ಹೊಸದಿಲ್ಲಿ : 1928ರ ಡಿಸೆಂಬರ್ 17ರಂದು ಬ್ರಿಟಿಷ್ ಅಧಿಕಾರಿ ಜಾನ್ ಸ್ಯಾಂಡರ್ಸ್ ಮೇಲೆ ಗುಂಡೆಸೆದು ಹತ್ಯೆಗೈಯಲು ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಬಳಸಿದ್ದ ಪಿಸ್ತೂಲನ್ನು 90 ವರ್ಷಗಳ ಬಳಿಕ ಗುರುತಿಸಲಾಗಿದೆ.
ಸ್ವಾತಂತ್ರ್ಯ ಹೋರಾಟಗಾರ ಹಾಗೂ ಹಿರಿಯ ನಾಯಕರಾಗಿದ್ದ ಲಾಲಾ ಲಾಜಪತ್ ರಾಯ್ ಅವರ ಸಾವಿಗೆ ಕಾರಣನೆನ್ನಲಾದ ಸ್ಯಾಂಡರ್ಸ್ ಅವರನ್ನು ಭಗತ್ ಸಿಂಗ್ ಹಾಡುಹಗಲಲ್ಲೇ ಗುಂಡಿಕ್ಕಿ ಹತ್ಯೆ ಮಾಡಿದ್ದರು.
ಭಗತ್ ಸಿಂಗ್, ಸ್ಯಾಂಡರ್ಸ್ ಹತ್ಯೆಗೆ ಬಳಸಿದ್ದ ಪಾಯಿಂಟ್ 32 ಎಂಎಂ ಕೋರ್ಟ್ ಆಟೋಮ್ಯಾಟಿಕ್ ಪಿಸ್ತೂಲು ಭಾರತೀಯ ಗಡಿ ರಕ್ಷಣಾ ಪಡೆಯ (ಬಿಎಸ್‌ಎಫ್) ಕೇಂದ್ರ ಶಸ್ತ್ರಾಸ್ತ್ರ ಹಾಗೂ ತಂತ್ರಗಾರಿಕೆ ವಿದ್ಯಾಲಯದಲ್ಲಿ ಪ್ರದರ್ಶನಿಕ್ಕಿತ್ತಾದರೂ ಅದು ಭಗತ್ ಸಿಂಗ್ ಅವರಿಗೇ ಸೇರಿದ್ದೆಂದು ಈ ತನಕವೂ ಅದನ್ನು ಗುರುತಿಸಿರಲಾಗಿರಲಿಲ್ಲ.
ಈ ಪಿಸ್ತೂಲನ್ನು ಮೊನ್ನೆ ಮಂಗಳವಾರದಂದು BSF ಇಂದೋರ್ ವಸ್ತುಸಂಗ್ರಹಾಲಯದಲ್ಲಿ “ಭಗತ್ ಸಿಂಗ್ ಬಳಸಿದ್ದ ಪಿಸ್ತೂಲು’ ಎಂದು ಗುರುತಿಸಿ ಪ್ರದರ್ಶಿಸಲಾಯಿತು.
ಐತಿಹಾಸಿಕ ಮಹತ್ವದ ಈ ಪಿಸ್ತೂಲು ಭಗತ್ ಸಿಂಗ್ ಅವರಿಗೇ ಸೇರಿದ್ದೆಂಬುದನ್ನು ಹೇಗೆ ಗೊತ್ತುಪಡಿಸಿಕೊಳ್ಳಲಾಯಿತೆಂಬ ಬಗ್ಗೆ ಸಿಎಸ್‌ಡಬ್ಲ್ಯುಟಿ ಮ್ಯೂಸಿಯಂನ ಕಸ್ಟೋಡಿಯನ್ ವಿಜೇಂದ್ರ ಸಿಂಗ್ ಹೀಗೆ ಹೇಳುತ್ತಾರೆ :
“ಪಿಸ್ತೂಲಿನ ಮೇಲಿನ ಕಪ್ಪು ಪೇಂಟನ್ನು ನಾವು ತೆಗೆದು ನೋಡಿದಾಗ ಅಲ್ಲಿ ನಮಗೆ ಪಿಸ್ತೂಲಿನ ನಂಬ್ರ 168896 ಎಂದು ಇದ್ದುದು ಕಂಡು ಬಂತು. ಒಡನೆಯೇ ನಾವು ನಮ್ಮ ಬಳಿ ಇದ್ದ ಕಳೆದ ವರ್ಷದ ದಾಖಲೆ ಪತ್ರಗಳನ್ನು ತೆರೆದು ನೋಡಿದೆವು. ಆಗ ಬ್ರಿಟಿಷ್ ಅಧಿಕಾರಿ ಜಾನ್ ಸ್ಯಾಂಡರ್ಸ್ ಭಗತ್ ಸಿಂಗ್ ಬಳಸಿದ್ದ ಪಿಸ್ತೂಲಿನ ವಿವರಗಳನ್ನು ತಾಳೆ ಹಾಕಿ ನೋಡಲು ಸಾಧ್ಯವಾಗಿ ಪಿಸ್ತೂಲನ್ನು ಗುರುತಿಸಲು ಅನುಕೂಲವಾಯಿತು’.
ಸ್ಯಾಂಡರ್ಸ್ ಹತ್ಯೆಗಾಗಿ ಭಗತ್ ಸಿಂಗ್ ಅವರನ್ನು 1931ರ ಮಾರ್ಚ್ 23ರಂದು ನೇಣಿಗೆ ಹಾಕಲಾಗಿತ್ತು.