ಬೆಂಗಳೂರು: ಶಾಲಾ ಪಠ್ಯ ಪುಸ್ತಕದಲ್ಲಿ ಭಗವದ್ಗೀತೆ ಸೇರಿಸುವ ಗುಜರಾತ್ ಸರ್ಕಾರದ ನಡೆಯ ಬಳಿಕ ರಾಜ್ಯದಲ್ಲೂ ಇದೇ ರೀತಿಯ ಚರ್ಚೆ ಆರಂಭವಾಗಿದೆ. ಗುಜರಾತ್ ಮಾದರಿಯಂತೆ ರಾಜ್ಯದ ಪಠ್ಯಕ್ರಮದಲ್ಲೂ ಭಗವದ್ಗೀತೆ ಸೇರಿಸುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚೆಯಾಗುತ್ತಿದೆ.
ಈ ಬಗ್ಗೆ ಮಾತನಾಡಿದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್, ನೈತಿಕ ವಿಜ್ಞಾನ ಸೇರ್ಪಡೆಯ ಬಗ್ಗೆ ಅನೇಕ ಬೇಡಿಕೆಗಳಿವೆ. ಗುಜರಾತ್ ನಲ್ಲಿ ಭಗವದ್ಗೀತೆ ಸೇರಿಸುತ್ತೇವೆ ಎಂದು ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಮಾಡುವ ಬಗ್ಗೆ ಸಿಎಂ ಜೊತೆಗೆ ಚರ್ಚೆ ಮಾಡುತ್ತೇವೆ ಎಂದರು.
ಭಗವದ್ಗೀತೆ ಸೇರಿಸಬಾರದು ಎಂದೇನಿಲ್ಲ. ಎಸ್.ಎಂ.ಕೃಷ್ಣ ಅವರು ನಾನು ಭಗವದ್ಗೀತೆ ಓದುತ್ತೇನೆ ಎನ್ನುತ್ತಿದ್ದರು. ಬೈಬಲ್, ಕುರಾನ್, ಭಗವದ್ಗೀತೆ ಗಳಲ್ಲಿ ಒಳ್ಳೆ ಅಂಶಗಳನ್ನು ಸೇರಿಸಿ ಎಂದು ಹೇಳಬಹುದು. ಅದರ ಬಗ್ಗೆ ಕೂಡ ಚರ್ಚೆಯಾಗುತ್ತದೆ. ಎಲ್ಲಾ ಸಿಎಂ ನೇತೃತ್ವದಲ್ಲಿ ಚರ್ಚೆಯಾಗುತ್ತದೆ ಎಂದು ಬಿ.ಸಿ ನಾಗೇಶ್ ಹೇಳಿದರು.
ಇದನ್ನೂ ಓದಿ:ಹುಡುಗಿಯರಿಗೆ ಹೈಸ್ಕೂಲ್ ಕಲಿಯಲು ಅವಕಾಶ ನೀಡಿದ ತಾಲಿಬಾನ್; ಆದರೆ ಷರತ್ತು ಅನ್ವಯ
ಈ ಬಗ್ಗೆ ಮಾತನಾಡಿದ ಶಾಸಕ ಎಂ.ಪಿ ರೇಣುಕಾಚಾರ್ಯ, ಪಠ್ಯಪುಸ್ತಕದಲ್ಲಿ ಭಗವದ್ಗೀತೆ ತಂದರೆ ನಾನು ಸ್ವಾಗತ ಮಾಡುತ್ತೇನೆ. ಆದರೆ ಕೆಲವರಿಗೆ ಮುಜುಗರ ಆಗಬಹುದು ಎಂದರು.
ಕಾಶ್ಮೀರಿ ಫೈಲ್ ವಿಚಾರವಾಗಿ ಸ್ಪೀಕರ್ ಸಿನಿಮಾ ನೋಡಲು ಕರೆದಿದ್ದರೂ ಯಾರೂ ಬರಲಿಲ್ಲ. ನೀವು ಈ ದೇಶದಲ್ಲಿ ನೆಲೆಸಲು ನಾಲಾಯಕ್. ವಿದ್ಯಾರ್ಥಿಗಳು ಪ್ರತಿಭಟನೆ ಮಾಡುತ್ತಿದ್ದಾರೆ ಬಂದ್ ಕರೆ ಕೊಟ್ಟಿದ್ದಾರೆ. ನಿಮ್ಮಿಂದ ಮಕ್ಕಳ ವಿದ್ಯಾಭ್ಯಾಸ ಹಾಳಾಗಿದೆ ಎಂದು ಕಾಂಗ್ರೆಸ್ ಗೆ ಟಾಂಗ್ ನೀಡಿದರು.