ಶಿವಮೊಗ್ಗ ಜಿಲ್ಲೆಯ ಭದ್ರಾವತಿ-ಬೆಂಗಳೂರು ಬೈಪಾಸ್ ರಸ್ತೆಯಲ್ಲಿರುವ ಶ್ರೀಆಂಜನೇಯ ದೇವರು ಶಿಷ್ಠ ಶಕ್ತಿ ಮತ್ತು ಭಕ್ತರ ಸಂಕಷ್ಟ ನಿವಾರಣೆಯ ಕಾರಣದಿಂದ ಪ್ರಸಿದ್ಧವಾಗಿದೆ.ಹೆದ್ದಾರಿಯ ಪಕ್ಕದಲ್ಲಿಯೇ ಇರುವ ಈ ದೇವಾಲಯ ಅತ್ಯಾಕರ್ಷಕ ಕಟ್ಟಡ ಹೊಂದಿದೆ. ನಿರ್ಮಾಣವಾದ ಕೇವಲ 15 ವರ್ಷಗಳಲ್ಲಿಯೇ ಅಭಿವೃದ್ಧಿಗೊಂಡು ವರ್ಷದಿಂದ ವರ್ಷಕ್ಕೆ ತನ್ನ ಖ್ಯಾತಿ ಹೆಚ್ಚಿಸಿಕೊಳ್ಳುತ್ತಾ ಸಾಗಿದೆ.
ನಾಗಮಂಗಲದಿಂದ ಎಸ್.ಐ.ಎಲ್ ಕಾರ್ಖಾನೆಯ ಉದ್ಯೋಗಕ್ಕೆ ಬಂದ ಹನುಮೇಗೌಡರು ಈ ದೇವಾಲಯ ನಿರ್ಮಾಣಕ್ಕೆ ಪ್ರೇರಕರಾಗಿದ್ದಾರೆ. ಈ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದಾಗ ಇವರಿಗೆ ನಿತ್ಯವೂ ರಾತ್ರಿ ಕನಸಿನಲ್ಲಿ ಆಂಜನೇಯನ ವಿವಿಧ ಲೀಲೆಗಳು ಕಾಣಿಸುತ್ತಿದ್ದವು. ಕನಸಿನ ಕೊನೆಯಲ್ಲಿ ಇದೇ ಪ್ರದೇಶದ ಹೆದ್ದಾರಿ ಅಂಚಿನಲ್ಲಿ ಆಂಜನೇಯನ ಸಿದ್ಧಿ ಕ್ಷೇತ್ರ ಇರುವ ದೃಶ್ಯ ಕಾಣುತ್ತಿತ್ತು. ಆ ಸ್ಥಳದ ಸುತ್ತ ಯಾವುದಾದರೂ ಕಲ್ಲಿನಲ್ಲಿ ಆಂಜನೇಯನ ಕುರುಹುವಿನ ಬಗ್ಗೆ ಹುಡುಕಿ ಚಿಕ್ಕ ಗುಡಿ ನಿರ್ಮಿಸುವುದು ಸೂಕ್ತ ಎಂಬ ತೀರ್ಮಾನಕ್ಕೆ ಬಂದರು. ಗೌಡರು ಸತತ 3-4 ತಿಂಗಳು ಕಾಲ ವಿವಿಧೆಡೆ ಕಲ್ಲುಗಳನ್ನು ಪರಿಶೀಲನೆ ನಡೆಸಿದರು. ಕೊನೆಗೆ ಈಗ ದೇವಾಲಯ ಇರುವ ಸ್ಥಳದಲ್ಲಿ ದೊಡ್ಡ ದೊಡ್ಡ ಬಂಡೆಗಲ್ಲುಗಳಿಂದ ಕೂಡಿದ ಸ್ಥಳ ಕಂಡು ಬಂದಿತು. ಈ ಸ್ಥಳದಲ್ಲಿ ಚಿಕ್ಕ ಗಾತ್ರದ ಕಲ್ಲಿನಲ್ಲಿ ಆಂಜನೇಯನ ಲಕ್ಷಣಗಳು ಗೋಚರವಾದವು. ಇದೇ ಕಲ್ಲನ್ನು ಪೀಠದಲ್ಲಿಟ್ಟು ಚಿಕ್ಕ ಕಟ್ಟೆ ಕಟ್ಟಿ ಪೂಜಿಸಲು ಆರಂಭಿಸಿದರು. ಭಕ್ತರ ಮತ್ತು ಶ್ರೀರಾಮಾಂಜನೇಯ ಭಜನಾ ಮಂಡಳಿಯ ಸದಸ್ಯರ ನೆರವಿನಿಂದ ಬಂಡೆಗಲ್ಲುಗಳನ್ನು ಒಂದೆರಡು ಸಮತಟ್ಟಾದ ಜಾಗ ನಿರ್ಮಿಸುವ ಕಾರ್ಯ ವರ್ಷಗಳ ಕಾಲ ಭರದಿಂದ ನಡೆಯಿತು.
