Advertisement

ಪರಮಾತ್ಮನ ಅವತಾರವೇ ಭಗೀರಥರು: ಸಹಜಾನಂದ ಶ್ರೀ

05:14 PM May 26, 2018 | |

ಮಹಾಲಿಂಗಪುರ: ಸಾಕ್ಷಾತ ಪರಶಿವನ ಅವತಾರವೇ ಮಹರ್ಷಿ ಭಗೀರಥರು ಎಂದು ಸ್ಥಳೀಯ ಸಿದ್ಧಾರೂಢ ಬ್ರಹ್ಮವಿದ್ಯಾಶ್ರಮದ ಸಹಜಾನಂದ ಸ್ವಾಮೀಜಿ ಹೇಳಿದರು.

Advertisement

ಸ್ಥಳೀಯ ಲಕ್ಷ್ಮೀ ನಗರದಲ್ಲಿರುವ ಭಗೀರಥ ದೇವಸ್ಥಾನದ ಸಾಂಸ್ಕೃತಿಕ ಭವನದಲ್ಲಿ ತಾಲೂಕು ಭಗೀರಥ ಉಪ್ಪಾರ ಸಮಾಜ ಸೇವಾ ಸಂಘ ಹಾಗೂ ಯುವಕ ಸಂಘದ ಆಶ್ರಯದಲ್ಲಿ ಭಗೀರಥ ದೇವಸ್ಥಾನದ 8 ನೇ ವಾರ್ಷಿಕೋತ್ಸವ ಹಾಗೂ ಜಯಂತ್ಯುತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರಯತ್ನದಲ್ಲಿ ಹೆಸರು ಮಾಡಿದ ಮಹಾತ್ಮರು ಯಾರಾದರು ಇದ್ದರೆ ಅದು ಭಗೀರಥರು ಮಾತ್ರ. ಜಗತ್ತಿನ ಉದ್ಧಾರಕ್ಕಾಗಿ ಗಂಗಾಮಾತೆಯನ್ನೆ ಭೂಮಿಗೆ ತಂದ ಕೀರ್ತಿ ಅವರದ್ದಾಗಿದೆ ಎಂದರು.

ಉಪ್ಪಾರಟ್ಟಿಯ ಸಿದ್ಧಾರೂಢ ಮಠದ ನಾಗೇಶ್ವರಚೇತನ ಶ್ರೀಗಳು ಮಾತನಾಡಿ, ಪ್ರತಿಯೊಬ್ಬರು ನಿಮ್ಮ ನಿಮ್ಮ ಧರ್ಮವನ್ನು ಸಂಗ್ರಹ ಮಾಡಿರಿ. ನಂತರ ಅದೇ ಧರ್ಮ ನಿಮ್ಮನ್ನು ಸಲಹುವ ಕೆಲಸ ಮಾಡುತ್ತದೆ. ಸಮಸ್ತ ಮನುಕುಲದ ಉದ್ಧಾರಕ್ಕಾಗಿ ತನ್ನ ಜೀವನವನ್ನು ಮುಡಿಪಾಗಿಟ್ಟ ಭಗೀರಥರಂಥ ಮಹಾತ್ಮರ ಆದರ್ಶ ಮತ್ತು ತತ್ವಗಳನ್ನು ಎಲ್ಲರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಜಯಂತಿ ಆಚರಣೆ ಸಾರ್ಥಕವಾಗುತ್ತದೆ ಎಂದರು.

ಬೆಳಗಾವಿ ಜಿಲ್ಲಾ ಕಟ್ಟಡ ಕಾರ್ಮಿಕ ಸಂಘದ ಅಧ್ಯಕ್ಷ ಎನ್‌.ಆರ್‌.ಲಾತೂರ ಮಾತನಾಡಿ, ಸಮಾಜ ಬಾಂಧವರು ಆರ್ಥಿಕವಾಗಿ ಶೈಕ್ಷಣಿಕವಾಗಿ ಮುಂದೆ ಬರಬೇಕು. ಸಮಾಜ ಧಾರ್ಮಿಕ ನೆಲೆಗಟ್ಟಿನ ಮೇಲೆ ನಿಲ್ಲುವಂತಾಗಬೇಕು ಎಂದರು.

