ಉಪಾಧ್ಯಾಯ, ಉಳಿಯಾರು ಕೃಷ್ಣಮೂರ್ತಿ ಆಚಾರ್ಯ, ಭಜನ ಮಂಡಳಿಯ ಸ್ಥಾಪಕಾಧ್ಯಕ್ಷ ರಾಘವೇಂದ್ರ ಯು. ವಿ., ಎಂಜಿನಿಯರ್ ತ್ರಿವಿಕ್ರಮ ಭಟ್ ಉಳಿಯಾರು, ಅರ್ಚಕ ಗಣಪತಿ ಭಟ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಭಜನ ಮಂಡಳಿಯ ಅಧ್ಯಕ್ಷ ಗಣೇಶ್ ನಾಯ್ಕ, ಭಜನಾ ಮಂಡಳಿಯ ಪದಾಧಿಕಾರಿಗಳು ಮತ್ತು ರಜತ ಮಹೋತ್ಸವ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
ರಜತ ಮಹೋತ್ಸವ ಸಮಿತಿಯ ಕಾರ್ಯದರ್ಶಿ ನಾಗಭೂಷಣ್ ರಾವ್ ಸ್ವಾಗತಿಸಿದರು. ರಜತ ಮಹೋತ್ಸವ ಸಮಿತಿಯ ಅಧ್ಯಕ್ಷ ಶೈಲೇಂದ್ರ ಬಿ. ಪ್ರಸ್ತಾವನೆಗೈದರು. ನಿರ್ಮಲ್ ಕುಮಾರ್ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.