Advertisement

Ram Mandir: ರಾಮ ಮಂದಿರದ ಹೆಸರಲ್ಲಿ ನಕಲಿ ಜಾಹೀರಾತುಗಳ ಬಗ್ಗೆ ಇರಲಿ ಎಚ್ಚರ

12:14 AM Jan 21, 2024 | Team Udayavani |

ಹೊಸದಿಲ್ಲಿ: ಅಯೋಧ್ಯೆಯಲ್ಲಿ ರಾಮಮಂದಿರ ಪ್ರಾಣ ಪ್ರತಿಷ್ಠಾಪನೆಗೆ ಕ್ಷಣಗಣನೆ ಆರಂಭವಾಗಿದೆ. ಆದರೆ ಇದನ್ನೇ ಬಂಡವಾಳ ಮಾಡಿಕೊಂಡಿರುವ ಸೈಬರ್‌ ವಂಚಕರು, ಭಕ್ತರ ವಂಚನೆಗೆ ಹಲವಾರು ತಂತ್ರಗಳನ್ನು ಬಳಸುತ್ತಿದ್ದಾರೆ. ನಕಲಿ ಜಾಹೀರಾತುಗಳ ಕುರಿತು ನಾಗರಿಕರು ಜಾಗೃತರಾಗಿ ಇರಬೇಕು ಎಂದು ಕೇಂದ್ರ ಸರಕಾರ  ಎಚ್ಚರಿಸಿದೆ.

Advertisement

ಸಾಮಾಜಿಕ ಜಾಲತಾಣಗಳ ಮೇಲೆ ಕೇಂದ್ರ ಸೈಬರ್‌ ಅಪರಾಧ ವಿಭಾಗವು ಕಣ್ಣಿಟ್ಟಿದೆ. ಈಗಾಗಲೇ ನಕಲಿ ದೇಣಿಗೆ ಮತ್ತು ವಿಐಪಿ ಪ್ರವೇಶ ಹೆಸರಿನಲ್ಲಿ ದಂಧೆಯಲ್ಲಿ ತೊಡಗಿದ್ದವರ ವಿರುದ್ಧ ಕ್ರಮ ಕೈಗೊಂಡಿದೆ.

ರಾಮ ಮಂದಿರಕ್ಕೆ ದೇಣಿಗೆ ನೀಡುವಂತೆ ಸೈಬರ್‌ ವಂಚಕರು ನಕಲಿ ದೇಣಿಗೆ ಅಭಿಯಾನ ಆರಂಭಿಸಿದ್ದಾರೆ. ಇದಕ್ಕಾಗಿ ನಕಲಿ ಕ್ಯುಆರ್‌ ಕೋಡ್‌ ಬಳಸುತ್ತಿದ್ದಾರೆ. ಈ ಹಣವು ಶ್ರೀರಾಮ ಜನ್ಮಭೂಮಿ ಟ್ರಸ್ಟ್‌ ಖಾತೆಗೆ ಹೋಗುವ ಬದಲು ಸೈಬರ್‌ ವಂಚಕರ ಪಾಲಾಗುತ್ತಿದೆ.

ಇನ್ನೊಂದೆಡೆ, ರಾಮಮಂದಿರಕ್ಕೆ ವಿಐಪಿ ಪ್ರವೇಶ ಪಾಸ್‌ಗಾಗಿ ಈ ಫೈಲ್‌ ಅನ್ನು ಡೌನ್‌ಲೋಡ್‌ ಮಾಡಿ ಎಂದು ನಕಲಿ ವಾಟ್ಸ್‌ಆ್ಯಪ್‌ ಸಂದೇಶ ಎಲ್ಲೆಡೆ ಹರಿದಾಡುತ್ತಿದೆ. ಒಮ್ಮೆ ಇದನ್ನು ಡೌನ್‌ಲೋಡ್‌ ಮಾಡಿದರೆ, ನಿಮ್ಮ ಗ್ಯಾಲರಿಯಲ್ಲಿರುವ ಫೋಟೋ, ವೀಡಿಯೋ, ಸಂಪರ್ಕ ಹೆಸರುಗಳು, ಲೊಕೇಶನ್‌ ಸೇರಿದಂತೆ ಎಲ್ಲ ಡೇಟಾವನ್ನು ಸೈಬರ್‌ ವಂಚಕರು ಕದಿಯುತ್ತಾರೆ.

