ಬೆಳಗಾವಿ: ಇಲ್ಲಿಯ ಹಲಗಾ-ಮಚ್ಛೆ ಬೆ„ಪಾಸ್ ರಸ್ತೆ ನಿರ್ಮಾಣ ವಿರೋ ಧಿಸಿ ರೈತರು ನಡೆಸುತ್ತಿರುವ ಹೋರಾಟ ಎರಡನೇ ದಿನಕ್ಕೆ ಬುಧವಾರ ಕಾಲಿಟ್ಟಿದ್ದು, ರೈತರು ಕೈಯಲ್ಲಿ ಕ್ರಿಮಿನಾಶಕ (ವಿಷ) ಬಾಟಲಿ ಹಾಗೂ ಕೊರಳಲ್ಲಿ ಹಗ್ಗ ಹಾಕಿಕೊಂಡು ಆಕ್ರೋಶ ವ್ಯಕ್ತಪಡಿಸಿದರು.
ಹಲಗಾ-ಮಚ್ಛೆ ಬೈಪಾಸ್ ರಸ್ತೆಯನ್ನು ಯಾವುದೇ ಕಾರಣಕ್ಕೂ ಆರಂಭಿಸಬಾರದು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಇಲ್ಲಿ ಕೆಲಸ ನಡೆಸಲು ಮುಂದಾದರೆ ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ ರೈತರು, ತಕ್ಷಣವೇ ಈ ಕಾಮಗಾರಿಯನ್ನು ನಿಲ್ಲಿಸಬೇಕು. ರೈತರಿಗೆ ನೆಮ್ಮದಿಯಿಂದ ಉಳುಮೆ ಮಾಡಲು ಬಿಡಬೇಕು ಎಂದು ಆಗ್ರಹಿಸಿದರು.
ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಕೈಯಲ್ಲಿ ವಿಷದ ಬಾಟಲಿ, ಕೊರಳಲ್ಲಿ ಹಗ್ಗ ಹಾಕಿಕೊಂಡು ಆತ್ಮಹತ್ಯೆಯ ಬೆದರಿಕೆ ಹಾಕಿದರು. ಜೀವನಕ್ಕೆ ಆಧಾರವಾಗಿರುವ ಫಲವತ್ತಾದ ಭೂಮಿಯನ್ನು ರಾಷ್ಟ್ರಿಯ ಹೆದ್ದಾರಿ ಪ್ರಾಧಿಕಾರ ಕಬಳಿಸಿಕೊಳ್ಳಲು ಮುಂದಾಗಿದೆ. ರೈತರನ್ನು ಬೀದಿಪಾಲು ಮಾಡುವ ಹುನ್ನಾರ ನಡೆಸಿದ್ದು, ನಮ್ಮ ಪ್ರಾಣ ಹೋದರೂ ಸರಿ, ಇದಕ್ಕೆ ಅವಕಾಶ ನೀಡುವುದಿಲ್ಲ. ನಮ್ಮ ಸಮಾಧಿ ಮೇಲೆ ರಸ್ತೆ ನಿರ್ಮಿಸಬಹುದು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈಗಾಗಲೇ ರಸ್ತೆ ನಿರ್ಮಾಣಕ್ಕೆ ಅವಕಾಶ ನೀಡದಂತೆ ಕೋರ್ಟ್ ಮೆಟ್ಟಿಲೇರಲಾಗಿದೆ. ಎಲ್ಲಿಂದ ಕಾಮಗಾರಿ ಆರಂಭಿಸಬೇಕು ಎನ್ನುವುದು ನಿಗದಿ ಆಗುವವರೆಗೆ ಕಾಮಗಾರಿ ಆರಂಭಿಸದಂತೆ ಹೆ„ಕೋರ್ಟ್ ಆದೇಶ ನೀಡಿದೆ. ಕಾನೂನು ಬಾಹಿರವಾಗಿ ಕಾಮಗಾರಿ ನಡೆಸಲು