ಬೆಂಗಳೂರು: “ಹಿಂದೆ ರಂಗ ಕ್ಷೇತ್ರದಲ್ಲಿ ಭಾಗವತರಿಗೆ ಭಾರೀ ಗೌರವ, ಮನ್ನಣೆಯಿತ್ತು. ಆ ಗೌರವ ಪಡೆಯಲು ನಾನು ಮೂಡಲಪಾಯ ಯಕ್ಷಗಾನ ಕ್ಷೇತ್ರದ ಭಾಗವತನಾದೆ,’ ಎಂದು ಹಿರಿಯ ಕಲಾವಿದ, ತುಮಕೂರು ಜಿಲ್ಲೆ ತಿಪಟೂರು ಸಮೀಪದ ಅರಳಗುಪ್ಪೆಯ ಕಲ್ಮನೆ ನಂಜಪ್ಪ ಹೇಳಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಯನ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಮನೆಯಂಗಳದಲ್ಲಿ ಮಾತುಕತೆ ಕಾರ್ಯಕ್ರಮದಲ್ಲಿ ತಿಂಗಳ ಅತಿಥಿಯಾಗಿ ಭಾಗವಹಿಸಿ, ತಾವು ಸಾಗಿಬಂದ ಹಾದಿಯ ಬಗ್ಗೆ ಮೆಲಕು ಹಾಕಿದರು.
“ನಮ್ಮದು ಕಲಾವಿದರ ಮನೆತನ. ಮನೆ ವಾತಾವರಣದಿಂದ ಸಿಕ್ಕ ಪ್ರೋತ್ಸಾಹದಿಂದಾಗಿ ನಾನು 6ನೇ ವಯಸ್ಸಿನಲ್ಲೇ ಯಕ್ಷಗಾನ ಪಾತ್ರಕ್ಕೆ ಬಣ್ಣ ಹಚ್ಚಿದೆ. ಹಲವು ಪಾತ್ರ ನಿರ್ವಹಿಸಿ ಮೆಚ್ಚುಗೆ ಪಡೆದ ಬಳಿಕ, ಭಾಗವತ ಕ್ಷೇತ್ರದತ್ತ ಹೆಜ್ಜೆಯಿರಿಸಿ ಆ ಕ್ಷೇತ್ರದಲ್ಲೂ ಸೈ ಎನಿಸಿಕೊಂಡೆ,’ ಎಂದು ನಂಜಪ್ಪ ಮುಗುಳ್ನಗೆ ಬೀರಿದರು.
“ಈ ಕಲೆಯನ್ನು ನನ್ನ ಮಕ್ಕಳು ಹಾಗೂ ಮೊಮ್ಮಕ್ಕಳಿಗೆ ಧಾರೆ ಎರೆದಿದ್ದೇನೆ. ಆದರೆ, ಈಗಿನ ಯುವಕರು ಮೂಡಲಪಾಯ ಯಕ್ಷಗಾನದತ್ತ ಒಲವು ತೋರುತ್ತಿಲ್ಲ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸಾಹಿತಿಗಳು, ವಿಚಾರವಂತರು ಕೈಜೋಡಿಸಿ ಈ ಕಲೆಯನ್ನು ಉಳಿಸಿ ಮುಂದಿನ ತಲೆಮಾರಿಗೆ ಕೊಂಡೊಯ್ಯಬೇಕು,’ ಎಂದು ಮನವಿ ಮಾಡಿದರು.
“ತಿಪಟೂರಿನ ಸಮೀಪದ ಸ್ವಗ್ರಾಮ ಅರಳಗುಪ್ಪೆ ಮತ್ತು ತಿಪಟೂರಿನಲ್ಲಿ ಯಕ್ಷಗಾನ ಕಲಿಕಾ ಕೇಂದ್ರ ಆರಂಭಿಸಲಾಗಿದೆ. ಆದರೆ, ಅಲ್ಲಿಗೆ ಯುವಕರು ಬರುತ್ತಿಲ್ಲ. ಉಚಿತವಾಗಿ ಹೇಳಿಕೊಡುತ್ತೇನೆ ಎಂದರೂ ಆರಂಭದಲ್ಲಿ ಬಂದು ನಂತರ ಮಾಯವಾಗುತ್ತಾರೆ. ಹೀಗಾದರೆ ಕಲೆ ಉಳಿಸುವುದು ಹೇಗೆ,’ ಎಂದು ಬೇಸರ ವ್ಯಕ್ತಪಡಿಸಿದರು.
ಕಲ್ಲಿನ ಮನೆಯ ನಂಜಪ್ಪ: ಪ್ರಾಥಮಿಕ ಶಿಕ್ಷಣ ಹುಟ್ಟೂರಿನಲ್ಲೇ ನಡೆಯಿತು. ನಂತರ ಅಜ್ಜಿ ಊರಾದ ನೊಣವಿನಕೆರೆಗೆ ತೆರಳಿ ಮೆಟ್ರಿಕ್ಯೂಲೇಷನ್ ಓದಿದೆ. ಈ ವೇಳೆ ಮನೆ ಕಟ್ಟುವ ಸಲುವಾಗಿ ನಮ್ಮಪ್ಪ ಶಾಲೆ ಬಿಡಿಸಿದರು. ಹೀಗಾಗಿ ವ್ಯವಸಾಯದಲ್ಲಿ ತೊಡಗಿದೆ. ನಂತರ ನಾನೇ ಸ್ವತಃ ಕಲ್ಲಿನ ಮನೆ ಕಟ್ಟಿದೆ. ಅದಕ್ಕಾಗಿಯೇ “ಕಲ್ಮನೆ ನಂಜಪ್ಪ’ ಎಂದು ಹೆಸರು ಬಂತು ಎಂದರು. ಈ ವೇಳೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಕೆ.ಎಂ.ಜಾನಕಿ ಉಪಸ್ಥಿತರಿದ್ದರು.
ಬಡಗಿ ಕೆಲಸದಲ್ಲೂ ಎತ್ತಿದ ಕೈ: “ಯಕ್ಷಗಾನದ ಭಾಗವತಿಕೆ ಮಾತ್ರವಲ್ಲ. ಬಡಗಿ ಕೆಲಸದಲ್ಲೂ ನಾನು ಹೆಸರು ಮಾಡಿದ್ದೇನೆ. ಆ ಕಾಲದಲ್ಲೇ ಮರ ಹಾಗೂ ಟಯರ್ ಎತ್ತಿನ ಗಾಡಿಗಳನ್ನು ತಯಾರಿಸುತ್ತಿದ್ದೆ. ಸುಮಾರು 250 ಮರದ ಗಾಡಿ ಹಾಗೂ 20 ಟಯರ್ ಗಾಡಿಗಳನ್ನು ತಯಾರಿಸಿದ್ದೇನೆ. ತುಮಕೂರು ಮಾತ್ರವಲ್ಲದೆ ಅನ್ಯ ಜಿಲ್ಲೆಗಳಿಂದ ಎತ್ತಿನ ಗಾಡಿಗಳನ್ನು ಮಾಡಿಸಿಕೊಳ್ಳಲು ನಮ್ಮ ಊರಿಗೆ ಬರುತ್ತಿದ್ದರು,’ ಎಂದು ಕಲ್ಮನೆ ನಂಜಪ್ಪ ಹೇಳಿದರು.