Advertisement
ದಿ ಬೆಟರ್ ಇಂಡಿಯಾ ಡಾಟ್ ಕಾಂ ಎಂಬ ವೆಬ್‌ನಲ್ಲಿ ಭಾರತದ ಅಪರೂಪದ ಸಾಧಕರ ಕಥೆಗಳನ್ನು ನೋಡಬಹುದು. ಅದರಲ್ಲಿ ನಮೂದಾಗಿರುವ ಬೆಂಗಳೂರಿನ ದಿನೇಶ್ ಪಗರಿಯಾ ಅವರ ಯಶೋಗಾಥೆ ಭಿನ್ನವಾಗಿದೆ. 2016ರಲ್ಲಿ ಬೆಂಗಳೂರಿನ ಜಯನಗರದಲ್ಲಿ 60-80ರ ನಿವೇಶನದಲ್ಲಿ ಫ್ಲಾಟ್ ಕಟ್ಟಿಸಿದ ದಿನೇಶ್, ಈವರೆಗೆ ವಿದ್ಯುತ್‌ಗಾಗಿ ಅಲ್ಲಿನ ಬೆಸ್ಕಾಂಗೆ ಮೊರೆ ಹೋಗಿಲ್ಲ! ಕಟ್ಟುವ ಸಂದರ್ಭದಿಂದ ಈವರೆಗೆ ಅವರ ವಿದ್ಯುತ್ ಬಳಕೆ ಪಯಣ ಸಂಪೂರ್ಣ ಸ್ವಾಯತ್ತ.
Related Articles
Advertisement
ಸೌಲಭ್ಯ ಇದೆ, ವಿದ್ಯುತ್ ಇಲ್ಲ!: ಕಳೆದ ಯುಗಾದಿ ಸಂದರ್ಭದಲ್ಲಿ ಮನೆಯ ಗೃಹಪ್ರವೇಶ ನಡೆದಿದೆ. ಈ ಸುಸಜ್ಜಿತ ಮನೆಯಲ್ಲಿ ಏರ್ ಕಂಡೀಷನರ್ ವ್ಯವಸ್ಥೆ ಇದೆ. ವಾಶಿಂಗ್ ಮಿಷನ್, 5 ಹೆಚ್‌ಪಿ ಸಾಮರ್ಥ್ಯದ ಬೋರ್‌ವೆಲ್ ಸಬ್‌ಮರ್ಸಿಬಲ್ ಪಂಪ್, ರೆಫ್ರಿಜರೇಟರ್, ಟಿವಿ ಸೇರಿದಂತೆ ಉಳಿದ ಎಲೆಕ್ಟ್ರಾನಿಕ್ ಹಾಳುಮೂಳುಗಳೆಲ್ಲ ಇವೆ. ಇಲ್ಲ ಎಂಬುದು ಬೆಸ್ಕಾಂ ವಿದ್ಯುತ್ ಸಂಪರ್ಕ ಮಾತ್ರ! ಇಂದು ದಿನೇಶ್ ಅವರ ಮನೆಯ ಚಾವಣಿಯಲ್ಲಿ 133 ಸೋಲಾರ್ ಪ್ಯಾನೆಲ್‌ಗಳಿವೆ. ಇವು ದಿನವೊಂದಕ್ಕೆ 80 ಯೂನಿಟ್ ವಿದ್ಯುತ್ ಉತ್ಪಾದಿಸಬಲ್ಲವು.
ಇತ್ತ ಮನೆಯಲ್ಲಿ ವಿಪರೀತ ಎಂಬಂತೆ ಬಳಸಿದರೂ ದಿನವೊಂದಕ್ಕೆ ಪರಮಾವಧಿ 20 ಯೂನಿಟ್ ವಿದ್ಯುತ್ ಬೇಕಾಗುತ್ತದೆ. ವಿದ್ಯುತ್ ಸ್ವಾಯತ್ತತೆ ಸಮಸ್ಯೆಯೇ ಅಲ್ಲ! ಸಾಂಪ್ರದಾಯಿಕ ಸೋಲಾರ್ ಪ್ಯಾನೆಲ್‌ಗಳಲ್ಲಿ ಸೂರ್ಯ ರಶ್ಮಿ ವಿದ್ಯುತ್ ಉತ್ಪಾದನೆಯನ್ನು ಬಡಿದೆಬ್ಬಿಸಬೇಕಾಗುತ್ತದೆ. ವಿಶ್ವದೆಲ್ಲೆಡೆ ಕಮರ್ಷಿಯಲ್ ಪವರ್ ಉತ್ಪಾದನೆಯಲ್ಲಿ ತೆಳುವಾದ ಸೋಲಾರ್ ಕೋಶಗಳನ್ನು ಬಳಸುತ್ತಿದ್ದಾರೆ. ಇದು ಕೋಶದ ಒಂದು ಭಾಗದಲ್ಲಿ ಚೂರೇ ಚೂರು ಬೆಳಕಿನ ಛಾಯೆ ಬಿದ್ದರೂ ವಿದ್ಯುತ್ ಉತ್ಪಾದನೆ ಆರಂಭವಾಗುತ್ತದೆ. ಮಳೆಗಾಲ, ಮೋಡ ಮುಸುಕಿದ್ದರೂ ಉತ್ಪಾದನೆಗೆ ರಜೆ ಇಲ್ಲ.
