Advertisement

ಎಪಿಎಂಸಿ ತಿದ್ದುಪಡಿ ಕಾಯ್ದೆಯಿಂದ ಸಹಕಾರಿ ಸಂಘಗಳಲ್ಲಿ ಆತಂಕ

01:25 PM May 21, 2020 | Naveen |

ಭದ್ರಾವತಿ: ಲಾಕ್‌ಡೌನ್‌ ಕಾರಣದಿಂದ ನೆಲಕಚ್ಚಿದ್ದ ವ್ಯವಸಾಯೋತ್ಪನ್ನ ಮಾರುಕಟ್ಟೆಯಲ್ಲಿನ ವ್ಯಾಪಾರ ನಿಧಾನವಾಗಿ  ತರಿಸಿಕೊಳ್ಳತ್ತಾ ವ್ಯಾಪಾರ-ವಹಿವಾಟನ್ನು ಆರಂಭಿಸಿದೆ ಆದರೂ ಸರ್ಕಾರ ಜಾರಿಗೆ ತಂದಿರುವ ಎಪಿಎಂಸಿ ಕಾಯ್ದೆ ತಿದ್ದುಪಡಿ ಇಲ್ಲಿನ ಸಹಕಾರಿ ಕ್ಷೇತ್ರದ ಸಂಸ್ಥೆಗಳ ಅಸ್ತಿತ್ವದ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂಬ ಆತಂಕವನ್ನು ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆಯ ಪ್ರಮುಖರು ವ್ಯಕ್ತಪಡಿಸುತ್ತಾರೆ.

Advertisement

ತಾಲೂಕಿನ ಕೃಷಿ ಉತ್ಪನ್ನಗಳ ಮಾರಾಟಕ್ಕೆ ರೈತರಿಗೆ ಎಪಿಎಂಸಿ ವೇದಿಕೆಯಾಗಿತ್ತು. ಆದರೆ ಈಗ ಸರ್ಕಾರ ಎಪಿಎಂಸಿ ಕಾಯ್ದೆಗೆ ತಂದಿರುವ ತಿದ್ದುಪಡಿ ಕಾಯ್ದೆಯಿಂದಾಗಿ ರೈತರು ತಾವು ಬೆಳೆದ ಬೆಳೆಗಳನ್ನು ಮಾರಾಟ ಮಾಡಲು ಎಪಿಎಂಸಿ ಹೊರಗೆ ಸಹ ಅವಕಾಶ ದೊರಕಿರುವುದರಿಂದ ಎಪಿಎಂಸಿ ಮೇಲಿನ ಅವಲಂಬನೆ ಕಡಿಮೆಯಾದಂತಾಗಿದೆ.

ತಾಲೂಕಿನಲ್ಲಿರುವ ಸುಮಾರು 180ಕ್ಕೂ ಅಧಿಕ ಗ್ರಾಮಾಂತರ ಪ್ರದೇಶಗಳಲ್ಲಿನ ಬಹುತೇಕ ರೈತರು ತಮ್ಮ ಜಮೀನುಗಳನ್ನು ಅಡಕೆ ತೋಟವನ್ನಾಗಿ ಮಾಡಿರುವುದರಿಂದ ಅಡಕೆ ಬೆಳೆ ಹೆಚ್ಚಾಗಿದೆ. ಅಡಕೆ ಬೆಳೆಗರರಿಗೆ ಸಹಕಾರಿಯಾಗಿ ಎಪಿಎಂಸಿ ಪ್ರಾಂಗಣದಲ್ಲಿ (ರ್‍ಯಾಂಕೋಸ್‌) ಮತ್ತು ಮ್ಯಾಮ್ಕೋಸ್‌, ಕ್ಯಾಂಪ್ಕೋ ಸಹಕಾರ ಸಂಘಗಳು ರೈತರು ಬೆಳೆದ ಅಡಕೆಗೆ ಬೆಳೆ ಪರಿಷ್ಕರಣೆ ಮತ್ತು ದಾಸ್ತಾನು ಮಾಡಲು ಉತ್ತಮ ಗೋಡೌನ್‌ ಸೌಲಭ್ಯ ನೀಡುತ್ತಾ ತಾಲೂಕಿನ ಅಡಕೆ ಬೆಳೆಗಾರರ ಹಿತ ಕಾಯುತ್ತಾ ಬಂದಿವೆ. ಈಗ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದಿರುವುದರಿಂದ ಭವಿಷ್ಯತ್ತಿನಲ್ಲಿ ರಾಂಕೋಸ್‌, ಮಾಮ್ಕೋಸ್‌ ವ್ಯಾಪಾರ-ವಹಿವಾಟಿನ ಮೇಲೆ ಗಂಭೀರ ಪರಿಣಾಮ ಬೀರಬಹುದೆಂಬ ಆತಂಕ ಈ ಸಂಸ್ಥೆಗಳ ಮೇಲೆ ಆವರಿಸಿದೆ.

