ತಿ.ನರಸೀಪುರ: ಸಾರ್ವತ್ರಿಕ ವಿಧಾನಸಭೆ ಚುನಾವಣೆ ಫಲಿತಾಂಶ ತೀವ್ರ ಕುತೂಹಲಕ್ಕೆ ಕಾರಣವಾಗಿರುವ ಹಿನ್ನೆಲೆಯಲ್ಲಿ ತಿ.ನರಸೀಪುರ ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ಫಲಿತಾಂಶದ ಮುನ್ನವೇ ಸೋಲು ಗೆಲುವಿನ ಲೆಕ್ಕಚಾರ ಜೋರಾಗಿದ್ದು, ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರ ಬೆಟ್ಟಿಂಗ್ ದಂಧೆ ಶುರುವಾಗಿದೆ.
ಗೆಲ್ಲುವ ವಿಶ್ವಾಸವನ್ನು ಹೊಂದಿರುವ ಲೋಕೋಪಯೋಗಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ನರಸೀಪುರ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಸೋಮನಾಥಪುರ ಜಿಪಂ ಕ್ಷೇತ್ರದ ಸದಸ್ಯ ಎಂ.ಅಶ್ವಿನ್‌ಕುಮಾರ್ ಮೊದಲ ಬಾರಿಯ ಸ್ಪರ್ಧೆಯಲ್ಲೇ ಕಾಂಗ್ರೆಸ್‌ಗೆ ತೀವ್ರ ಪೈಪೋಟಿ ನೀಡಿದ್ದಾರೆ. ಎರಡೂ ಪಕ್ಷಗಳ ಕಾರ್ಯಕರ್ತರು ಗೆಲುವಿನ ಬಗ್ಗೆ ಬಹಿರಂಗ ಸವಾಲು ಹಾಕುವಷ್ಟರ ಮಟ್ಟಿಗೆ ದೃಢನಂಬಿಕೆ ಹೊಂದಿದ್ದಾರೆ.
ಸಚಿವರು ಗೆಲ್ಲುವರೆ?: ಕಡೇ ಗಳಿಗೆಯಲ್ಲಿ ಬಿಜೆಪಿ ಅಭ್ಯರ್ಥಿ ಶಂಕರ್ ಕೈಚಲ್ಲಿ ಚುನಾವಣೆಯಿಂದ ದೂರ ಉಳಿದ್ದರಿಂದ ಕಾಂಗ್ರೆಸ್ ಮತ್ತು ಜೆಡಿಎಸ್ ಮತಗಳು ಹಂಚಿಕೆಯಾಗಿರುವ ಸಾಧ್ಯತೆಯಿದೆ. ಕ್ಷೇತ್ರದ ಅಭಿವೃದ್ಧಿ ಆಧಾರದ ಮೇಲೆ ಜನರು ಮತ್ತೆ ಕಾಂಗ್ರೆಸ್ ಕೈ ಹಿಡಿಯುವರೆಂಬ ಬಲವಾದ ನಂಬಿಕೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಾ.ಎಚ್.ಸಿ.ಮಹದೇವಪ್ಪಅವರಲ್ಲಿದ್ದರೆ,
ಪಕ್ಷದ ಸಂಘಟನೆಗೆ ದುಡಿದು ಟಿಕೆಟ್ ಗಿಟ್ಟಿಸಿಕೊಂಡು ಕಾರ್ಯಕರ್ತರು ಮತ್ತು ಮುಖಂಡರ ಕಾರ್ಯತಂತ್ರದ ಮೇಲೆ ವಿಶ್ವಾಸ ಇಟ್ಟಿರುವ ಜೆಡಿಎಸ್ ಅಭ್ಯರ್ಥಿ ಎಂ.ಅಶ್ವಿನ್‌ಕುಮಾರ್ ಬಿಎಸ್ಪಿಮೈತ್ರಿಕೂಟದ ಬಲದ ಮೇಲೆ ಗೆಲುವಿನ ನಗೆ ಬೀರುವ ಸಂಭ್ರಮದಲ್ಲಿದ್ದಾರೆ. ಅಬ್ಬರದ ಪ್ರಚಾರ ನಡೆಸಿ ಬಿಜೆಪಿಯಲ್ಲಿ ಗೆಲುವಿನ ಅಲೆಯನ್ನು ಎಬ್ಬಿಸಿದ್ದ ಬಿಜೆಪಿ ಅಭ್ಯರ್ಥಿ ಎಸ್.ಶಂಕರ್ ಚುನಾವಣೆ ಎರಡು ದಿನ ಇದೆ ಎನ್ನುವಾಗ ಕಣದಿಂದ ದೂರ ಸರಿದು ಕಾರ್ಯಕರ್ತರು ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಇಂದು ಫಲಿತಾಂಶ: ಮಂಗಳವಾರ ಮೈಸೂರಿನ ಮಹರಾಣಿ ಕಾಲೇಜಿನ ನೂತನ ಕಟ್ಟಡದಲ್ಲಿ ಮತ ಎಣಿಕೆ ನಡೆಯಲಿದೆ. ಕ್ಷೇತ್ರದ ಅಭಿವೃದ್ಧಿ ಮಾಡಿರುವ ಡಾ.ಎಚ್.ಸಿ.ಮಹದೇವಪ್ಪಅವರನ್ನು ಕ್ಷೇತ್ರದ ಮತದಾರರು ಕೈ ಹಿಡಿಯುವರೋ ಅಥವಾ ಕ್ಷೇತ್ರಕ್ಕೆ ಹೊಸ ಮುಖವಾಗಿರುವ ಜೆಡಿಎಸ್ ಅಭ್ಯರ್ಥಿ ಎಂ.ಅಶ್ವಿನ್‌ಕುಮಾರ್ ಅವರನ್ನು ಬೆಂಬಲಿಸಿ ಆಯ್ಕೆ ಮಾಡುವರೋ ಎಂಬ ಕುತೂಹಲ ಜನರದ್ದಾದರೆ,
ಅಭ್ಯರ್ಥಿಗಳಿಗೆ ಎಷ್ಟೇ ನಂಬಿಕೆ ಇದ್ದರೂ ಆತಂಕ ಅವರನ್ನು ಬಿಡುತ್ತಿಲ್ಲ. ಅಲ್ಲದೆ ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷಗಳ ನೇರ ಹಣಾಹಣಿಗೆ ಎರಡೂ ಪಕ್ಷಗಳ ಕಾರ್ಯಕರ್ತರ ನಡುವೆ ಲಕ್ಷಾಂತರ ರೂ.ಗಳ ಬೆಟ್ಟಿಂಗ್ ದಂಧೆ ಕೂಡ ಅರಂಭವಾಗಿದೆ. ಗೆದ್ದವರು ಗೆಲುವಿನ ನಗೆ ಬೀರಿದರೆ, ಸೋತವರು ಮನೆ ಸೇರುವುದು ಖಚಿತವಾಗಿದೆ.