ಸಾಂಪ್ರದಾಯಿಕ ಪ್ಯಾನೆಲ್ ಬೆಲೆ 5, 6 ಸಾವಿರ ರೂ.ಗಳಿದ್ದರೆ ತೆಳು ಸೋಲಾರ್ ಕೋಶಕ್ಕೆ ಸುಮಾರು 7 ಸಾವಿರ ರೂ. ಬೆಲೆ ಇದೆ. ಕಾರ್ಯಕ್ಷಮತೆಯನ್ನು ಪರಿಗಣಿಸಿದರೆ ಇದಕ್ಕೇ ಬಂಡವಾಳ ಹೂಡುವುದು ಪರಿಣಾಮಕಾರಿ. 10ರಿಂದ 15 ವರ್ಷದ ಬಾಳಿಕೆಯ ಸಾವಿರ ಎಎಚ್‌ನ ಎರಡು ಬ್ಯಾಟರಿ ಇದೆ. ಎಂಟು, ಎಂಟು ಹಾಗೂ ನಾಲ್ಕು ಕಿ.ವ್ಯಾನ ಮೂರು ಪ್ರತ್ಯೇಕ ಯೂನಿಟ್‌ಗಳಿವೆ. ಯಾಂತ್ರಿಕ ವ್ಯವಸ್ಥೆಯನ್ನು ದೂರದ ಆಸ್ಟ್ರೇಲಿಯಾದಲ್ಲಿ ಕುಳಿತೂ ನಿರ್ವಹಿಸಬಹುದಾದ ತಾಂತ್ರಿಕತೆ ಅಳವಡಿಕೆಯಾಗಿದೆ.
ಇಷ್ಟೆಲ್ಲ ನಿರ್ಮಾಣಕ್ಕೆ ಎಲ್ಲ ವ್ಯವಸ್ಥೆಗಳೂ ಸೇರಿ ವೆಚ್ಚವಾಗಿದ್ದು 36 ಲಕ್ಷ ರೂ. ಟಿಪಿ ಉಳಿತಾಯದ ಹೊರತಾಗಿಯೂ ಈವರೆಗೆ 5ರಿಂದ 8 ಲಕ್ಷ ರೂ. ಪರೋಕ್ಷವಾಗಿ ವಸೂಲಿಯಾಗಿದೆ. ಇಂತಿಪ್ಪ ಹಿನ್ನೆಲೆಯ ದಿನೇಶ್ ಅವರ ಸಫಲ ಸಾಧನೆ ಉಳಿದವರಿಗೆ ಮಾದರಿಯಾಗದಿದ್ದರೆ ನಷ್ಟ ನಮ್ಮದೇ. ಸೋಲಾರ್ ರೂಫ್ಟಾಪ್ ಸಂಬಂಧ ಎಸ್ಕಾಂಗಳ ಕೆಂಗಣ್ಣು ಬಿದ್ದಾಗಿದೆ. ಆ ಬಗ್ಗೆ ಇನ್ನೊಮ್ಮೆ. ಆದರೆ ಜನರು ಸಣ್ಣ ಸಣ್ಣ ಯೂನಿಟ್‌ಗಳಾಗಿ ಸಹಕಾರಿ ತತ್ವದಲ್ಲಿ ವಿದ್ಯುತ್ ಸ್ವಾಯತ್ತತೆ ಪಡೆಯಲು ಸೋಲಾರ್ ದಾರಿ ತೋರಿಸುತ್ತಿದೆ. ಈ ನಿಟ್ಟಿನಲ್ಲಿಯೇ ಹೆಚ್ಚು ಚಿಂತನೆಗಳು ನಡೆಯಬೆಕಾಗಿದೆ.* ಗುರು ಸಾಗರ