Advertisement
ನಮ್ಮ ನಡೆ ಸ್ವತ್ಛತೆಯ ಕಡೆ. ನನ್ನ ಕ್ಷೇತ್ರ ಸ್ವತ್ಛ ಕ್ಷೇತ್ರ. ನನ್ನ ಗ್ರಾಮ ಸ್ವತ್ಛ ಗ್ರಾಮ ಎಂಬ ಅಭಿಯಾನದಡಿ ಯುವಕರ ಗುಂಪು ತಮ್ಮ ಗ್ರಾಮಗಳಲ್ಲಿ ಸ್ವತ್ಛತೆಯ ಕ್ರಾಂತಿ ಮಾಡುತ್ತಿದ್ದಾರೆ. ಜನರಲ್ಲಿ ಇದರ ಬಗ್ಗೆ ಅರಿವು ಮೂಡಿಸಿ ಗ್ರಾಮಗಳ ಬಗ್ಗೆ ಜನರಲ್ಲಿರುವ ಅಸಡ್ಡೆಯನ್ನು ದೂರ ಮಾಡುವ ಮಹತ್ಕಾರ್ಯಕ್ಕೆ ಮುಂದಾಗಿದ್ದಾರೆ. ಈ ಕಾರ್ಯಕ್ಕೆ ಯಾವುದೇ ನಿರ್ದಿಷ್ಟ ಗುಂಪು ರಚನೆ ಮಾಡಿಲ್ಲ. ಆದರೆ ಸ್ವತ್ಛತೆಯ ಅರಿವು ಮೂಡಿಸುವ ಉದ್ದೇಶದಿಂದ ಮಾರುತಿ ಅಷ್ಟಗಿ ನೇತೃತ್ವದಲ್ಲಿ ಕೆಲವು ಯುವಕರು ಒಂದು ಸಣ್ಣ ತಂಡ ಕಟ್ಟಿಕೊಂಡಿದ್ದಾರೆ. ಈ ತಂಡ ಪ್ರತಿ ರವಿವಾರ ಒಂದು ಗ್ರಾಮ ಆಯ್ಕೆ ಮಾಡಿಕೊಂಡು ಬೆಳಿಗ್ಗೆ ಅಲ್ಲಿಗೆ ಹೋಗಿ ಗ್ರಾಮದ ಯುವಕರ ಜತೆ ಚರ್ಚಿಸಿ ಅವರನ್ನು ಸ್ವತ್ಛತಾ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತದೆ. ನಂತರ ಉತ್ತಮ ಆರೋಗ್ಯಕ್ಕೆ ಉತ್ತಮ ಪರಿಸರ ಬೇಕು ಎಂಬ ಸಂದೇಶವನ್ನು ಗ್ರಾಮದ ಜನರಿಗೆ ಹಂಚುವುದಲ್ಲದೆ ಅವರ ಮನ ಪರಿವರ್ತನೆ ಮಾಡುವ ಪ್ರಯತ್ನ ಮಾಡುತ್ತದೆ.
Related Articles
Advertisement
ನಮ್ಮ ಹಳ್ಳಿಗಳಲ್ಲಿರುವ ಪುರಾತನ ದೇವಸ್ಥಾನಗಳನ್ನು ನಾವು ಚೆನ್ನಾಗಿ ಉಳಿಸಿಕೊಂಡರೆ ಮುಂದಿನ ಪೀಳಿಗೆಗೆ ಅದನ್ನು ತೋರಿಸಬಹುದು. ಊರಲ್ಲಿರುವ ಎಲ್ಲ ಗಲೀಜನ್ನು ಪೌರ ಕಾರ್ಮಿಕರೇ ತೆಗೆಯಬೇಕು ಎಂಬ ನಮ್ಮ ಭಾವನೆ ಸರಿಯಲ್ಲ. ಎಲ್ಲೆಂದರಲ್ಲಿ ಬೆಳೆದ ಕಸಕಡ್ಡಿಗಳನ್ನು ತೆಗೆಯುವುದು ಅವರಿಗೂ ಕಷ್ಟ. ಇದನ್ನು ನಾವು ಯುವಕರಿಗೆ ಮನವರಿಕೆ ಮಾಡಿಕೊಡುತ್ತೇವೆ. ಕೊನೆಗೆ ಅವರೇ ಸ್ವಯಂ ಪ್ರೇರಣೆಯಿಂದ ಮುಂದೆ ಬರುತ್ತಿದ್ದಾರೆ. ನಮ್ಮ ಅಭಿಯಾನಕ್ಕೆ ಕೈಜೋಡಿಸುತ್ತಿದ್ದಾರೆ.
ಇದನ್ನೂ ಓದಿ :ಕೈಲಿ ವಿಷ-ಕೊರಳಲ್ಲಿ ಹಗ್ಗ -ರೈತರ ಪ್ರತಿಭಟನೆ
ಪ್ರಾಥಮಿಕ ಆರೋಗ್ಯ ಕೇಂದ್ರ, ಶಾಲಾ ಆವರಣ, ಪುರಾತನ ದೇವಸ್ಥಾನಗಳು ನಮ್ಮ ಪ್ರಥಮ ಆದ್ಯತೆ ಎಂಬುದು ಮಾರುತಿ ಅಷ್ಟಗಿ ಹೇಳಿಕೆ. ಯುವಕರ ಶ್ರಮದಾನದಿಂದ ಹುಕ್ಕೇರಿ ತಾಲೂಕಿನ ಗೋಟೂರ ಗ್ರಾಮದ ಹಾಲಸಿದ್ಧನಾಥ ದೇವಸ್ಥಾನ, ಯಮಕನಮರಡಿಯ ಪುರಾತನ ಸ್ಮಾರಕ, ಐದು ದೇವರ ಗುಡಿ, ಕಾಕತಿಯ ಕಿಲ್ಲಾ ಆವರಣ, ಕರಗುಪ್ಪಿಯ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲಾ ಆವರಣ, ಬೆಳ್ಳಂಕಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ಅವರಣ, ಹತ್ತರಗಿ ಗ್ರಾಮದ ಹರಿಮಂದಿರ ಆವರಣ ಸೇರಿದಂತೆ ಅನೇಕ ಸ್ಥಳಗಳು ಈಗ ಹೊಸ ರೂಪ ಪಡೆದುಕೊಂಡಿವೆ.