ಪದ್ಮಶ್ರೀ ಪುರಸ್ಕೃತ ಇಬ್ರಾಹಿಂ ಸುತಾರ ಮಾತನಾಡಿ, ಭಗೀರಥರ ಆದರ್ಶ ಮತ್ತು ಚರಿತ್ರೆಯ ಬಗ್ಗೆ ನಾವೆಲ್ಲರೂ ಪಾಠ ಕಲಿಯಬೇಕಿದೆ. ಸಮಾಜದ ಮುಖಂಡರು ವಿಶಾಲ ಭಾವನೆ ತಳಹದಿ ಮೇಲೆ ಸಮಾಜವನ್ನು ಬೆಳೆಸಬೇಕು. ಸಂಘಟನೆಯಿಲ್ಲದೆ ನಾವು ಬೆಳೆಯಲು ಸಾಧ್ಯವಿಲ್ಲ. ಸಂಘಟನೆ ಮಾಡುವುದು ತಪ್ಪಲ್ಲ. ಆದರೆ ಸಮಾಜ ಬೆಳೆಯಬೇಕು ಎನ್ನುವ ಉದ್ದೇಶ ಇರಬೇಕೆ ವಿನಃ, ಬೇರೆ ಸಂಘಟನೆ, ಸಮಾಜವನ್ನು ತುಳಿಯುವಂತಾಗಬಾರದು. ಸಂಘಟನೆಯನ್ನು ಸಮಾಜದ ಏಳ್ಗೆಗಾಗಿ ಮಾತ್ರ ಉಪಯೋಗಿಸಬೇಕು. ಪರಮಾತ್ಮನಲ್ಲಿ ವಿಶೇಷ ಪ್ರೀತಿವುಳ್ಳವರೇ ಭಾರತೀಯರು. ಕನ್ನಡಿಗರು ಎನ್ನುವ ಹೆಮ್ಮೆ ನಮ್ಮಲ್ಲಿರಬೇಕು ಎಂದರು.

Advertisement

ರನ್ನಬೆಳಗಲಿಯ ಸಿದ್ಧಾರೂಢ ಮಠದ ಸಿದ್ದರಾಮ ಶಿವಯೋಗಿ ಸ್ವಾಮೀಜಿ, ನಿವೃತ್ತ ಶಿಕ್ಷಕ ಎಸ್‌.ಎಂ. ಉಳ್ಳೆಗಡ್ಡಿ, ಪತ್ರಕರ್ತ ಜಯರಾಂ ಶೆಟ್ಟಿ ಮಾತನಾಡಿದರು. ನಂತರ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನಿಸಲಾಯಿತು. ಇದಕ್ಕೂ ಮೊದಲು ಮಹಾಲಿಂಗೇಶ್ವರ ದೇವಸ್ಥಾನದಿಂದ ಭಗೀರಥ ದೇವಸ್ಥಾನದವರೆಗೆ ಭಗೀರಥರ ಭಾವಚಿತ್ರ ಮೆರವಣಿಗೆ ನಡೆಯಿತು.

ಶಿವಯೋಗಿ ರಾಜೇಂದ್ರ ಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ವಕೀಲ ಸುರೇಶ ಲಾತೂರ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಧುರೀಣ ವಿದ್ಯಾಧರ ಸವದಿ, ತೇರದಾಳ ಮತ ಕ್ಷೇತ್ರದ ಬಿಜೆಪಿ ಗ್ರಾಮೀಣ ಮಂಡಳದ ಅಧ್ಯಕ್ಷ ಬಸನಗೌಡ ಪಾಟೀಲ, ಸಂಗಪ್ಪ ಹಲ್ಲಿ, ಮಲ್ಲಪ್ಪ ಸಿಂಗಾಡಿ, ಭೀಮಶಿ ಸಸಾಲಟ್ಟಿ, ಪಾಂಡು ಸಿದ್ದಾಪುರ, ಸುರೇಶ ಪಾಟೀಲ, ಭೀಮಪ್ಪ ಮಂಟೂರ, ಕೆ.ಬಿ ಮಂಟೂರ, ಸದಾಶಿವ ಲೋಣಾರಿ ಇತರರು ಇದ್ದರು. ವಿಷ್ಟು ಲಾತೂರ ನಿರೂಪಿಸಿದರು. ದೇವೇಂದ್ರ ಲಾತೂರ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next