ಸುಮಾರು 100 ಕ್ಕೂ ಅಧಿಕ ಭಕ್ತರನ್ನೊಳಗೊಂಡ ಶ್ರೀರಾಮಾಂಜನೇಯ ಭಜನಾ ಮಂಡಳಿ ರೂಪುಗೊಂಡಿತು. ಎಸ್.ಐ.ಎಲ್ ಸಂಸ್ಥೆ ಈ ಸ್ಥಳದಲ್ಲಿ ದೇಗುಲ ನಿರ್ಮಿಸಲು ಸ್ಥಳ ಮತ್ತು ಆರ್ಥಿಕ ನೆರವನ್ನು ಸಹ ನೀಡಿತು. ಐದೂವರೆ ಅಡಿ ಎತ್ತರದ ಆಂಜನೇಯ ನಿಂತ ಭಂಗಿಯಲ್ಲಿದೆ. ಸಂಜೀನಿ ಗಿರಿ ಧರಿಸಿರುವುದು ಆರೋಗ್ಯ,ಸಮೃದ್ಧಿ ಮತ್ತು ಸಂಕಷ್ಟ ಪರಿಹಾರದ ದ್ಯೋತಕವಾಗಿದೆ. ಈ ಕಾರಣದಿಂದ ಆರೋಗ್ಯ ಮತ್ತು ಸಂಕಷ್ಟ ಪರಿಹಾರ ಪ್ರಾರ್ಥಿಸಿ ನಿತ್ಯವೂ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ.
ದೇವಾಲಯದ ಪ್ರಾಕಾರದಲ್ಲಿ ಗಣಪತಿ ,ಶ್ರೀನಾಗದೇವರು ಮತ್ತು ಶ್ರೀನವಗ್ರಹ ದೇವರ ಗುಡಿ ಸಹ ನಿರ್ಮಿಸಲಾಗಿದೆ. ದೇವರಿಗೆ ನಿತ್ಯ ಬೆಳಗ್ಗೆ ಮತ್ತು ಸಂಜೆ ಪೂಜೆ ನಡೆಸಲಾಗುತ್ತಿದೆ. ಶ್ರಾವಣ ಮಾಸದ ಪ್ರತಿ ಶನಿವಾರ ವಿಶೇಷ ಅಲಂಕಾರ ಮತ್ತು ಉತ್ಸವ ಪೂಜೆ ನಡೆಯುತ್ತದೆ.ನವರಾತ್ರಿಯಲ್ಲಿ ಪಾಡ್ಯದಿಂದ ನವಮಿಯ ವರೆಗೆ ನಿತ್ಯವೂ ಬಗೆ ಬಗೆಯ ಅಲಂಕಾರ ಪೂಜೆ,ದಶಮಿಯಂದು ಪಲ್ಲಕ್ಕಿ ಉತ್ಸವ,ಲಾಲಿ ಉತ್ಸವ, ಸೀಮೋಲ್ಲಂಘನ ಮತ್ತು ಬನ್ನಿ ಮುಡಿಯುವ ಕಾರ್ಯಕ್ರಮ ನಡೆಯುತ್ತದೆ.
ಶಿವರಾತ್ರಿಯಂದು ಸುತ್ತಮುತ್ತಲ ಗ್ರಾಮಗಳಿಂದ ಭಕ್ತರು ಸೇರಿ ರಾತ್ರಿ ಇಡೀ ಭಜನೆ ಮತ್ತು ಜಾಗರಣೆ ನಡೆಯುತ್ತದೆ. ಬುದ್ಧ ಪೂರ್ಣಿಮೆಯಂದು ಪ್ರತಿ ವರ್ಷ ಪ್ರತಿಷ್ಠಾಪನಾ ಮಹೋತ್ಸವದ ವಾರ್ಷಿಕ ಉತ್ಸವ ನಡೆಯುತ್ತದೆ. ಆ ದಿನ ಸಾಮೂಹಿಕ ಸತ್ಯನಾರಾಯಣ ಪೂಜೆ, ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯುತ್ತದೆ. ಆ ದಿನ 4000 ಕ್ಕೂ ಅಧಿಕ ಭಕ್ತರು ಸೇರುತ್ತಾರೆ. ಪ್ರತಿ ಹುಣ್ಣಿಮೆಯಂದು ಸಾಮೂಹಿಕ ಸತ್ಯನಾರಾಯಣ ಪೂಜೆ ನಡೆಯುತ್ತದೆ.
ಪ್ರತಿ ಹುಣ್ಣಿಮೆ ಮತ್ತು ಅಮಾವಾಸ್ಯೆಯಂದು ವಿಶೇಷ ಅಲಂಕಾರ ಪೂಜೆ, ಪ್ರಾಕಾರೋತ್ಸವ ಸಂಜೆ ಭಜನೆ ನಡೆಯುತ್ತದೆ. ಸಂತಾನ ಭಾಗ್ಯ, ಶಿಕ್ಷಣ,ಉದ್ಯೋಗ,ವ್ಯಾಪಾರ, ರೋಗ ನಿವಾರಣೆ, ಶತ್ರು ಭಯ ನಿವಾರಣೆ, ಮನಶಾಂತಿ ಇತ್ಯಾದಿ ಪ್ರಾರ್ಥಿಸಿ ಹರಕೆ ಹೊತ್ತ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ.
ಎನ್.ಡಿ.ಹೆಗಡೆ ಆನಂದಪುರಂ