ಮುಂಬಯಿ : ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಅವರು ಮತ್ತೂಮ್ಮೆ ಅಯೋಧ್ಯೆ ವಿವಾದವನ್ನು ಕೆದಕಿದ್ದಾರೆ. “ಭಾರತೀಯ ಮುಸ್ಲಿಮರು ಅಯೋಧ್ಯೆಯಲ್ಲಿನ ಮೂಲ ರಾಮ ಮಂದಿರವನ್ನು ಕೆಡಹಿಲ್ಲ; ಅಯೋಧ್ಯೆಯಲ್ಲಿ ರಾಮ ಮಂದಿರವನ್ನು ಪುನರ್ ನಿರ್ಮಿಸುವ ನಮ್ಮ ಹೋರಾಟ ಮುಂದುವರಿಯತ್ತದೆ ಮತ್ತು ನಾವದನ್ನು ನಿರ್ಮಿಸಿಯೇ ಸಿದ್ಧ ‘ ಎಂದು ಭಾಗವತ್ ಹೇಳಿದ್ದಾರೆ.
ಪಾಲಗಢ ಜಿಲ್ಲೆಗೆ ತಾಗಿಕೊಂಡಿರುವ ದಹಾಣುವಿನಲ್ಲಿ ನಡೆದ ವಿರಾಟ್ ಹಿಂದು ಸಮ್ಮೇಳನದಲ್ಲಿ ಮಾತನಾಡುತ್ತಿದ್ದ ಅವರು “ಭಾರತೀಯ ಮುಸ್ಲಿಮರು ರಾಮ ಮಂದಿರವನ್ನು ಕೆಡಹಿಲ್ಲ; ಅಂತಹ ಕೆಲಸವನ್ನು ಭಾರತೀಯ ಪ್ರಜೆಗಳು ಎಂದೂ ಮಾಡುವುದಿಲ್ಲ. ಭಾರತೀಯರ ನೈತಿಕ ಶಕ್ತಿಯನ್ನು ನಾಶ ಮಾಡುವ ಉದ್ದೇಶದಿಂದ ವಿದೇಶೀ ಶಕ್ತಿಗಳು ಭಾರತದಲ್ಲಿನ ದೇವಸ್ಥಾನಗಳನ್ನು ಕೆಡಹಿವೆ’ ಎಂದು ಹೇಳಿದರು.
ಅಯೋಧ್ಯೆಯಲ್ಲಿನ ಮೂಲ ರಾಮಮಂದಿರವನ್ನು ಪುನರ್ ಸ್ಥಾಪಿಸುವ ಹೊಣೆಗಾರಿಕೆ ಇಡಿಯ ದೇಶದ್ದಾಗಿದೆ ಎಂದು ಭಾಗವತ್ ಒತ್ತಿ ಹೇಳಿದರು.
“ಅಯೋಧ್ಯೆಯಲ್ಲಿ ರಾಮ ಮಂದಿರವನ್ನು ನಿರ್ಮಿಸದಿದ್ದರೆ ಹಿಂದೂ ಸಂಸ್ಕತಿಯ ಬೇರುಗಳನ್ನು ತುಂಡಾದಂತೆ. ಅಯೋಧ್ಯೆಯಲ್ಲಿ ಎಲ್ಲಿ ಮೂಲ ರಾಮ ಮಂದಿರ ಇತ್ತೋ ಅಲ್ಲೇ ಮತ್ತೆ ರಾಮ ಮಂದಿರವನ್ನು ನಿರ್ಮಿಸಲಾಗುವುದು; ಆ ಬಗ್ಗೆ ಸಂದೇಹವೇ ಬೇಡ’ ಎಂದು ಭಾಗವತ್ ಹೇಳಿದರು.
“ನಾವಿಂದು ಸ್ವತಂತ್ರರಾಗಿದ್ದೇವೆ. ಎಲ್ಲಿ ಈ ಹಿಂದೆ ಏನೆಲ್ಲ ನಾಶವಾಗಿತ್ತೋ ಅದನ್ನು ಮತ್ತೆ ಪುನರ್ ನಿರ್ಮಿಸುವ ಸ್ವಾತಂತ್ರ್ಯ ನಮಗಿದೆ. ಏಕೆಂದರೆ ಇದು ಕೇವಲ ದೇವಸ್ಥಾನವಲ್ಲ ; ಇದು ನಮ್ಮ ಅಸ್ಮಿತೆಯ ಚಿಹ್ನೆಯಾಗಿದೆ’ ಎಂದು ಭಾಗವತ್ ನುಡಿದರು.