ಬಾಗಲಕೋಟೆ: ಪ್ರವಾಹ ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ನೀರಿನ ಮಟ್ಟ ಇಳಿಮುಖವಾಗುತ್ತಿರುವ ಹಿನ್ನೆ ಲೆಯಲ್ಲಿ ಪ್ರವಾಹ ನಂತರ ಪರಿಹಾರ ಕಾರ್ಯಗಳು ಅತೀ ಮಹತ್ವದ್ದಾಗಿದೆ. ಅಧಿಕಾರಿಗಳು ಸಮನ್ವಯ, ಸಹಕಾರದಿಂದ ಎಲ್ಲ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಆರ್.ರಾಮಚಂದ್ರನ್ ತಿಳಿಸಿದರು.
ರವಿವಾರ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಎಲ್ಲ ನೋಡಲ್ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ನಿಯಂತ್ರಣವಾಗುತ್ತಿದ್ದು, ನೀರಿನ ಮಟ್ಟ ಇಳಿಮುಖವಾಗುತ್ತಿದೆ. ಅಪಾರ ಆಸ್ತಿ-ಪಾಸ್ತಿ ಹಾನಿಗಳಾಗಿರುವುದರಿಂದ ಸಂತ್ರಸ್ತರಿಗೂ ಯಾವುದೇ ರೀತಿ ತೊಂದರೆಯಾಗದಂತೆ ಅಧಿಕಾರಿಗಳು ಉದಾರತೆ, ಪ್ರಾಮಾಣಿಕತೆ ಪ್ರದರ್ಶಿಸಿ ಪ್ರವಾಹ ನಂತರದ ಪರಿಹಾರ ಕಾರ್ಯ ಚುರುಕುಗೊಳಿಸಬೇಕು. ಸಂಬಂಧಿಸಿದ ಮೇಲಧಿಕಾರಿಗಳು ಹಾಗೂ ನೋಡಲ್ ಅಧಿಕಾರಿಗಳು ಸಹಕಾರದಿಂದ ಸಮನ್ವಯತೆ ಸಾಧಿಸಿ ಸಂತ್ರಸ್ತರಿಗೆ ಯಾವುದೇ ಸಮಸ್ಯೆಯಾಗದಂತೆ ಎಚ್ಚರಿಕೆ ವಹಿಸುವಂತೆ ತಿಳಿಸಿದರು.
ಪರಿಹಾರ ಕಾರ್ಯಕ್ಕೆ ಅನುದಾನ ಕೊರತೆಯಿಲ್ಲ. ಜಿಲ್ಲೆಯಲ್ಲಿ ಒಟ್ಟು 203 ಪರಿಹಾರ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಸಂತ್ರಸ್ತರಿಗೆ ಹಾಗೂ ಜಾನುವಾರುಗಳಿಗೆ ಅಗತ್ಯ ಸೌಕರ್ಯ ಒದಗಿಸತಕ್ಕದ್ದು. ಪ್ರತಿ ಕೇಂದ್ರದಲ್ಲಿ ಅಗತ್ಯ ಆಹಾರಧಾನ್ಯ ಸಂಗ್ರಹಿಸಲಾಗಿದ್ದು, ಅಕ್ಕಿ, ಗೋಧಿ, ಎಣ್ಣೆ, ತರಕಾರಿ, ಗ್ಯಾಸ, ಸಿಲಿಂಡರ್‌ಗಳನ್ನು ಮುಂಚಿತವಾಗಿಯೇ ಸಂಗ್ರಹಿಸಿ ಯಾವುದೇ ಕೊರತೆಯಾಗದಂತೆ ಕ್ರಮ ವಹಿಸಬೇಕು. ಪ್ರತಿ ಕೇಂದ್ರಕ್ಕೆ ಇಬ್ಬರು ಅಧಿಕಾರಿಗಳು ಹಾಗೂ ಇಬ್ಬರು ಸಹಾಯಕ ಸಿಬ್ಬಂದಿಗಳನ್ನು ನೇಮಿಸಲಾಗಿದೆ. ಅಗತ್ಯ ವಸ್ತುಗಳ ಖರೀದಿ ಹಾಗೂ ಖರ್ಚು ವೆಚ್ಚಕ್ಕಾಗಿ ತಕ್ಷಣವೇ ಪ್ರತಿ ಕೇಂದ್ರಕ್ಕೆ 10 ಸಾವಿರ ರೂ. ಬಿಡುಗಡೆ ಮಾಡಲಾಗಿದೆ ಎಂದರು.
ಜಾನುವಾರುಗಳಿಗೆ ತಾತ್ಕಾಲಿಕ ಶೆಡ್ ಹಾಗೂ ಮೇವಿನ ಕೊರತೆ ಯಾಗದಂತೆ ಎಚ್ಚರ ವಹಿಸಿ. ರೈತರಿಂದ ಮೇವು ಖರೀದಿಸಿ ಕ್ರಮಕೈಗೊಳ್ಳಿ. ಜಾನುವಾರುಗಳಿಗೆ ಔಷಧಿ ದಾಸ್ತಾನು ಇರಿಸಬೇಕು. ಜಮಖಂಡಿ ಉಪ ವಿಭಾಗಾಧಿಕಾರಿ ಮೊಹಮ್ಮದ ಇಕ್ರಮ್ ಅವರು ನಿರ್ಮಿಸಿದ ಗೋಶಾಲೆ ಶೆಡ್ ರಾಜ್ಯಕ್ಕೆ ಮಾದರಿಯಾಗಿದ್ದು, ಅವರ ಕಾಳಜಿಯನ್ನು ಜಿಲ್ಲಾಧಿಕಾರಿಗಳು ಶ್ಲಾಘಿಸಿದರು.
ಪರಿಹಾರ ಕೇಂದ್ರಗಳಲ್ಲಿ ಹೊರಗೆ-ಒಳಗೆ ಸ್ವಚ್ಛತೆ ಕಾಪಾಡಿ ಸ್ಥಳೀಯ ಸಂಸ್ಥೆಗಳಲ್ಲಿರುವ ಸುಮಾರು 25 ಫಾಗಿಂಗ್ ಮಶೀನ್‌ಗಳನ್ನು ಬಳಸಿ 3 ದಿನಕ್ಕೊಮ್ಮೆ ಕಡ್ಡಾಯವಾಗಿ ಫಾಗಿಂಗ್ ಮಾಡುವಂತೆ ಸೂಚಿಸಲಾಯಿತು. ಗಿಡಗಂಟಿ, ಕಸ ತೆಗೆಸಿರಿ. ಖರ್ಚುವೆಚ್ಚದ ಅಗತ್ಯ ದಾಖಲೆ ಒದಗಿಸಿ. ದುಡ್ಡಿಲ್ಲಯೆಂಬ ನೆಪ ಹೇಳಬೇಡಿರಿ. ವಾಟ್ಸ್ ಆ್ಯಪ್‌ನಲ್ಲಿ ಮಾಹಿತಿ ರವಾನಿಸಿ. ಯಾವುದೇ ಸಂಕೋಚ ಬೇಡವೆಂದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ, ಪ್ರೊಬೆಷನರಿ ಐಎಎಸ್ ಅಧಿಕಾರಿ ಗರಿಮಾ ಪವ್ವಾರ, ಭುವನೇಶ ಪಾಟೀಲ, ಅಪರ ಜಿಲ್ಲಾಧಿಕಾರಿ ದುರ್ಗೆಶ ರುದ್ರಾಕ್ಷಿ ಇದ್ದರು.