ಇದೇ ರೀತಿ ಅಯೋಧ್ಯೆಯ ಶ್ರೀ ರಾಮಜನ್ಮ ಭೂಮಿ ಟ್ರಸ್ಟ್‌ ಹೆಸರಲ್ಲಿ ಲಡ್ಡು ಪ್ರಸಾದವನ್ನು ನಿಮ್ಮ ಮನೆ ಬಾಗಿಲಿಗೆ ಕಳುಹಿಸಲಾಗುವುದು ಎಂಬ ನಕಲಿ ಜಾಹೀರಾತುಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಡೆಲಿವರಿ ಶುಲ್ಕದ ಹೆಸರಿನಲ್ಲಿ ಭಕ್ತರಿಂದ ಹಣ ಪೀಕುವ ದಂಧೆ ಇದಾಗಿದೆ. ಮಂದಿರ ಟ್ರಸ್ಟ್‌ ಯಾವುದೇ ಪ್ರಸಾದವನ್ನು ಮಾರಾಟ ಮಾಡುತ್ತಿಲ್ಲ. ಈ ರೀತಿಯ ನಕಲಿ ಜಾಹೀರಾತುಗಳು, ಸ್ಕ್ಯಾಮ್‌ಗಳ ಬಗ್ಗೆ ನಾಗರಿಕರು ಜಾಗರೂಕರಾಗಿರಬೇಕು ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.

Advertisement

ಟಿಟಿಡಿಯಿಂದ ಪ್ರಾಣ ಪ್ರತಿಷ್ಠೆ ನೇರಪ್ರಸಾರ

ತಿರುಮಲ ತಿರುಪತಿ ದೇವಸ್ಥಾನಮ್ಸ್‌(ಟಿಟಿಡಿ) ಟೆಲಿವಿಶನ್‌ ಚಾನೆಲ್‌ “ಶ್ರೀ ವೆಂಕಟೇಶ್ವರ ಭಕ್ತಿ ಚಾನೆಲ್‌’ನಲ್ಲಿ ಅಯೋಧ್ಯೆ ರಾಮಮಂದಿರ ಪ್ರಾಣ ಪ್ರತಿಷ್ಠೆ ಸಮಾರಂಭದ ನೇರ ಪ್ರಸಾರ ಇರಲಿದೆ. ಸೋಮವಾರ ಬಹುಭಾಷೆಗಳಲ್ಲಿ ನೇರ ಪ್ರಸಾರ ಬಿತ್ತರಿಸಲಾಗುತ್ತದೆ ಎಂದು ಟಿಟಿಡಿ ಹೇಳಿದೆ. ಕನ್ನಡ, ತಮಿಳು, ಹಿಂದಿ ಚಾನೆಲ್‌ ಜತೆಗೆ ತೆಲುಗು ಭಾಷೆಯ ಯೂಟ್ಯೂಬ್‌ ಚಾನೆಲ್‌ನಲ್ಲೂ ನೇರ ಪ್ರಸಾರ ಇರಲಿದೆ ಎಂದಿದೆ.

ಪಾಕ್‌ ಆಕ್ರಮಿತ ಕಾಶ್ಮೀರದ ಶಾರದಾಪೀಠದ ಪುಣ್ಯ ಜಲ ಭಾರತಕ್ಕೆ ಕಳುಹಿಸಿದ ಮುಸಲ್ಮಾನ

ಅಯೋಧ್ಯೆಯಲ್ಲಿ ನಡೆಯುತ್ತಿರುವ ರಾಮಲಲ್ಲಾನ ಪ್ರಾಣಪ್ರತಿಷ್ಠೆ ಕಾರ್ಯಕ್ರಮಕ್ಕಾಗಿ ಪಾಕಿಸ್ಥಾನ ಆಕ್ರಮಿತ ಕಾಶ್ಮೀರದಲ್ಲಿರುವ ಶಾರದಾಪೀಠದಿಂದ ಪುಣ್ಯ ಜಲವನ್ನು ಮುಸ್ಲಿಂ ವ್ಯಕ್ತಿಯೊಬ್ಬರು ಬ್ರಿಟನ್‌ ಮುಖೇನ ಭಾರತಕ್ಕೆ ತಲುಪಿಸಿದ್ದಾರೆ. ಹೀಗೆಂದು ಕಾಶ್ಮೀರದ ಶಾರದಾ ಉಳಿಸಿ ಸಮಿತಿಯ (ಎಸ್‌ಎಸ್‌ಸಿಕೆ) ಸಂಸ್ಥಾಪಕ ರಾದ ರವೀಂದ್ರ ಪಂಡಿತ ಹೇಳಿದ್ದಾರೆ. ಬಾಲಕೋಟ್‌ ದಾಳಿ ಬಳಿಕ ಭಾರತ ಮತ್ತು ಪಾಕ್‌ ನಡುವಿನ ಅಂಚೆ ಸೇವೆ ಸ್ಥಗಿತಗೊಂಡಿರುವ ಕಾರಣ ತನ್ವೀರ್‌ ಅಹ್ಮದ್‌ ಎಂಬ ವ್ಯಕ್ತಿ ಮತ್ತು ಅವರ ತಂಡದವರು ಬ್ರಿಟನ್‌ ಮಾರ್ಗವಾಗಿ ಪುಣ್ಯಜಲ ತಲುಪಿಸಿದ್ದಾರೆ ಎಂದಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next