Advertisement

ಭದ್ರಾವತಿಯಲ್ಲಿ ಬಿಜೆಪಿ ಭರ್ಜರಿ ರೋಡ್‌ ಶೋ

10:46 AM Apr 21, 2019 | |

ಭದ್ರಾವತಿ: ಎರಡನೇ ಹಂತದ ಮತದಾನ ನಡೆಯುವ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಭದ್ರಾವತಿಯಲ್ಲಿ ಶನಿವಾರ ಬಿಜೆಪಿ ಭರ್ಜರಿ ರೋಡ್‌ ಶೋ ನಡೆಸುವ ಮೂಲಕ ಕೊನೇ ಹಂತದ ಬಹಿರಂಗ ಪ್ರಚಾರ ನಡೆಸಿತು. ರಂಗಪ್ಪ ವೃತ್ತದಿಂದ ಆರಂಭವಾದ ರೋಡ್‌ ಶೋ ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಿತು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಸೇರಿದಂತೆ ಬಿಜೆಪಿ ಮುಖಂಡರು ರೋಡ್‌ ಶೋ ನಲ್ಲಿ ಪಾಲ್ಗೊಂಡು ಬಿಜೆಪಿ ಅಭ್ಯರ್ಥಿ ಬೆಂಬಲಿಸುವಂತೆ ಕೋರಿದರು.

Advertisement

ಉರಿಬಿಸಿಲನ್ನೂ ಲೆಕ್ಕಿಸದೆ ಸಾವಿರಾರು ಜನ ಸಂಕ್ಲಪ ಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಬಿಜೆಪಿ ಬಾವುಟ ಹಿಡಿದು ಸಾಗಿದ ಕಾರ್ಯಕರ್ತರು ಮೋದಿ ಪರ ಘೋಷಣೆಗಳನ್ನು ಕೂಗಿದರು. ನಂತರ ಹಾಲಪ್ಪ ವೃತ್ತದಲ್ಲಿ ನಡೆದ ಸಭೆಯಲ್ಲಿ ಮಾಜಿ ಉಪಮುಖ್ಯಮಂತ್ರಿ ಕೆ. ಎಸ್‌. ಈಶ್ವರಪ್ಪ ಮಾತನಾಡಿ, ವಿಧಾನ ಪರಿಷತ್‌ ವಿಪಕ್ಷ ನಾಯಕ ಕೆ.ಎಸ್‌. ಈಶ್ವರಪ್ಪ ಮಾತನಾಡಿ, ಶಿವಮೊಗ್ಗ
ಲೋಕಸಭಾ ಕ್ಷೇತ್ರದಲ್ಲಿ ಮೈತ್ರಿ ಕೂಟದ ಒಗ್ಗಟ್ಟು
ಮುರಿದು ಬಿದ್ದಿದೆ. ಮತದಾನಕ್ಕೆ ಕೇವಲ 48 ಗಂಟೆಗಳ ಅವ ಧಿ ಉಳಿದಿದೆ. ಪಕ್ಷದ ಕಾರ್ಯಕರ್ತರು ಈ ಕ್ಷಣದಿಂದ ಬೂತ್‌ ಮಟ್ಟಕ್ಕೆ
ತೆರಳಿ ಅಭ್ಯರ್ಥಿ ಪರ ಕೆಲಸ ಮಾಡಬೇಕು. ಈ ಜನ ಸಾಗರ ನೋಡಿ ಅಮಿತ್‌ ಶಾ ಖುಷಿ ಪಟ್ಟಿದ್ದಾರೆ. 25 ಸಾವಿರ ಮತಗಳ ಅಂತರದಿಂದ ಬಿ.ವೈ. ರಾಘವೇಂದ್ರ ಅವರನ್ನು ಗೆಲ್ಲಿಸಿ ಎಂದರು.

ಅಭ್ಯರ್ಥಿ ಬಿ.ವೈ. ರಾಘವೇಂದ್ರ ಮಾತನಾಡಿ, ಉರಿ ಬಿಸಿಲಿನ ತಾಪವನ್ನು ಲೆಕ್ಕಿಸದೆ ಸಾಗರದಂತೆ ಭಾಗವಹಿಸಿರುವ ಜನಸ್ತೋಮವೇ ನಮ್ಮ ಗೆಲುವಿಗೆ ಶುಭ ಸೂಚನೆಯಾಗಿದೆ. ರೋಡ್‌ ಶೋಗೆ ಆಗಮಿಸಿರುವ ಎಲ್ಲರಿಗೂ ನನ್ನ ಹೃದಯಪೂರ್ವಕ ಕೃತಜ್ಞತೆಗಳು ಎಂದರು. ಮೆರವಣಿಗೆಯಲ್ಲಿ ಅಮಿತ್‌ ಶಾ ಅವರೊಂದಿಗೆ ಶಿವಮೊಗ್ಗ ಲೋಕಸಭಾ ಅಭ್ಯರ್ಥಿ ಬಿ.ವೈ. ರಾಘವೇಂದ್ರ ನಗರದ ರಂಗಪ್ಪ ವೃತ್ತದಿಂದ ಚನ್ನಗಿರಿ ರಸ್ತೆ ಮಾರ್ಗವಾಗಿ ಮಾಧವಾಚಾರ್‌ ವೃತ್ತ, ಬಿ.ಎಚ್‌. ರಸ್ತೆ, ಡಾ|
ರಾಜಕುಮಾರ್‌ ರಸ್ತೆ, ಹಾಲಪ್ಪ ವೃತ್ತ, ಅಂಬೇಡ್ಕರ್‌
ವೃತ್ತದವರೆಗೆ ಏರ್ಪಡಿಸಿದ್ದ ರೋಡ್‌ ಶೋ ಸಂಕಲ್ಪ ಯಾತ್ರೆಯಲ್ಲಿ ಸಾಗಿದರು.

