ಪರ್ತ್: 2014/15 ರ ಪ್ರವಾಸದ ನಂತರ ಆಸ್ಟ್ರೇಲಿಯಾ ತಂಡವು ಭಾರತವನ್ನು ತವರು ಅಥವಾ ವಿದೇಶದಲ್ಲಿ ಟೆಸ್ಟ್ ಸರಣಿಯಲ್ಲಿ ಸೋಲಿಸಿಲ್ಲ. ಪ್ರಸ್ತುತ ಪ್ಯಾಟ್ ಕಮಿನ್ಸ್ ನಾಯಕತ್ವದಲ್ಲಿ, ಮುಂದಿನ ಶುಕ್ರವಾರದಿಂದ ಪ್ರಾರಂಭವಾಗುವ ಐದು ಪಂದ್ಯಗಳ ಸರಣಿಯಲ್ಲಿ ಆಸೀಸ್ ತಪ್ಪನ್ನು ಸರಿಪಡಿಸಲು ನೋಡುತ್ತದೆ.
ಭಾರತವನ್ನು ಸೋಲಿಸಿದ ಕೊನೆಯ ಆಸ್ಟ್ರೇಲಿಯಾ ತಂಡದ ಭಾಗವಾಗಿದ್ದ ಮಾಜಿ ವೇಗಿ ಮಿಚೆಲ್ ಜಾನ್ಸನ್ (Mitchell Johnson) ಅವರು ಒಂದು ಕಾಲದ ಪ್ರತಿಸ್ಪರ್ಧಿ ವಿರಾಟ್ ಕೊಹ್ಲಿ (Virat Kohli) ಬಗ್ಗೆ ಮಾತನಾಡಿದ್ದಾರೆ. ಕೊಹ್ಲಿಯ ಹೋರಾಟದ ಮನೋಭಾವವು ಅವರ ದೊಡ್ಡ ಗುಣಲಕ್ಷಣಗಳಲ್ಲಿ ಒಂದಾಗಿದೆ ಎಂದು ಜಾನ್ಸನ್ ಹೇಳಿದ್ದಾರೆ.
“ಮೊದಲ ಬಾರಿಗೆ ವಿರಾಟ್ ಕೊಹ್ಲಿ ಬಂದಾಗ, ನಾನು ಅವನನ್ನು ನೋಡುವ ಮೊದಲೇ ಆತನ ಬಗ್ಗೆ ಕೇಳಿದ್ದೆ. ಆತ ಮುಂದಿನ ಸಚಿನ್ ತೆಂಡೂಲ್ಕರ್ ಎಂದು ಹಲವರು ಹೇಳಿದ್ದರು. ಎಲ್ಲಾ ಸ್ವರೂಪಗಳಲ್ಲಿ ಎರಡೂ ಭಾರತೀಯ ಲೆಜೆಂಡ್ ಗಳ ವಿರುದ್ಧ ಆಡಲು ನಾನು ಸಾಕಷ್ಟು ಅದೃಷ್ಟಶಾಲಿಯಾಗಿದ್ದೆ. ಕೆಲವು ಸಾಮ್ಯತೆಗಳಿದ್ದರೂ, ಅವರು ತುಂಬಾ ಭಿನ್ನರಾಗಿದ್ದರು. ಕೊಹ್ಲಿಯ ಒಂದು ಗುಣಲಕ್ಷಣವು ನನಗೆ ಎಲ್ಲಕ್ಕಿಂತ ಮುಂಚೆಯೇ ಎದ್ದು ಕಾಣುತ್ತದೆ. ಅವರು ಹೋರಾಟಕ್ಕೆ ಸಿದ್ಧರಾಗಿದ್ದರು!” ಎಂದು ಜಾನ್ಸನ್ ಹೇಳಿದ್ದಾರೆ.
“ಭಾರತೀಯ ಆಟಗಾರರಲ್ಲಿ ತುಂಬಾ ಕಡಿಮೆಯಾಗಿ ನಾನು ಕಂಡಿದ್ದ ಆಕ್ರಮಣಕಾರಿ ವರ್ತನೆ ನಾನು ವಿರಾಟ್ ಅವರಲ್ಲಿ ಕಂಡಿದ್ದೆ. ನಾವು ಎದುರಾಳಿಯನ್ನು ಕೆಣಕುತ್ತಿದ್ದೆವು, ಆದರೆ ಅದು ನಮಗೆ ಹಿಂದೆ ಬರುತ್ತಿರಲಿಲ್ಲ. ವಿರಾಟ್ ಅವರು ತಮ್ಮ ತಂಡವನ್ನು ತಮ್ಮೊಂದಿಗೆ ಕರೆದೊಯ್ದರು. ಆದ್ದರಿಂದ ಕೊಹ್ಲಿ ಭಾರತೀಯ ಕ್ರಿಕೆಟ್ನ ಮುಖವನ್ನು ಬದಲಾಯಿಸಿದರು. ಹೊಸ ಪೀಳಿಗೆಯ ಆಟಗಾರರನ್ನು ಕರೆದೊಯ್ದು ಅವರಿಗೆ ಕಠಿಣ ಕ್ರಿಕೆಟನ್ನು ಹೇಗೆ ಆಡಬೇಕೆಂದು ತೋರಿಸಿದರು ಎಂದು ಹೇಳುವುದು ಕಡಿಮೆ ಮಾತಲ್ಲ” ಎಂದು ಮಿಚೆಲ್ ಜಾನ್ಸನ್ ಅವರು ದಿ ವೆಸ್ಟರ್ನ್ ಆಸ್ಟ್ರೇಲಿಯಾದಲ್ಲಿ ಅಂಕಣದಲ್ಲಿ ಬರೆದಿದ್ದಾರೆ.
ವಿರಾಟ್ ಜೊತೆ ನಾನು ಪೈಪೋಟಿಗೆ ಇಳಿದಿದ್ದೆ. ಅದು ಮೈದಾನದಲ್ಲಿ ಹಲವು ಬಾರಿ ವ್ಯಕ್ತವಾಗಿದೆ. ಹಲವು ಬಾರಿ ಮಾತಿನ ಚಕಮಕಿ ನಡೆದಿದೆ. ಆದರೆ ಅದನ್ನೆಲ್ಲಾ ಆನಂದಿಸಿದ್ದೇನೆ ಎಂದು ಜಾನ್ಸನ್ ಹೇಳಿದ್ದಾರೆ.