Advertisement

ಭದ್ರಾವತಿಯ ಸಿ.ಎನ್‌.ರಸ್ತೆ ಸೀಲ್‌ಡೌನ್‌

04:00 PM Jun 12, 2020 | Naveen |

ಭದ್ರಾವತಿ: ಬೆಂಗಳೂರಿನಿಂದ ಆಗಮಿಸಿದ್ದ ಗರ್ಭಿಣಿಯಲ್ಲಿ ಕೋವಿಡ್ ಪಾಸಿಟಿವ್‌ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ನಗರದ ರಂಗಪ್ಪ ಸರ್ಕಲ್‌ ನಿಂದ ಹೊಳೆಹೊನ್ನೂರು ಕ್ರಾಸ್‌ ವರೆಗಿನ ಪ್ರದೇಶವನ್ನು ಗುರುವಾರ ಬೆಳಿಗ್ಗೆ ಸೀಲ್‌ಡೌನ್‌ ಮಾಡಲಾಯಿತು.

Advertisement

ಸುಮಾರು 24 ವರ್ಷದ ಗರ್ಭಿಣಿ ಸೋಮವಾರ ಬೆಂಗಳೂರಿನ ಹುಳಿಮಾವಿನಲ್ಲಿರುವ ತನ್ನ ಗಂಡನ ಮನೆಯಿಂದ ಹೆರಿಗೆಗೆಂದು ಭದ್ರಾವತಿಯ ಚೆನ್ನಗಿರಿ ರಸ್ತೆಯಲ್ಲಿರುವ ತನ್ನ ತವರು ಮನೆಗೆ ಸೋಮವಾರ ರಾತ್ರಿ ಬಂದಿದ್ದರು. ಈ ವೇಳೆ ಗರ್ಭಿಣಿಗೆ ಮಂಗಳವಾರ ದೈಹಿಕ ಅಸ್ವಸ್ಥತೆ ಕಾಣಿಸಿಕೊಂಡ ಕಾರಣ ಆಕೆಯನ್ನು ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆಗ ಅಲ್ಲಿ ಆಕೆಗೆ ಕೊರೊನಾ ಲಕ್ಷಣಗಳಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಕೂಡಲೇ ಆಕೆಯನ್ನು ಚಿಕಿತ್ಸೆಗೆ ಒಳಪಡಿಸಿ, ಶಿವಮೊಗ್ಗಕ್ಕೆ ಕಳುಹಿಸಿ ಪರೀಕ್ಷೆ ನಡೆಸಲಾಗಿತ್ತು. ಬುಧವಾರ ರಾತ್ರಿ ಕೊರೊನಾ ಪಾಸಿಟಿವ್‌ ವರದಿ ಬಂದ ಕಾರಣ ಆಕೆಯನ್ನು ಶಿವಮೊಗ್ಗ ಮೆಗ್ಗಾನ್‌ ಆಸ್ಪತ್ರೆಯ ಕೋವಿಡ್‌ ಚಿಕಿತ್ಸಾ ವಿಭಾಗಕ್ಕೆ ದಾಖಲಿಸಲಾಯಿತು.

ಈ ಹಿನ್ನೆಲೆಯಲ್ಲಿ ಗುರುವರ ಬೆಳಿಗ್ಗೆ ಉಪವಿಭಾಗಾಧಿಕಾರಿ ಪ್ರಕಾಶ್‌, ತಹಶೀಲ್ದಾರ್‌ ಶಿವಕುಮಾರ್‌, ನಗರಸಭೆ ಆಯುಕ್ತ ಮನೋಹರ್‌, ತಾಲೂಕು ಮುಖ್ಯ ವೈದ್ಯಾಧಿಕಾರಿ ಡಾ. ಗಾಯತ್ರಿ, ಡಿವೈಎಸ್‌ಪಿ ಸುಧಾಕರ್‌ ನಾಯ್ಕ ಅವರು ಸಿಬ್ಬಂದಿಯೊಂದಿಗೆ ಭದ್ರಾವತಿಯ ಚೆನ್ನಗಿರಿ ರಸ್ತೆಯಲ್ಲಿರುವ ಸೋಕಿತೆಯ ತವರು ಮನೆಯ ಸುತ್ತಲಿನ ನೂರು ಮೀಟರ್‌ ವ್ಯಾಪ್ತಿಯ ಪ್ರದೇಶವನ್ನು (ರಂಗಪ್ಪ ಸರ್ಕಲ್‌ನಿಂದ ಹೊಳೆಹೊನ್ನೂರಿಗೆ ಹೋಗುವ ಕ್ರಾಸ್‌ ವರೆಗೆ) ಸೀಲ್‌ಡೌನ್‌ ಮಾಡಿದರು.

ಸೀಲ್‌ಡೌನ್‌ ಪ್ರದೇಶದಲ್ಲಿ ನಗರಸಭೆ ಸ್ಯಾನಿಟೈಸೇಷನ್‌ ವ್ಯವಸ್ಥೆ ಮಾಡಿತ್ತು. ಪೊಲೀಸರು ಜನರನ್ನು ಹಾಗೂ ವಾಹನಗಳನ್ನು ಸೀಲ್‌ಡೌನ್‌ ಪ್ರದೇಶದೊಳಕ್ಕೆ ಹೋಗದಂತೆ ಬ್ಯಾರಿಕೇಡ್‌ ಹಾಕಿ ತಡೆದು ಕಳುಹಿಸುತ್ತಿದ್ದುದ್ದು ಕಂಡುಬಂದಿತು. 14 ದಿನಗಳ ಕಾಲ ಸೀಲ್‌ಡೌನ್‌ ಪ್ರದೇಶದಲ್ಲಿನ ನಾಗರಿಕರು ಎಲ್ಲಿಯೂ ಸಂಚರಿಸಬಾರದು. ಅವರಿಗೆ ತರಕಾರಿ, ಹಾಲು ಮುಂತಾದ ಅಗತ್ಯ ವಸ್ತುಗಳನ್ನು ಖರೀದಿಸಲು ನಗರಸಭೆ ವ್ಯವಸ್ಥೆ ಮಾಡುತ್ತದೆ ಎಂದು ನಗರಸಭೆ ಆಯುಕ್ತ ಮನೋಹರ್‌ ಪತ್ರಿಕೆಗೆ ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next