ಆರೋಗ್ಯ ಸೇವೆಗಳನ್ನು ಇನ್ನಷ್ಟು ಬಲಪಡಿಸುವ ನಿಟ್ಟಿನಲ್ಲಿ ತುರ್ತು ಚಿಕಿತ್ಸಾ ಸೇವೆಗೆ ಉತ್ಕೃಷ್ಟತಾ ಕೇಂದ್ರಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಟೆಲಿಮೆಡಿಸಿನ್ ಸೇವೆ, ಶ್ರವಣ ದೋಷ ಮಕ್ಕಳಿಗೆ ಶಸ್ತ್ರಚಿಕಿತ್ಸೆ, ಉಚಿತ ಪೆರಿಟೋನಿಯಲ್ ಡಯಾಲಿಸಿಸ್ ಕೇಂದ್ರಗಳ ಸ್ಥಾಪನೆ, ನವಜಾತ ಶಿಶುಗಳ ಐಸಿಯು ಉನ್ನತೀಕರಣದಂಥ ಹಲವು ವಿನೂತನ ಕಾರ್ಯಕ್ರಮಗಳನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಘೋಷಿಸಿದ್ದಾರೆ.
ಉನ್ನತಮಟ್ಟದ ತುರ್ತು ವೈದ್ಯಕೀಯ ಸೇವೆ ಗಳಿಂದ ಸಾವಿರಾರು ಜೀವ ಉಳಿಸ ಬಹುದು. ಬಜೆಟ್‌ನಲ್ಲಿ 5 ಕೋಟಿ ಅನುದಾನ ನೀಡುವ ಮೂಲಕ ಬೆಂಗಳೂರಿನ ಕೆ.ಸಿ. ಜನರಲ್ ಆಸ್ಪತ್ರೆ ಸೇರಿದಂತೆ ರಾಜ್ಯದ ಐದು ಆಸ್ಪತ್ರೆಗಳ ತುರ್ತು ವೈದ್ಯಕೀಯ ಚಿಕಿತ್ಸಾ ವಿಭಾಗಗಳನ್ನು ಅಂತಾ ರಾಷ್ಟ್ರೀಯಮಟ್ಟಕ್ಕೆ ಮೇಲ್ದರ್ಜೆಗೇರಿಸಿ “ಉತ್ಕೃಷ್ಟತಾ ಕೇಂದ್ರ’ಗಳನ್ನಾಗಿ ಅಭಿವೃದ್ಧಿ ಪಡಿಸಲಾಗುತ್ತಿದೆ.
ಪಿಎಚ್‌ಸಿ ಟೆಲಿಮೆಡಿಸನ್: ಪ್ರಾಥಮಿಕ ಆರೋಗ್ಯ ಕೇಂದ್ರಗಳ ಅಭಿವೃದ್ಧಿಗೆ ಮುಂದಾ ಗಿದ್ದು, ಇತ್ತೀಚಿನ ತಂತ್ರಜ್ಞಾನವನ್ನು ಸದುಪಯೋಗ ಪಡಿಸಿಕೊಂಡು ಕೇಂದ್ರ ಸರ್ಕಾರದ ಸಹಯೋಗ ದಿಂದ ರಾಜ್ಯದ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಆರೋಗ್ಯ ಕ್ಷೇಮ ಕೇಂದ್ರಗಳಲ್ಲಿ ಟೆಲಿಮೆಡಿಸನ್ ಸೇವೆ ಆರಂಭಿಸಲು 19 ಕೋಟಿ ರೂ. ಅನುದಾನ ಘೋಷಿಸಿದ್ದು, ಹಂತ ಹಂತ ವಾಗಿ ಯೋಜನೆ ವಿಸ್ತರಿಸಲು ಮುಂದಾಗಿದೆ.
ಶ್ರವಣ ದೋಷ ಮುಕ್ತ ರಾಜ್ಯಗುರಿ: 6 ವರ್ಷ ದೊಳಗಿನ ಮಕRಳಲ್ಲಿ ಜನ್ಮಜಾತ ಕಿವುಡುತನವನ್ನು ಆರಂಭಿಕ ಹಂತದಲ್ಲಿಯೇ ಪತ್ತೆ ಹಚ್ಚಿ ಕಾಕ್ಲಿಯರ್ ಇಂಪ್ಲಾಂಟ್ ಶಸ್ತ್ರ ಚಿಕಿತ್ಸೆ ನಡೆಸುವ ಮೂಲಕ ಅಗತ್ಯವಿದ್ದರೆ ಶ್ರವಣಯಂತ್ರ ಒದಗಿಸಲಾಗುತ್ತದೆ. ಈ ಮೂಲಕ ಕರ್ನಾಟಕವನ್ನು “ಶ್ರವಣ ದೋಷ ಮುಕ್ತ” ರಾಜ್ಯ ಮಾಡಲು ಉದ್ದೇಶಿಸಲಾಗಿದೆ. ಇನ್ನು ಈ ಯೋಜನೆಗೆ 2020-21ನೇ ಸಾಲಿನಲ್ಲಿ 28 ಕೋಟಿ ರೂ. ಗಳನ್ನು ಒದಗಿಸಲಾಗುತ್ತಿದೆ.