ಈವರೆಗೆ ಇಲ್ಲಿನ ಅಡಕೆ ಬೆಳೆಗಾರರು ತಾವು ಬೆಳೆದ ಅಡಕೆಯನ್ನು ಈ ಸಂಸ್ಥೆಗಳ ಮೂಲಕವೇ ಮಾರಾಟ ಮಾಡುತ್ತಾ ಬಂದಿರುವುದರಿಂದ ಈ ಸಂಸ್ಥೆಗಳು ತಾವೂ ಬೆಳೆದು ಸದಸ್ಯ ರೈತರನ್ನೂ ಬೆಳೆಸುತ್ತಾ ಬಂದಿದ್ದವು. ಆದರೆ ಇನ್ನು ಮುಂದೆ ಇದೇ ಪರಿಸ್ಥಿತಿ ಇರುವುದು ಅನುಮಾನ ಎಂಬ ಆತಂಕ ಸಹಕಾರಿ ಸಂಘಗಳನ್ನು ಕಾಡುತ್ತಿದೆ. ಬಂಡವಾಳಶಾಹಿಗಳು ನೇರವಾಗಿ ಅಡಕೆ ಬೆಳೆಗಾರರ ತೋಟದಿಂದಲೇ ಅಡಕೆ ಖರೀದಿಸಿ ಅವರಿಗೆ ಹಣ ನೀಡುವ ಅವಕಾಶವಿರುವುದರಿಂದ ರೈತರಿಗೆ ಸಾಗಾಟದ ವೆಚ್ಚವಿಲ್ಲದೆ ಕುಳಿತಲ್ಲೇ ಅಡಕೆ ಮಾರಾಟವಾಗುತ್ತದೆ. ಆದ್ದರಿಂದ ರೈತರು ಈ ವ್ಯವಸ್ಥೆಗೆ ಮಣೆ ಹಾಕುತ್ತಾರೆ. ಆದರೆ ಇದರ ಪರಿಣಾಮವಾಗಿ ಸಹಕಾರಿ ಕ್ಷೇತ್ರದ ಆಧಾರ ಮೇಲೆ ಬೆಳೆದುಬಂದ ರಾಂಕೋಸ್‌ ಮತ್ತು ಮಾಮ್ಕೋಸ್‌ನಂತಹ ಸಂಸ್ಥೆಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದೆಂಬ ಆತಂಕ ಸೃಷ್ಟಿಯಾಗಿದೆ.

ಒಟ್ಟಿನಲ್ಲಿ ಒಂದೆಡೆ ಸರ್ಕಾರ ರೈತರ ಅನುಕೂಲಕ್ಕೆ ಪೂರಕವಾಗಿ ಜಾರಿಗೆ ತಂದಿದೆ ಎನ್ನಲಾಗುವ ಎಪಿಎಂಸಿ ತಿದ್ದಪಡಿ ಕಾಯ್ದೆ, ಮತ್ತೂಂದೆಡೆ ರೈತರ ಹಿತ ಕಾಯುವುದಕ್ಕಾಗಿ ರೈತರಿಂದಲೇ ಅಸ್ತಿತ್ವಕ್ಕೆ ಬಂದ ರಾಂಕೋಸ್‌, ಮಾಮ್ಕೋಸ್‌ನಂತಹ ಸಹಕಾರಿ ಸಂಘಗಳ ಅಸ್ತಿತ್ವಕ್ಕೆ ಎಲ್ಲಿ ಮಾರಕವಾಗುತ್ತದೆಯೋ ಎಂಬ ಆತಂಕ ಸಹಕಾರಿ ಸಂಘ-ಸಂಸ್ಥೆಗಳಲ್ಲಿ ಹುಟ್ಟಿದೆ.

Advertisement

ಎಪಿಎಂಸಿ ಕಾಯ್ದೆಗೆ ಸರ್ಕಾರ ತಂದಿರುವ ತಿದ್ದುಪಡಿ ಆರಂಭದಲ್ಲಿ ರೈತರಿಗೆ ಆಪ್ಯಾಯಮಾನವಾಗಿ ಕಾಣಬಹುದಾದರೂ ಕಾಲಾ ನಂತರದಲ್ಲಿ ರೈತರು ತಮಗರಿವಿಲ್ಲದಂತೆ ಬಂಡವಾಳಶಾಹಿಗಳ, ಬಹುರಾಷ್ಟ್ರೀಯ ಕಂಪನಿಗಳ ಕಪಿಮುಷ್ಠಿಗೆ ಸಿಲುಕಿ ನರಳುವ ಪರಿಸ್ಥಿತಿ ನಿರ್ಮಾಣವಾಗುತ್ತದೆ.
ವಿರೂಪಾಕ್ಷಪ್ಪ, ರ್‍ಯಾಂಕೋಸ್‌
ಸಂಸ್ಥೆಯ ವ್ಯವಸ್ಥಾಪಕ, ಭದ್ರಾವತಿ

ಕೆ.ಎಸ್‌. ಸುಧೀಂದ್ರ ಭದ್ರಾವತಿ

Advertisement

Udayavani is now on Telegram. Click here to join our channel and stay updated with the latest news.

Next