ಅಮಿತ್‌ ಶಾ ಹೊರಟ ಸಂಕಲ್ಪ ಯಾತ್ರೆಯ ವಾಹನದಲ್ಲಿ ವಿಧಾನ ಪರಿಷತ್‌ ಮಾಜಿ ಅಧ್ಯಕ್ಷ ಡಿ.ಎಚ್‌. ಶಂಕರಮೂರ್ತಿ, ಜಿಲ್ಲಾಧ್ಯಕ್ಷ ರುದ್ರೇಗೌಡ, ಸ್ಥಳೀಯ ಅಧ್ಯಕ್ಷರಾದ ಜಿ. ಆನಂದಕುಮಾರ್‌, ಮಂಗೋಟೆ ರುದ್ರೇಶ್‌, ಮುಖಂಡರಾದ ವಿ. ಕದಿರೇಶ್‌, ದತ್ತಾತ್ರಿ, ಸಿ.ಮಂಜುಳಾ, ಧರ್ಮಪ್ರಸಾದ್‌, ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತಿತರರು ಇದ್ದರು.
ಸಂಕಲ್ಪ ಯಾತ್ರೆಯಲ್ಲಿ ಶಾಸಕರಾದ ಕೆ.ಬಿ. ಅಶೋಕ್‌ ನಾಯ್ಕ, ಪ್ರೀತಂಗೌಡ, ಬೆಳ್ಳಿ ಪ್ರಕಾಶ್‌, ಡಿ.ಎಸ್‌. ವೀರಯ್ಯ, ಅಣ್ಣಾಡಿಎಂಕೆ ರಾಜ್ಯಾಧ್ಯಕ್ಷ ಎಸ್‌.ಡಿ. ಕುಮಾರ್‌, ಉದ್ಯಮಿ ಎಚ್‌.ಸಿ. ರಮೇಶ್‌ ಮುಖಂಡರಾದ ಪ್ರವೀಣ್‌ ಪಾಟೀಲ್‌, ಬಿ.ಕೆ. ಶ್ರೀನಾಥ್‌, ಎಂ. ಮಂಜುನಾಥ್‌, ನಾರಾಯಣಪ್ಪ, ರಾಮಣ್ಣ, ಕೂಡ್ಲಿಗೆರೆ ಹಾಲೇಶ್‌, ಹಾ. ರಾಮಪ್ಪ, ಎನ್‌. ವಿಶ್ವನಾಥ ರಾವ್‌, ವಿಶ್ವನಾಥ ಕೋಟಿ, ಆರ್‌.
ಎಸ್‌. ಶೋಭಾ ಮತ್ತಿತರರು ಇದ್ದರು. ರಸ್ತೆಯುದ್ದಕ್ಕೂ ಬಿಸಿಲಿನ ತಾಪ ತಣಿಸಲು ಕುಡಿಯಲು ನೀರಿನ ವ್ಯವಸ್ಥೆ ಕಲ್ಪಿಸಲಾಗಿತ್ತು. ನಗರದೆಲ್ಲೆಡೆ ಪೊಲೀಸ್‌ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.

ನಿರಾಶರಾದ ಜನ: ರಂಗಪ್ಪ ವೃತ್ತದಿಂದ ಆರಂಭವಾದ ರೋಡ್‌ ಶೋ ಅಂತಿಮವಾಗಿ ಅಂಬೇಡ್ಕರ್‌ ವೃತ್ತಕ್ಕೆ ಬಂದು ಅಲ್ಲಿ ಅಮಿತ್‌ ಶಾ ಅಂಬೇಡ್ಕರ್‌ ಅವರ ಪ್ರತಿಮೆಗೆ ಹಾರ ಹಾಕುವ ಮೂಲಕ ರೋಡ್‌ ಶೋ ಮುಗಿಯುತ್ತದೆ ಎಂದು ಭಾವಿಸಿದ ಅನೇಕರು ಅಂಬೇಡ್ಕರ್‌ ವೃತ್ತದ ಬಳಿ ರೋಡ್‌ ಶೋ ಬರುವಿಗಾಗಿ ಕಾಯುತ್ತಾ ನಿಂತಿದ್ದರು. ಆದರೆ ಅಮಿತ್‌ ಶಾ ಅವರು ಹಾಲಪ್ಪ ವೃತ್ತದ ಬಳಿ
ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿ ಕೂಡಲೇ ರಥದಿಂದ ಇಳಿದು ಕಾರಿನಲ್ಲಿ ತೆರಳಿದರು.