ಬಂದರೆ ನಾವು ಸುಮ್ಮನಿರುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಶೇ 75ರಷ್ಟು ರೈತರು ಹಣ ಪಡೆದಿದ್ದಾರೆ ಎಂದು ಅಧಿ ಕಾರಿಗಳು ಸುಳ್ಳು ಹೇಳುತ್ತಿದ್ದಾರೆ. ಸ್ಥಳಕ್ಕೆ ಬಂದು, ಹಣ ಪಡೆದಿರುವ ರೈತರನ್ನು ತೋರಿಸಬೇಕು. ಸುಳ್ಳು ಹೇಳಿ ರೈತರ ಕಣ್ಣಿಗೆ ಮಣ್ಣೆರಚಿ ಬೆ„ಪಾಸ್ ರಸ್ತೆ ನಡೆಸುತ್ತಿರುವುದು ಏಕೆ? ಜಿಲ್ಲಾ ಧಿಕಾರಿಗಳು ಸ್ಥಳಕ್ಕೆ ಬಂದು ಕಾಮಗಾರಿಗೆ ಅವಕಾಶ ನಿಡಬಾರದು. ಕಾನೂನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ವರ್ಷಕ್ಕೆ ಮೂರು ಬೆಳೆ ಬರುವ ಫಲವತ್ತಾದ ಭೂಮಿಯನ್ನು ಬೆ„ಪಾಸ್ ರಸ್ತೆ ನಿರ್ಮಾಣಕ್ಕೆ ದಬ್ಟಾಳಿಕೆಯಿಂದ ಕಸಿದುಕೊಳ್ಳಲಾಗುತ್ತಿದೆ. ರೈತರ ಹಿತಾಸಕ್ತಿ ಕಡೆಗಣಿಸಿ ರಾಜಕೀಯ ಒತ್ತಡದಿಂದ ದಬ್ಟಾಳಿಕೆ ನಡೆಸಲಾಗುತ್ತಿದೆ. ಸಣ್ಣ ರೈತರಿಗೆ ಕಿರುಕುಳ ನೀಡಲಾಗುತ್ತಿದೆ. ಪೊಲೀಸರ ಮೂಲಕ ರೈತರನ್ನು ಒಕ್ಕಲೆಬ್ಬಿಸಲು ಸುತ್ತಲಿನ ವಾತಾವರಣ ಭಯಪೂರಿತ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಇದನ್ನೂ ಓದಿ :ಅಶೋಕವನ ಎಸ್ಟೇಟಿಗೆ ಸ್ವಾಗತ ಕೋರಿದ ‘ಹೀರೋ’…ಶೆಟ್ಟರ ಸಿನಿಮಾ ರಿಲೀಸ್ ಡೇಟ್ ಪ್ರಕಟ
ಮಂಗಳವಾರ ಕಾಮಗಾರಿ ನಡೆಸಲು ಬಂದ ಪ್ರಾ ಧಿಕಾರದ ಜೆಸಿಬಿಗಳನ್ನು ತಡೆದ ರೈತರು ಅದರ ಎದುರು ಮಲಗಿ ಪ್ರತಿಭಟನೆ ನಡೆಸಿದ್ದರು. ರಾತ್ರಿಯೀಡಿ ಸ್ಥಳದಲ್ಲಿಯೇ ಠಿಕಾಣಿ ಹೂಡಿದ ರೈತರು ಊಟ ಸವಿದು ಕಾಲ ಕಳೆದಿದ್ದರು. ಬುಧವಾರವೂ ಪ್ರತಿಭಟನೆ ಮುಂದುವರಿಸಿದ್ದಾರೆ. ರೈತ ಮುಖಂಡರಾದ ರಾಜು ಮರವೆ, ಪ್ರಕಾಶ ನಾಯಕ, ಹನುಮಂತ ಬಾಳೇಕುಂದ್ರಿ, ಭೂಮೇಶ ಬಿರಜೆ, ಅನಿಲ್ ಅನಗೋಳಕರ ಸೇರಿದಂತೆ ಇತರರು ಇದ್ದರು.