ಬೆಂಗಳೂರು: ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ನಿಟ್ಟಿನಲ್ಲಿ ಭೈರತಿ ಸುರೇಶ್ ಅವರು ವಿಧಾನಪರಿಷತ್ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಸಭಾಪತಿ ಡಿಎಚ್ ಶಂಕರಮೂರ್ತಿ ಅವರು ರಾಜೀನಾಮೆ ಅಂಗೀಕರಿಸಿದ್ದಾರೆ ಎಂದು ವರದಿ ತಿಳಿಸಿದೆ.
ಹೆಬ್ಬಾಳ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಭೈರತಿ ಸುರೇಶ್ ಆಕಾಂಕ್ಷಿಯಾಗಿದ್ದು, ಈ ನಿಟ್ಟಿನಲ್ಲಿ ತನಗೆ ಟಿಕೆಟ್ ಕೊಡಬೇಕೆಂದು ಹೈಕಮಾಂಡ್ ಗೆ ಮನವಿ ಸಲ್ಲಿಸಿದ್ದರು. ಹೈಕಮಾಂಡ್ ಭೈರತಿಗೆ ಹೆಬ್ಬಾಳ ಕ್ಷೇತ್ರದ ಟಿಕೆಟ್ ನೀಡಿದೆ. ಏತನ್ಮಧ್ಯೆ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ನೆಲೆಯಲ್ಲಿ ಭಾನುವಾರ ಸಂಜೆ ಸಭಾಪತಿ ಶಂಕರಮೂರ್ತಿ ಅವರ ಮನೆಗೆ ತೆರಳಿ ಭೈರತಿ ಎಂಎಲ್ ಸಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು.
ಇನ್ನೂ ಮೂರು ತಿಂಗಳ ಕಾಲ ಸದಸ್ಯತ್ವ ಅವಧಿ ಹೊಂದಿದ್ದರೂ ಕೂಡಾ ಭೈರತಿ ರಾಜೀನಾಮೆ ನೀಡಿದ್ದಾರೆ. ಮತ್ತೊಂದೆಡೆ ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಹಿರಿಯ ಮುಖಂಡ, ಮಾಜಿ ಸಚಿವ ಜಾಫರ್ ಷರೀಫ್ ಮೊಮ್ಮಗ ರೆಹಮಾನ್ ಷರೀಫ್ ಕೂಡಾ ಟಿಕೆಟ್ ಆಕಾಂಕ್ಷಿಯಾಗಿದ್ದು, ಜಟಾಪಟಿಗೆ ಕಾರಣವಾಗಿತ್ತು.