Advertisement

ಇದನ್ನು ತಿಳಿಯದೆ ಅಂಬೇಡ್ಕರ್‌ ವೃತ್ತದ ಬಳಿ ಕಾಯುತಿದ್ದ ಜನತೆ ಕೇವಲ ರಥಮಾತ್ರೆ ತಮ್ಮ ಮುಂದೆ ಹಾದುಹೋಗಿದ್ದು ಹಾಗೂ ರೋಡ್‌ ಶೋ ಮುಗಿಯಿತು ಎಂಬ ವಿಷಯ ತಿಳಿದು ನಿರಾಶರಾಗಿ ಅಲ್ಲಿಂದ ತೆರಳಿದರು.

ಮಾರ್ದನಿಸಿದ ಮತ್ತೊಮ್ಮೆ ಮೋದಿ
ರಂಗಪ್ಪ ವೃತ್ತದಿಂದ ಹಾಲಪ್ಪ ವೃತ್ತದವರೆಗೆ ಸಾಗಿದ ರೋಡ್‌ ಶೋನಲ್ಲಿ ಭಾಗವಹಿಸಿದ್ದ ಅಸಂಖ್ಯಾತ ಕಾರ್ಯಕರ್ತರು ಕೇಸರಿ ರುಮಾಲು ಧರಿಸಿ ಪಕ್ಷದ ಭಾವುಟ ಹಿಡಿದು ‘ಮತ್ತೂಮ್ಮೆ ಮೋದಿ.. ಮತ್ತೂಮ್ಮೆ ಮೋದಿ’ ಎಂದು ಕೂಗುತ್ತಾ, ಮೋದಿ ಜಿಂದಾಬಾದ್‌ ಎನ್ನುತ್ತಾ ಪಕ್ಷದ ಬಾವುಟ ಮತ್ತು ಕೇಸರಿ ಧ್ವಜವನ್ನು ತಿರುಗಿಸುತ್ತಾ ಭಾರತ ಮಾತೆಗೆ ಜೈಕಾರ ಹಾಕುತ್ತಾ ವಾದ್ಯಗಳ ತಾಳಕ್ಕೆ ತಕ್ಕಂತೆ ಕುಣಿಯುತ್ತಾ ಸಂಭ್ರಮದಿಂದ ಸಾಗಿದರು. ಮಹಿಳೆಯರು ಬಾದಾಮಿ ವರ್ಣದ ಸಮವಸ್ತ್ರ ಧರಿಸಿ ತಲೆಗೆ ಕೇಸರಿ ಪೇಟಾ ಧರಿಸಿ ರೋಡ್‌ ಶೋನಲ್ಲಿ ಭಾಗವಹಿಸಿದ್ದರು.

ಪುಷ್ಪವೃಷಿ ಮೂಲಕ ಅದ್ಧೂರಿ ಸ್ವಾಗತ
ಹೆಲಿಕಾಪ್ಟರ್‌ ಮೂಲಕ ನಗರದ ಮೂಲೆಕಟ್ಟೆಯ ಹೆಲಿಪ್ಯಾಡ್‌ಗೆ ಆಗಮಿಸಿ ಅಲ್ಲಿಂದ ಪೊಲೀಸ್‌ ಬಿಗಿ ಬಂದೋಬಸ್ತ್ ನಲ್ಲಿ ವಾಹನ ಮೂಲಕ ಹೊಸಸೇತುವೆ ಮಾರ್ಗವಾಗಿ ಹಳೇನಗರದಲ್ಲಿನ
ರಂಗಪ್ಪ ವೃತ್ತಕ್ಕೆ ಆಗಮಿಸಿದ ಶಾ ಅಲ್ಲಿದ್ದ ಅಲಂಕೃತ ವಾಹನವನ್ನು ಏರುತ್ತಿದ್ದಂತೆ ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿದ್ದ ಕಾರ್ಯಕರ್ತರು, ಅಭಿಮಾನಿಗಳು ಹಿಂದೂ ಸಂಘಟನೆಗಳವರು ಶಾ ಅವರ ಮೇಲೆ ಕೇಸರಿ ಬಣ್ಣದ ಹೂವಿನ ಸುರಿಮಳೆಗೈದು ಪಟಾಕಿ ಸಿಡಿಸಿ ಅದ್ಧೂರಿಯಾಗಿ ಸ್ವಾಗತಿಸಿದರು.ಮೆರವಣಿಗೆಯ ಇಕ್ಕೆಲಗಳಲ್ಲಿ ನಿಂತಿದ್ದ ಸಾವಿರಾರು ಅಭಿಮಾನಿಗಳು ಜೈಕಾರ ಹಾಕುತ್ತಾ ತಮ್ಮ ಹರ್ಷ ವ್ಯಕ್ತಪಡಿಸಿದರು. ಶಾ ಅಭಿಮಾನಿ ಕಾರ್ಯಕರ್ತರತ್ತ ಕೈ ಬೀಸುವ ಮೂಲಕ ಸಂತಸ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next