ಕಲಬುರಗಿ: ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಬರಿಗಾಲು ತಜ್ಞರು (ಬಿಎಫ್‌ಟಿ-ಬೇರ್ ಫೂಟ್ ಟೆಕ್ನಿಷಿಯನ್) ತರಬೇತಿ ಪೂರಕ ಪರೀಕ್ಷೆಗೆ ಅರ್ಜಿದಾರ ಅಭ್ಯರ್ಥಿಗಳಿಗೆ ಮಾಹಿತಿ ನೀಡಿಲ್ಲ ಎಂದು ಆರೋಪಿಸಿ ಕೆಲ ಅಭ್ಯರ್ಥಿಗಳು ನಗರದಲ್ಲಿ ಹೈಡ್ರಾಮಾ ಸೃಷ್ಟಿಸಿದರು.
ರಾಜ್ಯದ 12 ಜಿಲ್ಲೆಗಳಲ್ಲಿ ಮಂಗಳವಾರ ಏಕಕಾಲಕ್ಕೆ ಬಿಎಫ್‌ಟಿ ತರಬೇತಿಗೆ ಸ್ಕ್ರೀನಿಂಗ್ ಟೆಸ್ಟ್ ಆಯೋಜಿಸಲಾಗಿತ್ತು. ಅದರಂತೆ ನಗರದಲ್ಲಿ ಜಿಪಂಯಿಂದ ನೂತನ ಸಭಾಂಗಣದಲ್ಲಿ ಪರೀಕ್ಷೆ ನಡೆಯಿತು. ಈ ವೇಳೆ ಪರೀಕ್ಷಾ ಸ್ಥಳಕ್ಕೆ ಬಂದ ಕೆಲ ಅಭ್ಯರ್ಥಿಗಳು ಜಿಲ್ಲೆಯಲ್ಲಿ 800 ಜನರು ಅರ್ಜಿ ಸಲ್ಲಿಸಿದ್ದೇವೆ. ಆದರೆ, ಅಧಿಕಾರಿಗಳು ಕೆಲವರನ್ನು ಮಾತ್ರ ಪರೀಕ್ಷೆಗೆ ಕರೆದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಖಂಡ ಅಶೋಕ ಮ್ಯಾಗೇರಿ, ಅಭ್ಯರ್ಥಿಗಳಾದ ಶಿವಕುಮಾರ್, ವಿದ್ಯಾವತಿ ಗುತ್ತೇದಾರ, ಬಾಬುರಾವ್,ಪ್ರಭಾವತಿ, ಅನಿಲ್ ಕುಮಾರ ಪಾಟೀಲ, ಸಂತೋಷ ಕುಮಾರ ಮುಂತಾದವರು ಏಕಾಏಕಿ ಮುಖ್ಯ ರಸ್ತೆ ಮೇಲೆ ಕುಳಿತು ಪ್ರತಿಭಟನೆ ನಡೆಸಿ, ಅಧಿಕಾರಿಗಳು ಲಂಚ ಪಡೆದು ತಮಗೆ ಬೇಕಾದ ಅಭ್ಯರ್ಥಿಗಳಿಗೆ ಮಾತ್ರವೇ ಪರೀಕ್ಷೆ ಬರೆಯಲು ಅವಕಾಶ ಕೊಟ್ಟಿದ್ದಾರೆ ಎಂದು ದೂರಿದರು. ಈ ವೇಳೆ ಜಿಪಂ ಅಧಿಕಾರಿಗಳು ಅಭ್ಯರ್ಥಿಗಳಿಗೆ ತಿಳಿ ಹೇಳಲು ಯತ್ನಿಸಿದರೂ ವಿಫಲವಾದರು. ನಂತರ ಸ್ಥಳಕ್ಕೆ ಬಂದ ಪೊಲೀಸರು ಎಲ್ಲರನ್ನೂ ಚದುರಿಸಿದರು.
19 ಹುದ್ದೆಗಳಿಗೆ ಟೆಸ್ಟ್: ಜಿಲ್ಲೆಯಲ್ಲಿ ಬಿಎಫ್‌ಟಿ 19 ಹುದ್ದೆಗಳ ಭರ್ತಿಗೆ ಅವಕಾಶ ಇದ್ದು, ನರೇಗಾ ಯೋಜನೆಯ ಕ್ಷೇತ್ರದ ಮಟ್ಟದ ಸಹಾಯಕರು ಮತ್ತು ಕೂಲಿ ಕೆಲಸ ಮಾಡಿ ಹೊರ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿತ್ತು. ಆದರೆ, ಕ್ಷೇತ್ರದ ಮಟ್ಟದ ಸಹಾಯಕರಿಗೆ ಪ್ರಥಮ ಆದ್ಯತೆ ನೀಡಬೇಕೆಂದು ಸರ್ಕಾರ ಆದೇಶದ ಇದ್ದು, ಅದರಂತೆ 1:3 ಅನುಪಾತದಲ್ಲಿ ಕ್ಷೇತ್ರದ ಮಟ್ಟದ ಸಹಾಯಕರಾದ 57 ಅಭ್ಯರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿತ್ತು ಎಂದು ಅಧಿಕಾರಿಯೊಬ್ಬರು ತಿಳಿಸಿದರು.
ಸರ್ಕಾರ ನಿಮಯದಂತೆ ಪರೀಕ್ಷೆ ನಡೆಸಲಾಗಿದೆ. ಸಂಜೆ ವೇಳೆಗೆ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಮಾಡಿ, ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ಸ್ಪಷ್ಟಪಡಿಸಿ ಅವರು, ನರೇಗಾ ಕೂಲಿ ಮಾಡಿದವರೂ ಅರ್ಜಿ ಸಲ್ಲಿಸಲು ಅವಕಾಶ ಇರುವುದರಿಂದ ಒಟ್ಟು620 ಅರ್ಜಿಗಳು ಸಲ್ಲಿಕೆಯಾಗಿದ್ದವು ಎಂದರು.