ಐಸಿಯು-ಎನ್‌ಐಸಿಯು ಉನ್ನತೀಕರಣ: ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಐಸಿಯು ಹಾಗೂ ಎನ್‌ಐಸಿಯುಗಳನ್ನು ಉನ್ನತೀಕರಿಸಲು ಮುಂದಾಗಿದೆ. “ರಾಜ್ಯದಲ್ಲಿ ನವಜಾತ ಶಿಶುಗಳ ಪೋಷಣೆ ಗುಣಮಟ್ಟ ಹೆಚ್ಚಳಕ್ಕೆ 17 ವೈದ್ಯಕೀಯ ಕಾಲೇಜುಗಳ ಆಸ್ಪತ್ರೆಗಳಲ್ಲಿರುವ ನವಜಾತ ಶಿಶು ವಿನ ತೀವ್ರ ನಿಗಾ ಘಟಕಗಳನ್ನು ಹಂತ ಹಂತವಾಗಿ ಉನ್ನತೀಕರಿಸಲಾಗುತ್ತಿದೆ. ಮಂಗಳೂರಿನ ವಿಭಾ ಗೀಯ ಆಧುನಿಕ ಮಕ್ಕಳ ಆರೋಗ್ಯ ಕೇಂದ್ರದ (ಆರ್‌ಎಪಿಸಿಸಿ) ಮಾದರಿಯಲ್ಲಿ ರಾಜ್ಯದ ವಿವಿಧ ಭಾಗಗಳಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಇಂಥ ಕೇಂದ್ರಗಳನ್ನು ಸ್ಥಾಪಿಸಲು ಮುಂದಾಗಿದೆ.
ರಾಜ್ಯದ ಎಲ್ಲಾ ತಾಲೂಕು ಆಸ್ಪತ್ರೆಗಳಲ್ಲಿ ತೀವ್ರ ನಿಗಾ ಘಟಕಗಳನ್ನು (ಐಸಿಯು) ಸ್ಥಾಪಿಸಲಾಗಿದೆ. ಈ ಘಟಕಗಳನ್ನು ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ (ಪಿಪಿಪಿ) ಪರಿಣಾಮಕಾರಿಯಾಗಿ ನಿರ್ವಹಿಸಲು ಉದ್ದೇಶಿಸಲಾಗಿದೆ. ಈ ಪಿಪಿಪಿ ಮಾದರಿಯ ನಿರ್ವಹಣೆಯನ್ನು 2020-21ನೇ ಸಾಲಿನಲ್ಲಿ ಪ್ರಾಯೋಗಿಕವಾಗಿ ಎರಡು ಜಿಲ್ಲೆಗಳಲ್ಲಿ ಅನುಷ್ಠಾನಗೊಳಿಸಲು ನಿರ್ಧರಿಸಲಾಗಿದೆ.
ಹೊಸ ಆಸ್ಪತ್ರೆ: ಹಾವೇರಿ ಜಿಲ್ಲೆಯಲ್ಲಿ 20 ಕೋಟಿ ರೂ. ವೆಚ್ಚ ಮಾಡಿ 20 ಹಾಸಿಗೆಗಳ ಆಯುಷ್ ಸಂಯುಕ್ತ ಆಸ್ಪತ್ರೆ ಪ್ರಾರಂಭಿಸ ಲಾಗುವುದು ಎಂದು ಘೋಷಿಸಿದ್ದು, ಇದಕ್ಕಾಗಿ 2020-21ನೇ ಸಾಲಿನಲ್ಲಿ ಐದು ಕೋಟಿ ರೂ.ಗಳ ಅನುದಾನ ಒದಗಿಸಲಾಗುತ್ತಿದೆ. ಜತೆಗೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ಸರ್ಕಾರಿ ಆ
ಸ್ಪತ್ರೆಯನ್ನು 200 ಹಾಸಿಗೆಗಳ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಲಾಗುವುದು.
ಉಚಿತ ಡಯಾಲಿಸಿಸ್: ಬಡ ರೋಗಿಗಳಿಗೆ ನೆರವಾಗಲೆಂದು ರಾಜ್ಯದ ಆಯ್ದ ಐದು ಜಿಲ್ಲೆಗಳಲ್ಲಿ ಐದು ಕೋಟಿ ರೂ.ವೆಚ್ಚ ದಲ್ಲಿ ಉಚಿತ ಪೆರಿಟೋನಿಯಲ್ ಡಯಾಲಿಸಿಸ್ ಸೇವೆ ನೀಡಲು ನಿರ್ಧರಿಸಿದ್ದು, ಕಿಡ್ನಿ ವೈಫಲ್ಯತೆಯಿಂದ ಬಳಲುತ್ತಿರುವ ಬಿಪಿಎಲ್ ಕಾರ್ಡ್ ಹೊಂದಿರುವ ರೋಗಿಗಳಿಗೆ ಅನುಕೂಲವಾಗಲಿದೆ.