ಹುಬ್ಬಳ್ಳಿ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ ಭಾಗವತ ಅವರು ಹುಬ್ಬಳ್ಳಿ ಭೇಟಿಯ ಕೊನೆಯ ದಿನ ಭಾನುವಾರ ಸಂಘದ ಪ್ರಮುಖರಿಗೆ ಸಂಘದ ಶಿಸ್ತು ಹಾಗೂ ಸಮಾಜಮುಖೀ ಸೇವೆ ಕುರಿತು ಬೋಧಿಸಿದರು.
ಇಲ್ಲಿನ ಕುಸುಗಲ್ ರಸ್ತೆಯ ಶ್ರೀನಿವಾಸ ಗಾರ್ಡನ್‌ನಲ್ಲಿ ನಡೆದ ಆರೆಸ್ಸೆಸ್ ಪ್ರಮುಖರ ಬೈಠಕ್‌ನಲ್ಲಿ ಮೋಹನ ಭಾಗವತ ಅವರು, ಸ್ವಯಂ ಸೇವಕರು ತಮ್ಮ ಬದುಕಿನಲ್ಲಿ ಸ್ವಯಂ ಶಿಸ್ತು ರೂಢಿಸಿಕೊಂಡು ಸಮಾಜಕ್ಕೆ ಹೇಗೆ ಮಾದರಿಯಾಗಿರಬೇಕು.
ಸಮಾಜಮುಖೀಯಾಗಿ ಹೇಗೆ ಕೆಲಸ ಮಾಡಬೇಕು ಸೇರಿದಂತೆ ಹಲವು ವಿಷಯಗಳ ಕುರಿತು ಸಂಘದ ಪ್ರಮುಖರಿಗೆ ತಿಳಿಸಿಕೊಟ್ಟರು. ಸಮಾಜ ಕೆಟ್ಟ ದೃಷ್ಟಿಯಿಂದ ನೋಡುವಂಥ ಕಾರ್ಯಗಳಲ್ಲಿ ಸಂಘದ ಸ್ವಯಂ ಸೇವಕರು ತೊಡಗಿಕೊಳ್ಳದೆ ಸಮಾಜಮುಖೀಯಾಗಿ ಕೆಲಸ ಮಾಡಬೇಕು.
ಸಂಘದ ಕಾರ್ಯಗಳಲ್ಲಿ ಹೆಚ್ಚೆಚ್ಚು ತೊಡಗಿಕೊಳ್ಳುವ ಮೂಲಕ ಗ್ರಾಮೀಣ ಭಾಗದಲ್ಲಿ ಶಾಖೆಗಳನ್ನು ಆರಂಭಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನಗಳಾಗಬೇಕು ಎಂದು ತಿಳಿಸಿದರು. ರಾಜ್ಯದ ವಿದ್ಯಮಾನಗಳ ಬಗ್ಗೆ ಪ್ರಮುಖರಿಂದ ಮಾಹಿತಿ ಪಡೆದ ಭಾಗವತ ಅವರು, ಸಂಘಟನೆಯಲ್ಲಿ ತೊಡಗಿರುವ ಸಂಘಟಕರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಯುವಕರನ್ನು ಸಂಘಕ್ಕೆ ಆಕರ್ಷಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡಿರಿ. ಸಾಮಾಜಿಕ ಸೇವೆಗಳು ಸಮಾಜದ ಎಲ್ಲ ಸ್ತರದ ಜನರಿಗೆ ಮುಟ್ಟಿಸುವ ನಿಟ್ಟಿನಲ್ಲಿ ಸ್ವಯಂ ಸೇವಕರು ಮುಂದಾಗಬೇಕು ಎಂದರು. ಧ್ವನಿಯಿಲ್ಲದವರಿಗೆ ಧ್ವನಿಯಾಗುವ ಕೆಲಸ ಸ್ವಯಂ ಸೇವಕರಿಂದ ಆಗಬೇಕು. ಈ ನಿಟ್ಟಿನಲ್ಲಿ ಸಮಾಜಕ್ಕೆ ಹತ್ತಿರವಾಗುವಂಥ ಕಾರ್ಯಗಳನ್ನು ಕೈಗೊಳ್ಳುವಂತೆ ಸೂಚಿಸಿದರು.