ಬೆಂಗಳೂರು: ಗೌರಮ್ಮ ಸ್ಮಾರಕ ಟ್ರಸ್ಟ್ ವತಿಯಿಂದ ಡಿ.23ರಂದು ಕನ್ನಡದ ಯುವ ಲೇಖಕರಿಗೆ ಕಾದಂಬರಿಗಾರ ಡಾ.ಎಸ್.ಎಲ್.ಭೈರಪ್ಪ ಅವರೊಡನೆ ಸಂವಾದ ಮತ್ತು ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ.
ಉದಯೋನ್ಮುಖ ಕನ್ನಡ ಲೇಖಕರಿಗೆ ಡಾ.ಎಸ್.ಎಲ್.ಭೈರಪ್ಪ ಅವರೊಂದಿಗೆ ಸಮಯ ಕಳೆಯುವ ಅವಕಾಶ ನೀಡಬೇಕೆಂಬ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿದೆ. ಭೈರಪ್ಪನವರ ಹುಟ್ಟೂರಾದ ಸಂತೇಶಿವರದಲ್ಲಿ ಬೆಳಗ್ಗೆ 9.30 ರಿಂದ ಸಂಜೆ 6.30ರವರೆಗೆ ಕಾರ್ಯಾಗಾರ ನಡೆಯಲಿದೆ.
ಕಾರ್ಯಾಗಾರದಲ್ಲಿ ಭೈರಪ್ಪ ಅವರು ಯುವ ಹವ್ಯಾಸಿ ಲೇಖಕರಿಗೆ ಬರವಣಿಗೆಯ ವಿವಿಧ ಆಯಾಮಗಳ ಬಗ್ಗೆ ಮಾರ್ಗದರ್ಶನ ನೀಡಲಿದ್ದಾರೆ ಎಂದು ಟ್ರಸ್ಟ್‌ನ ಕಾರ್ಯದರ್ಶಿ ಎಸ್.ಎಲ್.ಕೃಷ್ಣಪ್ರಸಾದ್ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಕತೆ ಕಾದಂಬರಿಗಳಲ್ಲಿ ಬರುವ ಸಂಬಂಧಗಳ ನವಿರು, ಭಾವನಾತ್ಮಕ ನಂಟು, ಪಾತ್ರಗಳ ನಿರ್ಮಾಣ ಮತ್ತು ಅದರ ವೈಶಿಷ್ಟé, ಸಾಮಾಜಿಕ ಕಳಕಳಿ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಸತ್ಯಶೋಧನೆಯಿಂದ ಕಾದಂಬರಿಯಲ್ಲಿ ಬರಬಹುದಾದ ಸೃಜನಶೀಲತೆ ಹೀಗೆ ಹಲವಾರು ಆಯಾಮಗಳ ಕುರಿತು ನಡೆಯುವ ಚರ್ಚೆ ಯುವ ಲೇಖಕರಿಗೆ ಸಹಕಾರಿಯಾಗಲಿದೆ ಎಂದರು.
2010ರಲ್ಲಿ ಎಸ್.ಎಲ್.ಭೈರಪ್ಪ ಅವರಿಗೆ ಸರಸ್ವತಿ ಸಮ್ಮಾನ ಪ್ರಶಸ್ತಿ ಸಂದ ವರ್ಷದಿಂದ ಪ್ರತಿ ವರ್ಷ ಡಿಸೆಂಬರ್ ತಿಂಗಳು, ಸಂತೇಶಿವರದಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಈ ಬಾರಿ ಯುವ ಲೇಖಕರಿಗೆ ಕಾರ್ಯಾಗಾರ ಆಯೋಜಿಸಲಾಗಿದೆ. ಕನಿಷ್ಠ ಒಂದು ಪುಸ್ತಕವನ್ನು ರಚಿಸಿ ಪ್ರಕಟಿಸಿರುವ ಹಾಗೂ ಪುಸ್ತಕ ಬರೆಯುವ ಪ್ರಕ್ರಿಯೆಯಲ್ಲಿರುವ, 20ರಿಂದ 40 ವರ್ಷ ವಯೋಮಿತಿಯ ಲೇಖಕರು ಕಾರ್ಯಾಗಾರದಲ್ಲಿ ಭಾಗವಹಿಸಬಹುದು.
50 ಲೇಖಕರ ಪಾಲ್ಗೊಳ್ಳುವಿಕೆಗೆ ಮಾತ್ರ ಅವಕಾಶವಿದ್ದು, ಆಸಕ್ತರು slbhyrappawebiste@gmail.com ಗೆ ನ.30ರೊಳಗಾಗಿ ಸ್ವವಿವರ, ಪ್ರಕಟವಾಗಿರುವ ಪುಸ್ತಕದ ಹೆಸರು ಮತ್ತು ಪ್ರಕಾಶಕರ ಮಾಹಿತಿ ಕಳುಹಿಸಬೇಕು. ಹೆಚ್ಚಿನ ಮಾಹಿತಿಗೆ ಮೊ: 99866 88607 ಸಂಪರ್ಕಿಸಬಹುದು ಎಂದು ಕೃಷ್ಣಪ್ರಸಾದ್ ಮಾಹಿತಿ ನೀಡಿದರು.